ಪ್ರತಿಭಾಕುಳಾಯಿಗೆ ನಿಂದನೆ ಪ್ರಕರಣ: ಆರೋಪಿ ಸಂಘಪರಿವಾರ ಕಾರ್ಯಕರ್ತ ಕೆ.ಆರ್.ಶೆಟ್ಟಿ ನ್ಯಾಯಾಲಯಕ್ಕೆ ಶರಣು
‘ಕಹಳೆ ನ್ಯೂಸ್’ನ ಶ್ಯಾಮ ಸುದರ್ಶನ ಭಟ್ ಶೋಧಕ್ಕಾಗಿ 4 ಪೊಲೀಸ್ ತಂಡಗಳ ರಚನೆ
ಮಂಗಳೂರು : ಟೋಲ್‌ಗೇಟ್ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸಾಮಾಜಿಕ ಹೋರಾಟಗಾರ್ತಿ ಪ್ರತಿಭಾ ಕುಳಾಯಿಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕಾರಕ ಪೋಸ್ಟರ್ ಹಾಕಿದ್ದ ಆರೋಪ ಎದುರಿಸುತ್ತಿದ್ದ ಅಡ್ಯಾರ್ ಪದವು ನಿವಾಸಿ, ಬಜರಂಗ ದಳದ ಕಾರ್ಯಕರ್ತ ಕೆ.ಆರ್.ಶೆಟ್ಟಿ ಗುರುವಾರ ಜಿಲ್ಲಾ ನ್ಯಾಯಾಲಯಕ್ಕೆ ವಕೀಲರ ಮೂಲಕ ಶರಣಾಗಿದ್ದಾನೆ. ನ್ಯಾಯಾಲಯವು ಆರೋಪಿಗೆ ಒಂದು ದಿನದ ಪೊಲೀಸ್ ಕಸ್ಟಡಿ ನೀಡಿದೆ.
ಪ್ರಕರಣ ವಿವರ: ಪ್ರತಿಭಾ ಕುಳಾಯಿ ಅವರ ಫೋಟೊವನ್ನು ಆರೋಪಿ ಕೆ. ಆರ್.ಶೆಟ್ಟಿ ಅಡ್ಯಾರ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಹಾಕಿ ‘ಇದಕ್ಕೊಂದು ಒಳ್ಳೆಯ ಟೈಟಲ್ ಕೊಡಿ ಫ್ರೆಂಡ್ಸ್’ ಎಂದು ಕಮೆಂಟ್ ಹಾಕಿದ್ದ. ಇದಕ್ಕೆ ಪ್ರತಿಕ್ರಿಯೆ ನೀಡಿದ ‘ಕಹಳೆ ನ್ಯೂಸ್’ ವೆಬ್‌ಸೈಟ್‌ನ ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಎಂಬಾತ ಹಾಕಿದ್ದ ಪೋಸ್ಟ್ ಮಾನಹಾನಿಕರ ಎಂಬ ಆರೋಪ ವ್ಯಕ್ತವಾಗಿತ್ತು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಸಂದೇಶ ಹಾಕಿದ್ದ ಆರೋಪಿಗಳನ್ನು ಬಂಧಿಸುವಂತೆ ಅ.22ರಂದು ಪ್ರತಿಭಾ ಕುಳಾಯಿಯು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್‌ರನ್ನು ಭೇಟಿ ಮಾಡಿ ದೂರು ನೀಡಿದ್ದರು. ಅದರಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಾಕಿದ್ದ ಕೆ.ಆರ್. ಶೆಟ್ಟಿ ಗುರುವಾರ ನ್ಯಾಯಾಲಯಕ್ಕೆ ಶರಣಾಗಿದ್ದರೆ, ಮತ್ತೊಬ್ಬ ಆರೋಪಿ ಶ್ಯಾಮ ಸುದರ್ಶನ್ ಭಟ್ ತಲೆಮರೆಸಿಕೊಂಡಿದ್ದಾನೆ. ಆತನಿಗೆ 4 ತಂಡಗಳನ್ನು ರಚಿಸಿ ಶೋಧ ನಡೆಸಲಾಗುತ್ತಿದೆ ಎಂದು ಮಹಿಳಾ ಠಾಣಾ ಇನ್‌ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ.