ರಾಜಕೀಯಕ್ಕೆ ನಲುಗುತ್ತಿರುವ ಸೃಜನಶೀಲತೆ

Update: 2022-10-26 07:19 GMT

ಬೆಂಗಾಲಿ ಸಿನೆಮಾ ನಿರ್ದೇಶಕರಾದ ಬುದ್ಧದೇವ ದಾಸಗುಪ್ತ ಅವರು ತಮ್ಮ ಸಿನೆಮಾಗಳಿಗಾಗಿ ಐದು ಬಾರಿ ರಾಷ್ಟ್ರ ಪುರಸ್ಕಾರ ಪಡೆದವರು. ಸ್ವತಃ ಕವಿಯಾದ ದಾಸಗುಪ್ತ ಅವರು ಕೆಲವು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಆದ್ದರಿಂದಲೇ ಅವರ ಸಿನೆಮಾಗಳು ಕಾವ್ಯಾತ್ಮಕ ಪ್ರತಿಮೆಗಳಿಂದ ತುಂಬಿವೆ. ‘ದೂರತ್ವ’, ‘ಬಾಘ್ ಬಹಾದೂರ್’, ‘ಚರಾಚರ್ ಉತ್ತರಾ’ ಹಾಗೂ ‘ಕಾಲ್‌ಪುರುಷ್’-ದಾಸಗುಪ್ತ ಅವರ ನಿರ್ದೇಶನದಲ್ಲಿ ಬಂದ ಮುಖ್ಯ ಸಿನೆಮಾಗಳಾಗಿವೆ. ದಾಸಗುಪ್ತ ಅವರು ತಮ್ಮ 77ನೇ ವಯಸ್ಸಿನಲ್ಲಿ ಜೂನ್, 2021ರಲ್ಲಿ ತೀರಿಕೊಂಡರು. ಇದು 2017ರಲ್ಲಿ ಮಾಡಿದ ಅವರ ಸಂದರ್ಶನ

    ನಿಮ್ಮ ಮೊದಲ ಚಲನಚಿತ್ರ ದೂರತ್ವ ಬಂದದ್ದು 1978ರಲ್ಲಿ. ಚಲನಚಿತ್ರ ನಿರ್ಮಾಣದ ಈ ನಾಲ್ಕು ದಶಕಗಳ ಮುಗಿತಾಯದ ಹೊಸ್ತಿಲಲ್ಲಿದ್ದೀರಿ. ಈ ಪಯಣ ಹೇಗಿದೆ?

ಇದು ಸಿನೆಮಾ ಮತ್ತು ಕಾವ್ಯದೊಂದಿಗಿನ ಪಯಣ. ಈ ಪಯಣವೇ ನಾನು ಏನೆಂಬುದನ್ನು ಇವತ್ತು ತೋರಿಸಿದೆ. ನಾನು ಯಾವಾಗಲೂ ಸಿನೆಮಾಗೆ ಪ್ರಾಮಾಣಿಕವಾಗಿರಲು ಬಯಸಿದವ. ಕೆಲವೊಮ್ಮೆ ಕಡು ಕಷ್ಟಗಳು ಎದುರಾಗಿದ್ದವು. ಆದರೆ ನನಗೆ ಮುಂದೆ ಸಾಗಲು ಸಿನೆಮಾನೇ ಪ್ರೇರಣೆ ನೀಡಿತು. ಈಗ ನನ್ನ ಆರೋಗ್ಯ ಕ್ಷೀಣಿಸುತ್ತಿದೆ. ಆದರೆ ನನ್ನ ಮಾನಸಿಕ ಸಾಮರ್ಥ್ಯ ಸ್ಥಿರವಾಗಿದೆ. ಈಗಷ್ಟೆ ನನ್ನ ಮುಂದಿನ ಸಿನೆಮಾದ ಚರ್ಚೆಯನ್ನು ಮುಗಿಸಿಕೊಂಡು ಬಂದೆ. ಬೆಳಗಿನಿಂದ ಸಂಜೆಯ ವರೆಗೆ ಸರಿಯಾದ ಲೊಕೇಶನ್‌ಗಳನ್ನು ಹುಡುಕುವ ಪಯಣ ಈಗಲೂ ನಡೆಯುತ್ತಿದೆ. ಆಯಾಸವಾಗುತ್ತದೆ ಹೌದು. ಆದರೆ ದೂರತ್ವ ಸಿನೆಮಾದ ಚಿತ್ರೀಕರಣವನ್ನು ಆರಂಭಿಸಿದ್ದಾಗ ಇದ್ದ ಉತ್ಸಾಹವೇ ಈಗಲೂ ಅನುಭವಿಸಿದ್ದೇನೆ. 

ನಿಮ್ಮ ನಿರ್ದೇಶನದ ಸಿನೆಮಾಗಳು ಬಹುತೇಕವಾಗಿ ಪ್ರತಿಮೆ ಗಳ ಮೇಲೆ ಅವಲಂಬಿತವಾಗಿರುತ್ತವೆ. ಪ್ರತಿಮೆಗಳನ್ನು ಎಲ್ಲಿಂದ ಪಡೆಯುತ್ತೀರಿ? 

ನಾನು ಸಂಗೀತ, ಚಿತ್ರಕಲೆ ಮತ್ತು ಕಾವ್ಯಕ್ಕೆ ತುಂಬ ಋಣಿಯಾಗಿದ್ದೇನೆ. ನನ್ನ ತಾಯಿ ಪಿಯಾನೋ ನುಡಿಸುತ್ತಿದ್ದರು. ಆಕೆ ಹೇಳುತ್ತಿದ್ದಳು ‘‘ನನ್ನ ಕಡೆ ನೋಡಬೇಡ; ನಿನ್ನ ಕಣ್ಣುಗಳನ್ನು ಮುಚ್ಚಿಕೊಂಡು ಸಂಗೀತವನ್ನು ಆಲಿಸು’’. ಅದು ಪ್ರತಿಮೆ ಗಳು ತಮ್ಮಷ್ಟಕ್ಕೆ ತಾವೇ ಮನದಲ್ಲಿ ಮೂಡಿಕೊಂಡು ಸೂಚಿಸಲು ತೊಡಗುತ್ತಿದ್ದವು. ಈ ಪ್ರಕ್ರಿಯೆಯನ್ನು ಈಗಲೂ ಅನುಸರಿಸುತ್ತೇನೆ. ಈ ಪ್ರತಿಮೆಗಳನ್ನು ಯುಕ್ತಿಯಿಂದ ಕೈವಶಪಡಿಸಿಕೊಂಡಿದ್ದಲ್ಲ. ನಾನು ಅವುಗಳ ಮೇಲೆ ಏಕಾಗ್ರತೆ ಯಿಂದ ಧ್ಯಾನಿಸುತ್ತೇನೆ. ಆಗ ಪ್ರತಿಮೆಗಳು ಸಹಜವಾಗಿಯೇ ಮನದಲ್ಲಿ ಹುಟ್ಟಿಕೊಳ್ಳುತ್ತವೆ. ಆದರೆ ವರ್ಷಾನುಗಟ್ಟಲೇ ಅಭ್ಯಾಸದ ಪರಿಣಾಮವಾಗಿ ಅವು ನಿರಾಯಾಸವಾಗಿ ದಕ್ಕುತ್ತವೆ. ಬೇರೆಯವರ ಚಲನಚಿತ್ರಗಳಿಂದ ಯಾವುದೇ ಪ್ರತಿಮೆಗಳನ್ನು ನಾನು ಎರವಲು ಪಡೆದವನಲ್ಲ.

 ನಿಮಗೆ ಪ್ರೇರಣೆಗಳು ಏನು ಅಥವಾ ಯಾರು?

