ಜಾನುವಾರುಗಳನ್ನು ಉಳಿಸಿ ರೈತರನ್ನು ರಕ್ಷಿಸಿ

Update: 2022-10-25 05:54 GMT

ಜೀವನಾಧಾರವಾಗಿ ಹಾಲು ನೀಡುವ ರಾಸುಗಳು ಕಣ್ಣ ಮುಂದೆಯೇ ನರಳಿ ಸಾಯುವುದನ್ನು ಯಾವ ರೈತ ತಾನೇ ನೋಡಿ ಸಹಿಸಿಕೊಳ್ಳುವನು? ಬೇಸಾಯಕ್ಕೆ ಬೇಕಾದ ಅಮೃತ ಮಹಲ್, ಹಳ್ಳಿಕಾರ ತಳಿಗಳಲ್ಲಿ ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಹೆಚ್ಚು ಇರುತ್ತದೆ. ಆದರೆ ಅವೂ ಈಗ ಚರ್ಮಗಂಟು ರೋಗ ಬೇನೆಗೆ ತುತ್ತಾಗುತ್ತಿವೆ.

ನಮ್ಮದು ಕೃಷಿಪ್ರಧಾನ ದೇಶ. ನಮ್ಮ ಆರ್ಥಿಕತೆಗೆ ಗೋವು ಮೂಲಾಧಾರ. ದನದ ಮಂದೆಗಳು ಚಲಿಸುವ ಬ್ಯಾಂಕುಗಳು. ಹಿಂದೆ ಗೋ ಮಂದೆಗಳನ್ನು ವಶಪಡಿಸಿಕೊಳ್ಳಲು ಕಾಳಗಗಳೇ ಜರುಗುತ್ತಿದ್ದವು. ಗೋಗ್ರಹಣದಲ್ಲಿ ಹೋರಾಡಿ ಮಡಿದ ವೀರರಿಗೆ ವೀರಗಲ್ಲು ನೆಡುತ್ತಿದ್ದರು. ದುರ್ಯೋಧನನು ವಿರಾಟನ ಗೋಗ್ರಹಣ ಮಾಡಲು ಹೋಗಿ ಸೋತು ಅವಮಾನಗೊಂಡದ್ದು ಪುರಾಣದ ಕಥೆ. ಇವತ್ತಿಗೂ ಗೋವಿನ ಮಹತ್ವಕ್ಕೆ ಕುಂದಿಲ್ಲ. ಕೃಷಿ ಕೆಲಸಗಳಿಗೆ ಎಷ್ಟೇ ಯಂತ್ರೋಪಕರಣಗಳ ಆವಿಷ್ಕಾರ ಆಗಿದ್ದಾಗ್ಯೂ ಕೃಷಿಕರಿಗೆ ಎತ್ತುಗಳು ಬೇಕೇಬೇಕು. ಬೀಜ ಬಿತ್ತಲು ರಂಟೆ ಕುಂಟೆ ಹೊಡೆಯಲು ಎತ್ತುಗಳು ಬೇಕು. ಒಂದು ಜೋಡಿ ಎತ್ತಿರುವವನು ಬಿತ್ತನೆ ಕಾಲದಲ್ಲಿ ರೂ. 1,000ದಿಂದ 2,000ರವರೆಗೂ ದಿನದ ಬಾಡಿಗೆ ದುಡಿಯುತ್ತಾನೆ. ಹದ ಮೀರಿದರೆ ಬಿತ್ತನೆ ಮಾಡಲಾಗುವುದಿಲ್ಲ. ತೇವ ಹೆಚ್ಚಿದ್ದರೆ ಟ್ರಾಕ್ಟರ್ ಹೊಲದಲ್ಲಿ ಇಳಿಸುವಂತಿಲ್ಲ. ನೇಗಿಲು-ಕೂರಿಗೆಗೆೆ ಎತ್ತುಗಳು ಬೇಕೇಬೇಕು. ಆದ್ದರಿಂದಲೇ ‘ಎತ್ತಿಲ್ಲದವನಿಗೆ ಎದೆ ಇಲ್ಲ; ತುರು-ಕರು ಇಲ್ಲದ ಊರು ನರಕಭಾಜನವಕ್ಕು’ ಎಂಬ ನಾಣ್ಣುಡಿಗಳುಂಟು.

ಆದ್ದರಿಂದ ನಮ್ಮ ಪೂರ್ವಿಕರು ಬಹಳ ಜತನದಿಂದ ದನಕರುಗಳನ್ನು ಸಾಕುತ್ತಿದ್ದರು. ಕೃಷಿಗೆ, ಹಾಲಿಗೆ, ಕೊಟ್ಟಿಗೆ ಗೊಬ್ಬರಕ್ಕೆ, ಜಾತ್ರೆ-ಯಾತ್ರೆ ಗಾಡಿ ಬಂಡಿಗಳಿಗೆ ಹೀಗೆ ಎಲ್ಲದಕ್ಕೂ ಎತ್ತುಗಳು-ಹೋರಿಗಳು ಬೇಕಾಗಿದ್ದವು. ಅವುಗಳನ್ನು ಬಸವಣ್ಣನೆಂದು ಪೂಜಿಸುತ್ತಿದ್ದರು. ಬೇಸಾಯಕ್ಕೆ ಹೂಡುವಾಗ ಬಿಡುವಾಗ ಶರಣೆಂದು ಹೆಗಲಿಗೆ ನೊಗ ಏರಿಸುತ್ತಿದ್ದರು ಮತ್ತು ನೊಗ ಇಳಿಸುತ್ತಿದ್ದರು. ಹಿಂದೆಯೂ ಜಾನುವಾರುಗಳಿಗೆ ಹಲವಾರು ರೋಗ ರುಜಿನಗಳು, ಕಾಲುಬಾಯಿ ಜ್ವರ (ಗೆರಸಲು), ಚಪ್ಪೆಜಾಡ್ಯ ಮುಂತಾದ ಅಂಟು ರೋಗಗಳು ಬರುತ್ತಿದ್ದವು. ಈ ರೋಗಗಳಿಗೆ ಔಷಧೋಪಚಾರ ಮಾಡುವ ಸಾಂಪ್ರದಾಯಿಕ ನಾಟಿ ವೈದ್ಯರಿರುತ್ತಿದ್ದರು. ದನಕರುಗಳ ಕೊಟ್ಟಿಗೆಯಲ್ಲಿ ಮದ್ದು ಕಟ್ಟಿ, ಮದ್ದು ತಿನ್ನಿಸಿ, ಅಂಟು ಮುಂಟಾಗದಂತೆ ಇಡೀ ಊರಿಗೆ ಊರನ್ನೇ ಕ್ವಾರಂಟೈನ್‌ನಲಿಟ್ಟಿರುತ್ತಿದ್ದರು. ಬೇರೆಗ್ರಾಮದ ಜಾನುವಾರುಗಳಿಂದ ದೂರ ಇಡುತ್ತಿದ್ದರು. ವಾರ ಅಥವಾ ಎರಡು ವಾರ ಊರಲ್ಲಿ ಮಾಂಸದ ಅಡುಗೆ ಮಾಡದೆ ಜನರು ಶಾಖಾಹಾರ ಸೇವಿಸುತ್ತಿದ್ದರು. ಈಗ ನಂಬಲಾಗದಿದ್ದರೂ ಇದು ನಿಜ. ಯಾಕೆಂದರೆ ಕಳೆದ ಶತಮಾನದ ಪೂರ್ವಾರ್ಧದಲ್ಲಿ ನಮ್ಮ ಮನೆಯಲ್ಲಿಯೇ 15 ರಿಂದ 20 ದನಕರುಗಳೂ, ಹತ್ತಾರು ಎಮ್ಮೆಗಳೂ ಇದ್ದವು. ಈಗ ಗೋವಧೆ ನಿಷೇಧ ಕಾನೂನು ಜಾರಿಗೆ ಬಂದಮೇಲೆ ಗೋವುಗಳ ಪಾಡು ನಾಯಿ ಪಾಡಾಗಿದೆ. ರೈತರು ಮುದಿಯಾದ ಬರಡಾದ ಹಾಗೂ ಗಂಡು ಕರುಗಳನ್ನು ಸಾಕಲಾರದೆ ಬೀದಿಗೆ ಬಿಡುತ್ತಾರೆ. ಅವು ಬಿಡಾಡಿ ಗುಂಪುಗಳಾಗಿ ಅಲೆದಾಡುತ್ತಿರುತ್ತವೆ. ಉತ್ತರ ಭಾರತದ ನಗರಗಳಲ್ಲಿ ಪ್ರಯಾಣ ಮಾಡುವಾಗ ದನದ ಮಂದೆಗಳನ್ನು ತಟಾಯುವುದೇ ದೊಡ್ಡ ಕಷ್ಟ. ಅವುಗಳನ್ನು ಮುಟ್ಟಿದರೆ, ತಟ್ಟಿದರೆ, ತಾಗಿದರೆ ಅನಧಿಕೃತ ಗೋರಕ್ಷಕ ದಳದವರು ವಾಹನ ಚಾಲಕರಿಗೆ ಕಣ್ಣೀರು ಕರೆಸುತ್ತಾರೆ. ಎಲ್ಲೆಂದರಲ್ಲಿ ದನಗಳು ಗುಂಪು ಗುಂಪಾಗಿ ವಾಸಿಸುತ್ತಿವೆ. ಅಕ್ಕಪಕ್ಕದ ಹೊಲಗದ್ದೆಗಳಲ್ಲಿ ಕಟಾವಿಗೆ ಬಂದ ಬೆಳೆಗಳಿಗೆ ದಾಳಿಯಿಡುತ್ತಿವೆ. ಕಡೆಗೆ ಕಾನೂನು ಅಡಕತ್ತರಿಗೆ ಸಿಕ್ಕುವವನು ರೈತನೇ. ಬಂದ ಬೆಳೆಯನ್ನು ಅವುಗಳಿಗೆ ತಿನ್ನಲು ಬಿಟ್ಟು ಇವನು ಕಣ್ಣು ಬಾಯಿ ಬಿಡಬೇಕಾಗಿದೆ. ಅಟ್ಟಿದರೆ ಗೋರಕ್ಷಕರೆನಿಸಿಕೊಂಡವರ ಕಾಟ ಬೇರೆ.

