ಸೋಮಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸದಿದ್ದರೆ ಹೋರಾಟ: ಸಿಪಿಐ ಎಚ್ಚರಿಕೆ

Update: 2022-10-24 17:24 GMT

ಬೆಂಗಳೂರು, ಅ. 24: ‘ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಹಿಳೆ ಕೆನ್ನೆಗೆ ಬಾರಿಸಿದ ವಿ.ಸೋಮಣ್ಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದರೆ ಸಿಎಂ ಅವರೇ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ' ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇದೊಂದು ಅತ್ಯಂತ ಹೀನ ಕೃತ್ಯ. ಜವಾಬ್ದಾರಿ ಸ್ಥಾನದಲ್ಲಿರುವ ಹಿರಿಯ ಮಂತ್ರಿಯೊಬ್ಬರು ಕಾನೂನನ್ನು ಕೈಗೆತ್ತಿಕೊಂಡು ಸಮಸ್ಯೆ ಹೇಳಲು ಬಂದ ಮುಗ್ಧ ಮಹಿಳೆಗೆ ಕಪಾಳ ಮೋಕ್ಷ ಮಾಡಿದ್ದಲ್ಲದೆ, ಆ ಹೆಣ್ಣು ಮಗಳು ಪದೇ ಪದೇ ವೇದಿಕೆಯ ಮೇಲೆ ಬರುತ್ತಿದ್ದಳು. ತಾಯಿ ಎಷ್ಟು ಬಾರಿ ಬರುತ್ತೀಯ ಎಂದು ವಿಚಾರಿಸಿದೆ.ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ. ಆ ಹೆಣ್ಣು ಮಗಳಿಗೂ ಹಕ್ಕುಪತ್ರ ಕೊಡಿಸಿದ್ದೇನೆ' ಎಂದು ಪ್ರತಿಕ್ರಿಯೆ ನೀಡಿರುವ ಸಚಿವರಲ್ಲಿ ಯಾವುದೇ ಪಶ್ಚಾತ್ತಾಪ ಆಗಿಲ್ಲದಿರುವುದು ಸ್ಪಷ್ಟ' ಎಂದು ಟೀಕಿಸಿದ್ದಾರೆ.

‘ಈ ಹಿಂದೆಯೂ ಕೆಲಸದ ವೇಳೆಯಲ್ಲಿದ್ದ ಸರಕಾರಿ ನೌಕರರೊಡನೆ ಇದೇರೀತಿ ನಡೆದುಕೊಂಡಿರುವ ಬೇಕಾದಷ್ಟು ಉದಾಹರಣೆಗಳಿವೆ. ಇದೊಂದು ಅಧಿಕಾರ ಹಾಗೂ ಎಗ್ಗಿಲ್ಲದ ಹಣ ಬಲದಿಂದ ಉಂಟಾಗಿರುವ ದುರಹಂಕಾರದ ವರ್ತನೆ ಎಂದು ನಾವು ತಿಳಿಸಬಯಸುತ್ತೇವೆ ಹಾಗೂ ಇದು ಬಿಜೆಪಿಯ ಮಹಿಳಾ-ವಿರೋಧಿ ಧೋರಣೆಗೆ ಸಾಕ್ಷಿ. ಈ ಘಟನೆ ಬಗ್ಗೆ ಸಿಎಂ, ಸಂಪುಟ ಸಹೋದ್ಯೋಗಿಗಳು, ಅಲ್ಪಸಂಖ್ಯಾತರ ವಿರುದ್ಧ ಕೆಂಡ ಉಗುಳುವ ಬಿಜೆಪಿ ನಾಯಕರಾಗಲೀ ತುಟಿ ಹೊಲೆದು ಕೊಂಡಿರುವುದು ನಾಚಿಕೆಗೇಡಿನ ವಿಷಯ' ಎಂದು ಸಾತಿ ಸುಂದರೇಶ್ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News