    ನಾನು ಜೀವನ, ನಿಸರ್ಗ, ಧ್ವನಿ, ಚಿತ್ರಕಲೆ ಮತ್ತು ಸಾಹಿತ್ಯದಿಂದ ಪ್ರೇರಣೆ ಪಡೆದವ. ಸಿನೆಮಾಗಳ ವೀಕ್ಷಣೆಯಿಂದಲೂ ಪ್ರೇರಣೆ ಪಡೆಯುತ್ತೇನೆ. ನನಗೆ ಚಾಪ್ಲಿನ್ ನಂತರದಲ್ಲಿ ಲೂಯಿಸ್ ಬುನ್ಯುಯೆಲ್ ಬಹಳ ಇಷ್ಟದ ಸಿನೆಮಾ ನಿರ್ದೇಶಕ. ಬುನ್ಯುಯೆಲ್ ತರುವಾಯ ಆಂಡ್ರೆಯಿ ಟರ್ಕೊವ್‌ಸ್ಕಿ ಮತ್ತು ಕೆಲವರಿದ್ದಾರೆ.

ನೀವು ಅಂದಾಜು ಎರಡು ವರ್ಷಕ್ಕೆ ಒಂದರಂತೆ, ಪ್ರತೀ ಹತ್ತು ವರ್ಷಕ್ಕೆ 5-6 ಸಿನೆಮಾಗಳನ್ನು ಮಾಡಿದ್ದೀರಿ. ಈ ಸಿನೆಮಾ ನಡಿಗೆ ನಿಮಗೆ ಸಂತೋಷ ಕೊಟ್ಟಿದೆಯೇ?

    ನಾನು ತುಂಬ ವೇಗವಾಗಿ ಸಿನೆಮಾ ಮಾಡಲಾರೆ. ನನಗೆ ನನ್ನದೇ ಏಕಾಂತ ಬೇಕು. ನಾನು ನನ್ನೊಂದಿಗೆ ಇರಲು ಬಯಸುವವ. ನಮ್ಮ ಮನಸ್ಸುಗಳು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಮಣ್ಣಿನ ಮಡಕೆಗಳಿದ್ದಂತೆ. ನಿಮ್ಮ ನಿರೀಕ್ಷೆಗೆ ತಕ್ಕ ಹಾಗೆ ಕುಡಿಯಲು ಅದನ್ನು ತುಂಬಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಅದು ಬಹಳ ಬೇಗ ಖಾಲಿಯಾಗುತ್ತದೆ.

ನೀವು 17 ಚಲನಚಿತ್ರಗಳನ್ನು ಮಾಡಿದ್ದೀರಿ. ತಾವು ಏನನ್ನು ಸಾಧಿಸ ಬೇಕೆಂದು ಆಲೋಚನೆ ಮಾಡಿದ್ರೊ ಆ ಸಾಧನೆಗೆ ಸಮೀಪಿಸಿದ್ದು ಯಾವ ಚಲನಚಿತ್ರದಲ್ಲಿ?

 ನನ್ನ ನೆಚ್ಚಿನ ಚಿತ್ರ ಯಾವುದೆಂದು ಹೇಳುವುದು ಕಷ್ಟವೇ. ನಿಮ್ಮ ಒತ್ತಾಯಕ್ಕೆ ಮಣಿದು ಹೇಳುವುದಾದರೆ, ‘ಬಾಗ್ ಬಹಾದ್ದೂರ’, ‘ಉತ್ತರಾ’, ‘ಕಾಲ್‌ಪುರುಷ್’ ಹಾಗೂ ಇನ್ನೂ ಕೆಲವು ಸಿನೆಮಾಗಳು ನನಗೆ ಸಂತೋಷ ನೀಡಿವೆ. ಕೆಲವೊಮ್ಮೆ ನನ್ನ ಚರಾಚರ ಸಿನೆಮಾದ ಕೇಂದ್ರ ಪಾತ್ರ ಲಕ್ಕನೊಂದಿಗೆ ನಾನು ಸಮೀಕರಿಸಿಕೊಳ್ಳುತ್ತೇನೆ. ನಾನು ಸೃಷ್ಟಿಸುವ ಪ್ರತಿಯೊಂದು ಪಾತ್ರದಲ್ಲಿ ನನ್ನದು ಏನಾದರೂ ಸೇರಿಕೊಂಡಿರುತ್ತದೆ. ನಾನು ಸಿನೆಮಾಗಳನ್ನು ಮಾಡುವಾಗ ನನ್ನ ಬಾಲ್ಯಕ್ಕೆ ಮರಳುತ್ತೇನೆ ಮತ್ತು ಭೂತಕಾಲದಿಂದ ಪ್ರತಿಮೆಗಳನ್ನು ಪಡೆದುಕೊಳ್ಳುತ್ತೇನೆ. ನೀವು ಅವುಗಳನ್ನು ಆತ್ಮಕಥನ ಎಂದು ಕರೆಯಲಾಗದು. ಆದರೆ ಪ್ರತಿಯೊಂದು ಸಿನೆಮಾಗಳಲ್ಲಿ ನಾನಿದ್ದೇನೆ. 