ಪ್ರಸಕ್ತ ಏನಾಯಿತೆಂದರೆ ರಕ್ಷಕರಿಲ್ಲದ ಕೋಟೆಗೆ ವೈರಿಗಳು ನುಗ್ಗಿದಂತೆ ಈ ಬಿಡಾಡಿ ಗುಂಪಿನಲ್ಲಿ ಚರ್ಮದ ಗಂಟು ರೋಗ ಕಾಣಿಸಿಕೊಂಡಿತು. ಜನರಿಗೆ ಕೊರೋನ ವೈರಾಣು ಹಬ್ಬಿದಂತೆ ಈ ರೋಗದ ವೈರಾಣು ದನದ ಗುಂಪುಗಳಿಗೆ ಹಬ್ಬಿತು. ಗೋಶಾಲೆಯಲ್ಲಿ ಕೂಡ ಇನ್ನೂ ವೇಗವಾಗಿ ಹರಡಿತು. ಹಾಗಾಗಿ ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ, ಪಂಜಾಬಿನ ಗಡಿ ಭಾಗಗಳೂ ಸೇರಿದಂತೆ ಲಕ್ಷಾಂತರ ದನಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡು ಸಾರಾಸಗಟಾಗಿ ಸಾಯುತ್ತಿವೆ.

ಗೋವಧೆ ನಿಷೇಧ ಕಾಯ್ದೆ ಜಾರಿಗೆ ತಂದ ನಂತರ ಕಣ್ಣು ತೆರೆದು ನೋಡುವಷ್ಟರಲ್ಲಿ ಲಕ್ಷಾಂತರ ಗೋವುಗಳು ನರಳಿ ಸಾಯುತ್ತಿವೆ. ಈಗ ಚರ್ಮಗಂಟು ರೋಗ ದಕ್ಷಿಣದ ರಾಜ್ಯಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಸಾವಿರಾರು ಸತ್ತಿವೆ. ಕುರಿ ಮೇಕೆಗಳಿಗೆ ಕೊಡುತ್ತಿದ್ದ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ ಬೆಲೆ ಜಾಸ್ತಿ ಮತ್ತು ದೊರೆಯುವುದು ಸಹ ದುರ್ಲಭ. ಪರಿಸ್ಥಿತಿ ಇಂತಿರುವಾಗ ರಾಜ್ಯದ ಗೋಸಾಕಣೆದಾರರು ಸೂಕ್ತ ಔಷಧವನ್ನು ಉಚಿತವಾಗಿ ತ್ವರಿತಗತಿಯಲ್ಲಿ ಒದಗಿಸಿ ಅವುಗಳನ್ನು ಉಳಿಸಿಕೊಡಿ ಎಂದು ಸರಕಾರಕ್ಕೆ ಮೊರೆಯಿಡುತ್ತಿದ್ದಾರೆ. ಜೀವನಾಧಾರವಾಗಿ ಹಾಲು ನೀಡುವ ರಾಸುಗಳು ಕಣ್ಣ ಮುಂದೆಯೇ ನರಳಿ ಸಾಯುವುದನ್ನು ಯಾವ ರೈತ ತಾನೇ ನೋಡಿ ಸಹಿಸಿಕೊಳ್ಳುವನು? ಬೇಸಾಯಕ್ಕೆ ಬೇಕಾದ ಅಮೃತ ಮಹಲ್, ಹಳ್ಳಿಕಾರ ತಳಿಗಳಲ್ಲಿ ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಹೆಚ್ಚು ಇರುತ್ತದೆ. ಆದರೆ ಅವೂ ಈಗ ಚರ್ಮಗಂಟು ರೋಗ ಬೇನೆಗೆ ತುತ್ತಾಗುತ್ತಿವೆ. ಬೆಂಗಳೂರಿನಂತಹ ನಗರಗಳಲ್ಲೂ ಬೀದಿಗೆ ಬಿಟ್ಟಿರುವ ದನಗಳು ಕುಂಟುತ್ತಾ, ಜೊಲ್ಲು ಸುರಿಸುತ್ತಾ ನಿಂತಿರುತ್ತವೆ. ಕೆಲವು ಜಿಲ್ಲೆಗಳಲ್ಲಿ ನಾಟಿ ಔಷಧ ಮಾಡುತ್ತಿದ್ದಾರಂತೆ. ಆದರೆ ಇತ್ತೀಚೆಗೆ ನಿಷ್ಣಾತ ಸಾಂಪ್ರದಾಯಿಕ ನಾಟಿ ಔಷಧ ನೀಡುವ ತಲೆಗಳೇ ಕಾಣುತ್ತಿಲ್ಲ. ಸರಕಾರ ಮೃತ ರಾಸುಗಳಿಗೆ 20ರಿಂದ 30 ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ. ಆದರೆ ಪರಿಹಾರಕ್ಕೆ ಎಷ್ಟು ದಿನ ಕಾಯಬೇಕೊ! ಕಡೆಗೆ ಕೆಡುವವನು ರೈತನೇ. ಗೋವಧೆ ನಿಷೇಧ ಕಾಯ್ದೆ ಗೋವುಗಳ ಉಳಿವಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಗೋಶಾಲೆಗಳಿಂದಲಾದರೂ ಗೋವುಗಳ ಸಂರಕ್ಷಣೆ ಆದೀತೆ? ಅಲ್ಲಿರುವ ಸರಕಾರಿ ನೌಕರರು ತಾವೇ ದನಗಳನ್ನು ಸಾಕಿ ಮುತುವರ್ಜಿ ವಹಿಸುವ ರೈತನಂತೆ ಅವುಗಳನ್ನು ನೋಡಿಕೊಳ್ಳುವರೇ? ಇಲ್ಲವೆನ್ನಬೇಕಾಗುತ್ತದೆ. ಹಾಗಾಗಿ ಗೋವಧೆ ನಿಷೇಧ ಕಾಯ್ದೆಯೇ ಅವುಗಳ ನಾಶಕ್ಕೆ ನಾಂದಿ ಹಾಡುವಂತಾಗಿರುವುದು ದುರ್ದೈವ. ಕೃಷಿಗೆ ಎತ್ತುಗಳಿಲ್ಲ, ಹೈನುಗಾರಿಕೆಗೆ ಹಸುಗಳಿಲ್ಲ. ರೈತರ ಬದುಕು ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ. ಮನುಷ್ಯ ತಾನೊಂದು ನೆನೆದರೆ, ದೈವ ಇನ್ನೊಂದು ಬಗೆದೀತು! ಎಂಬಂತಾಗಿದೆ. ಏನಾದರಾಗಲಿ, ಸರಕಾರ ಸದ್ಯ ಜಾನುವಾರುಗಳನ್ನು ಉಳಿಸಿ ರೈತರನ್ನು ಕಾಪಾಡಬೇಕಾದದ್ದು ಅದರ ಆದ್ಯ ಕರ್ತವ್ಯ.

Writer - ಪ್ರೊ.ಶಿವರಾಮಯ್ಯಬೆಂಗಳೂರು

contributor

Editor - ಪ್ರೊ.ಶಿವರಾಮಯ್ಯಬೆಂಗಳೂರು

contributor

Similar News