ಮಾಜಿ ಸಚಿವ ಎಚ್.ಕೆ. ಪಾಟೀಲ್ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು
ಬೆಂಗಳೂರು, ಅ. 27: 'ಮಾಜಿ ಸಚಿವ ಎಚ್.ಕೆ. ಪಾಟೀಲ್ ಹಾಗೂ ಖಾಸಗಿ ಕಂಪೆನಿಗಳು ಸರಕಾರದ ಆದೇಶವನ್ನು ದುರ್ಬಳಕೆ ಮಾಡಿಕೊಂಡು ರಾಜ್ಯ ಸರಕಾರಕ್ಕೆ ಪ್ರತಿವರ್ಷ 60 ಕೋಟಿ ರೂ.ಗಳನ್ನು ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ' ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 1ನೆ ಏಪ್ರಿಲ್ 2013 ಮತ್ತು 31ನೆ ಮಾರ್ಚ್ 2018ರ ನಡುವೆ, ಕಾರ್ಯಾರಂಭ ಮಾಡಿದ ಸೌರ ವಿದ್ಯುತ್ ಸ್ಥಾವರಗಳಿಗೆ ಹತ್ತು ವರ್ಷಗಳ ಅವಧಿಯವರೆಗೂ ವೀಲಿಂಗ್ ಮತ್ತು ಬ್ಯಾಂಕಿಂಗ್ ಶುಲ್ಕಗಳು ಮತ್ತು ಕ್ರಾಸ್ ಸಬ್ಸಿಡಿ ಸೇರಿ ಇತರೆ ಪಾವತಿಯಿಂದ ವಿನಾಯಿತಿಯನ್ನು ನೀಡಲಾಗುತ್ತದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶವನ್ನು ನೀಡಿದೆ ಎಂದು ಮಾಹಿತಿ ನೀಡಿದರು.
ಆದರೆ ನಿಗದಿತ ದಿನಾಂಕ ಮುಗಿದ ಬಳಿಕ ಕಾರ್ಯಾರಂಭ ಮಾಡಿದ ಸೌರ ವಿದ್ಯುತ್ ಸ್ಥಾವರಗಳಿಗೂ ವಿನಾಯಿತಿ ನೀಡುವ ಮೂಲಕ ಅವ್ಯವಹಾರವನ್ನು ನಡೆಸಲಾಗಿದೆ. ಇದರಿಂದ ಸರಕಾರಕ್ಕೆ ವರ್ಷಕ್ಕೆ 60 ಕೋಟಿ ರೂ.ನಂತೆ ಹತ್ತು ವರ್ಷಕ್ಕೆ 600 ಕೋಟಿ ನಷ್ಟವಾಗುತ್ತದೆ ಎಂದು ಅವರು ಹೇಳಿದರು.
ಸ್ಥಾವರಗಳನ್ನು ಸ್ಥಾಪಿಸಲು ಕೃಷಿ ಭೂಮಿಯನ್ನು ಕೈಗಾರಿಕಾ ಭೂಮಿಯನ್ನಾಗಿ ಪರಿವರ್ತಿಸಬೇಕು. ಆದರೆ 135 ಮೆಗಾವ್ಯಾಟ್ ಸೋಲಾರ್ ಪ್ಲಾಂಟ್‍ಗೆ ಬಳಸಲಾದ ಒಟ್ಟು 691 ಎಕರೆಗಳಲ್ಲಿ, 222 ಎಕರೆಗಳನ್ನು ಕೈಗಾರಿಕಾ(ಕೃಷಿಯೇತರ) ಕ್ಷೇತ್ರಕ್ಕೆ ಪರಿವರ್ತಿಸಲಾಗಿಲ್ಲ ಎಂದು ಆರೋಪಿಸಿದರು.
ಅಂಪಸ್ ಕೆ.ಎನ್. ಸೋಲಾರ್ ಪ್ರೈ. ಲಿಮಿಟೆಡ್‍ನೊಂದಿಗೆ ಕೈ ಜೋಡಿಸಿ, ಮಾಜಿ ಸಚಿವ ಎಚ್.ಕೆ.ಪಾಟೀಲ್ 100 ಮೆಗಾವ್ಯಾಟ್ ಮತ್ತು 35 ಮೆಗಾವ್ಯಾಟ್ ಎರಡು ಹಂತಗಳಲ್ಲಿ ಸೌರ ವಿದ್ಯುತ್ ಸ್ಥಾವರಕ್ಕೆ ಕಮಿಷನಿಂಗ್ ಪ್ರಮಾಣಪತ್ರಗಳನ್ನು ಅಕ್ರಮವಾಗಿ ಪಡೆದು ರಾಜ್ಯ ಸರಕಾರಕ್ಕೆ ವಂಚನೆಯನ್ನು ಮಾಡಿದ್ದಾರೆ ಎಂದರು.
ಈಗಾಗಲೇ 270 ಕೋಟಿ ರೂಪಾಯಿಗಳ ನಷ್ಟವನ್ನು ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ದಂಡವನ್ನು ವಸೂಲಿ ಮಾಡುತ್ತಿಲ್ಲ. ಹಾಗಾಗಿ ಲೋಕಾಯುಕ್ತದಲ್ಲಿ ದೂರನ್ನು ದಾಖಲಿಸಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.