ನಿಮ್ಮ ರಾಜಕೀಯ ದೂರದೃಷ್ಟಿ ಏನಾಗಿತ್ತು?

ನನ್ನ ರಾಜಕೀಯ ಆದರ್ಶಗಳು ನನ್ನ ಸಿನೆಮಾ ಮತ್ತು ಕಾವ್ಯದಲ್ಲಿ ಪ್ರತಿಫಲಿತವಾಗಿವೆ. ಪ್ರತಿಯೊಂದು ರಾಜಕೀಯ ನಂಬಿಕೆ ಇಸಂನೊಂದಿಗೆ ತಳಕು ಹಾಕಿಕೊಂಡಿರುತ್ತದೆ. ನಾನು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡವನಲ್ಲ ಅಥವಾ ಯಾವುದೇ ನಿರ್ದಿಷ್ಟ ಇಸಂನ್ನು ಅನುಸರಿಸಿದವನೂ ಅಲ್ಲ.

ನನಗೆ ನೋವಿನ ಸಂಗತಿಯೆಂದರೆ, ಈಗ ಭಾರತದಲ್ಲಿ ಸೃಜನ ಶೀಲ ವ್ಯಕ್ತಿಗಳು ಬೇರೆ ಬೇರೆ ರಾಜಕೀಯ ಪಕ್ಷಗಳೊಂದಿಗೆ ಬದ್ಧರಾಗುತ್ತಿರುವುದು. ಇದು ಅಪಾಯಕಾರಿ ಅಂತ ಅನ್ನಿಸುತ್ತದೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲೂ ಅದರ ವಿರುದ್ಧದ ಧ್ವನಿಗಳು ಕೇಳಿ ಬಂದಿರುವುದು ನಿಮಗೆ ತಿಳಿದಿದೆ. ದುರದೃಷ್ಟವಶಾತ್, ಈಗ ಇಂತಹದ್ದು ಅಪರೂಪವಾಗುತ್ತಿದೆ. 

ನಿಮ್ಮ ಕೆಲಸದೊಂದಿಗೆ ಎಂದಾದರು ರಾಜಿ ಮಾಡಿಕೊಂಡಿದ್ದೀರಾ?

 ನನ್ನ ಕೆಲಸದೊಂದಿಗೆ ನಾನು ಎಂದಿಗೂ ರಾಜಿ ಮಾಡಿಕೊಂಡವನಲ್ಲ. ಇವತ್ತಿನ ಪಶ್ಚಿಮ ಬಂಗಾಲವನ್ನು ನೀವು ಗಮನಿಸಿ ದರೆ, ನಿಮಗೆ ತಿಳಿಯುತ್ತದೆ. ಹೆಚ್ಚಿನ ಸೃಜನಶೀಲ ಜನರು ಸಣ್ಣಪುಟ್ಟ ಲಾಭಗಳಿಗಾಗಿ ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ನಾನು ಇಂತಹದ್ದನ್ನು ಒಪ್ಪಲಾರೆ ಮತ್ತು ಇಂತಹದ್ದರಲ್ಲಿ ಭಾಗಿಯಾಗಲಾರೆ. ನನ್ನನ್ನು ಪ್ರಧಾನ ಧಾರೆಯಿಂದ ಅಂಚಿಗೆ ತಳ್ಳಲು ನಿರಂತರವಾದ ಬೆದರಿಕೆಗಳು ಬಂದಿವೆ. ಇದು ನನಗೆ ಹಾನಿಯನ್ನೂ ಮಾಡಿದೆ ಮತ್ತು ಒಂಟಿಯನ್ನಾಗಿಸಿದೆ. 

ಇತ್ತೀಚಿನ ವರ್ಷಗಳಲ್ಲಿ ನಿಮ್ಮ ಚಲನಚಿತ್ರಗಳು ಭಾರತದಲ್ಲಿ ಸೀಮಿತ ಹಂಚಿಕೆಯನ್ನು ಹೊಂದಿವೆ. ಇದರ ಬಗ್ಗೆ ನಿಮಗೆ ಖೇದವಿಲ್ಲವೇ?

ಸಿನೆಮಾ ಕಾಲ್ನಡಿಯೊಂದಿಗೆ ಆರಂಭವಾಗಿದ್ದು. ನಾವು ತೊಂಭತ್ತರ-ದಶಕದಲ್ಲಿ ನೋಡುತ್ತಿದ್ದ ಸಿನೆಮಾಗಳು ಇಂದು ಅನೇಕರಿಗೆ ಅರ್ಥಹೀನವಾಗಿವೆ. ಇಂದಿನ ಸಿನೆಮಾಗಳಲ್ಲಿ ಕಾಣುವ ಬಹಳಷ್ಟು ಪ್ರತಿಮೆಗಳು ಪೊಳ್ಳಾಗಿವೆ; ಅವು ನನ್ನನ್ನು ಉತ್ತೇಜಿಸುವುದಿಲ್ಲ. ನಾನು ಒಂದು ವೇಳೆ ಬೇರೆ ರೀತಿಯಲ್ಲಿ ಸಿನೆಮಾಗಳನ್ನು ಮಾಡಿದ್ದರೆ ನನಗೆ ಖಂಡಿತವಾಗಿ ತೃಪ್ತಿ ಎನಿಸುತ್ತಿರಲಿಲ್ಲ. ಆದ್ದರಿಂದ ನಾನು ರಾಜಿಗೆ ಒಳಗಾಗಲಿಲ್ಲ. ನನಗೆ ಭಾರತದಲ್ಲಿ ಪ್ರೇಕ್ಷಕರಿದ್ದಾರೆ ಮತ್ತು ಅವರಿಗಾಗಿ ನಾನು ಕಾಳಜಿವಹಿಸುತ್ತೇನೆ. 

ನೀವು ಸಿನೆಮಾ ನಿರ್ದೇಶನ ಆರಂಭಿಸಿದಾಗ ಫಿಲ್ಮ್ ಸೊಸೈಟಿಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದವು. ಇಂದು ಅವು ಪ್ರಸಕ್ತವೇ?

 ಭಾರತದಲ್ಲಿ ಫಿಲ್ಮ್ ಸೊಸೈಟಿಗಳ ಸಮಸ್ಯೆಯೆಂದರೆ, ಅವು ಅಪ್ರಸಕ್ತವಾಗುತ್ತಿರುವ ಬಗ್ಗೆ ಅವರಿಗೆ ತಿಳಿಯುತ್ತಿಲ್ಲ. ಆದರೆ 60-70ತ್ತರ ದಶಕಗಳಲ್ಲಿ ಸಿನೆಮಾ ಪ್ರದರ್ಶನಗಳ ಮೂಲಕ ಪ್ರೇಕ್ಷಕರನ್ನು ನಿರ್ಮಾಣ ಮಾಡಿರುವುದರಲ್ಲಿ ಫಿಲ್ಮ್ ಸೊಸೈಟಿಗಳು ಬಹಳ ದೊಡ್ಡ ಪಾತ್ರವಹಿಸಿವೆ. ಹೊಸ ಶತಮಾನದ ಹೊಸ್ತಿಲಲ್ಲಿ, ಭಾರತದಲ್ಲಿ ಅಂತರ್‌ರಾಷ್ಟ್ರೀಯ ಸಿನೆಮಾಗಳು ಉಪಲಬ್ಧವಾಗದ ಕಾಲದಲ್ಲಿ ಅವುಗಳ ಮಹತ್ವ ಅಲ್ಲಗಳೆಯಲಾಗದು. ಆದರೆ ನನ್ನ ಆತಂಕವೆಂದರೆ, ಸಿನೆಮಾ ಪ್ರಚಾರದ ಹೆಸರಿನಲ್ಲಿ ಫಿಲ್ಮ್ ಸೊಸೈಟಿಗಳ ಜನರು ಗುಪ್ತವಾಗಿ ತಮ್ಮನ್ನು ಪ್ರಚಾರ ಮಾಡಿಕೊಳ್ಳುತ್ತಿರುವುದು. 

ನಿಮ್ಮ ಇತ್ತೀಚಿನ ಚಲನಚಿತ್ರ ಟೋಪೆ ಎಂದರೆ ಪ್ರಲೋಭನೆ ಎಂದರ್ಥ. ಇದು ಏನನ್ನು ಪ್ರತಿನಿಧಿಸುತ್ತದೆ?

 ನನಗನಿಸುತ್ತೆ, ವ್ಯವಸ್ಥೆಯೇ ಸಾಮಾನ್ಯ ಜನರ ಮುಂದೆ ಆಮಿಷಗಳನ್ನು ತೆರೆದಿಡುತ್ತದೆ. ಅದು ಜನರನ್ನು ಸೆಳೆಯುವಂತೆ ಮಾಡುತ್ತದೆ. ಇದು ಎಲ್ಲೆಲ್ಲೂ ವ್ಯಾಪಕವಾಗಿ ಹರಡಿದೆ. ಇದಕ್ಕೆ ನಿದರ್ಶನಗಳೆಂದರೆ ಜಾಹೀರಾತುಗಳು ಮತ್ತು ರಾಜಕೀಯ. ಇಂತಹ ಕೆಡುಗಾಲನ್ನು ನಾನು ಹಿಂದೆಂದೂ ಕಂಡಿರಲಿಲ್ಲ. ಒಂದು ಬಗೆಯಲ್ಲಿ ಇದು ನನ್ನ ರಾಜಕೀಯ ನಿಲುವು ಎಂದು ನೀವು ಕರೆಯಬಹುದು. 

ನಿಮ್ಮ ಭವಿಷ್ಯದ ಯೋಜನೆಗಳೇನು?

ನನ್ನ ಮುಂದಿನ ಸಿನೆಮಾ ಅಕ್ಟೋಬರ್‌ನಿಂದ ಶೂಟಿಂಗ್ ಆರಂಭಿಸಲು ಯೋಜಿಸುತ್ತಿದ್ದೇನೆ. ಅದಕ್ಕೆ ಉರೊಜಾಜ್ ಎಂದು ಹೆಸರಿಟ್ಟಿದ್ದೇನೆ. ಅದರರ್ಥ ವಿಮಾನ.

 ಇದು ನನ್ನ ಸ್ವಂತ ಕತೆ. ಇದು ವ್ಯಕ್ತಿಯೊಬ್ಬ ವ್ಯವಸ್ಥೆಯ ವಿರುದ್ಧ ಬಂಡೇಳುವ ಕನಸುಗಳ ಸುತ್ತ ನಡೆಯುವ ಕತೆ. ಆದರೆ ಅದೇ ಅವನನ್ನು ದಮನಿಸಲು ಯತ್ನಿಸುತ್ತದೆ.

(ಕೃಪೆ: ದಿ ಹಿಂದು, 06-08-17)

Writer - ಅನು: ಸುಭಾಷ್ ರಾಜಮಾನೆ

contributor

Editor - ಅನು: ಸುಭಾಷ್ ರಾಜಮಾನೆ

contributor

Similar News