×
Ad

ವಲಯವಾರು ಗುರುತಿಗೆ ಅನುಕೂಲವಾಗುವಂತೆ ಆಟೋ ರಿಕ್ಷಾಗಳಿಗೆ ಬಣ್ಣ ಬಳಿಯಲು ದ.ಕ. ಡಿಸಿ ಸೂಚನೆ

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ

Update: 2022-10-27 21:05 IST

ಮಂಗಳೂರು, ಅ.27: ನಗರ ವ್ಯಾಪ್ತಿ (ವಲಯ-1)ಯ ಆಟೊ ರಿಕ್ಷಾಗಳಿಗೆ ಹಳದಿ ಮತ್ತು ಕಪ್ಪು ಹಾಗೂ ಗ್ರಾಮಾಂತರ (ವಲಯ-2) ದಲ್ಲಿ ಬರುವ ಆಟೊ ರಿಕ್ಷಾಗಳಿಗೆ ಹಸಿರು ಮತ್ತು ಹಳದಿ ಬಣ್ಣ  ಬಳಿಯಲು ದ.ಕ. ಜಿಲ್ಲಾಧಿಕಾರಿ ಡಾ. ಕುಮಾರ್ ಸೂಚನೆ ನೀಡಿದರು.

ದ.ಕ. ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಗುರುವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಲಯ 1ರಲ್ಲಿ ಬರುವ ಎಲ್ಲಾ ಮಾದರಿಯ ಆಟೊ ರಿಕ್ಷಾಗಳು ಹಳದಿ ಹಾಗೂ ಕಪ್ಪು ಮತ್ತು ವಲಯ 2ರಲ್ಲಿ ಬರುವ ಎಲ್ಲಾ ಮಾದರಿಯ ಆಟೊ ರಿಕ್ಷಾಗಳು (ಇಲೆಕ್ಟ್ರಿಕಲ್, ಸಿಎನ್‌ಜಿ, ಡೀಸೆಲ್, ಪೆಟ್ರೋಲ್) ಕಡ್ಡಾಯವಾಗಿ ಹಸಿರು ಹಾಗೂ ಹಳದಿ ಬಣ್ಣವನ್ನು ಹಾಕಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಸ್ಟಿಕ್ಕರ್ ಅಳವಡಿಸಿಕೊಳ್ಳುವಂತಿಲ್ಲ, ಬಣ್ಣ ಹಾಕಿಸಿಕೊಳ್ಳಲು ಕಾಲಾವಕಾಶ ನೀಡಲಾಗುವುದು. ಈ ಮೂಲಕ ಆಟೊ ರಿಕ್ಷಾಗಳು ತಮ್ಮ ವ್ಯಾಪ್ತಿಯನ್ನು ನಿರ್ಧರಿಸಿಕೊಳ್ಳಲು ಅನುಕೂಲವಾಗಲಿದೆ. ಅಲ್ಲದೆ ಗೊಂದಲಗಳಿಗೆ ತೆರೆ ಎಳೆಯಬಹುದಾಗಿದೆ ಎಂದು ಡಾ.ಕುಮಾರ್ ಹೇಳಿದರು.

ಆರೋಗ್ಯಕ್ಕೆ ಸಂಬಂಧಿಸಿದಂತೆ ತುರ್ತು ಸಂದರ್ಭದಲ್ಲಿ ಸೇವೆ ಸಲ್ಲಿಸುವ ಆಟೊ ರಿಕ್ಷಾಗಳು ಮಾತ್ರ ವ್ಯಾಪ್ತಿಯನ್ನು ಮೀರಬಹುದಾಗಿದೆ. ಇಂತಹ ಸಂದರ್ಭಗಳಲ್ಲಿ ಅಗತ್ಯ ದಾಖಲಾತಿ ಇಟ್ಟುಕೊಳ್ಳಬೇಕು. ಅದನ್ನ ಹೊರತು ಪಡಿಸಿ ತಮ್ಮ ರಹದಾರಿಯ ವ್ಯಾಪ್ತಿ ಮೀರಿದರೆ, ಸಂಬಂಧಿಸಿದ ಪ್ರಾಧಿಕಾರದವರು ಕ್ರಮಕೈಗೊಳ್ಳುವರು, ಒಂದೊಮ್ಮೆ ಇಂಧನ ಅಥವಾ ಎಲ್‌ಪಿಜಿ ಭರಿಸಿಕೊಂಡು ಹಿಂತಿರುಗುವಾಗ ದಂಡ ವಿಧಿಸಿದ್ದಲ್ಲಿ ಆ ಬಗ್ಗೆ ಪಟ್ಟಿ ಒದಗಿಸುವಂತೆ ಡಾ.ಕುಮಾರ್ ಸೂಚಿಸಿದರು.

ಆಟೊ ರಿಕ್ಷಾ ದರ ಪರಿಷ್ಕರಣಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಆಟೋರಿಕ್ಷಾ ಸಂಘ ಹಾಗೂ ಜಿಲ್ಲಾಡಳಿತದ ನಡುವೆ ಸಹಮತ ಬಾರದಿರುವ ಕಾರಣ ಮುಂದಿನ ಸಭೆಯಲ್ಲಿ ದರ ಪರಿಷ್ಕರಣೆಯ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್, ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ, ರಿಕ್ಷಾ ಚಾಲಕ-ಮಾಲಕರ ಒಕ್ಕೂಟದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಅಬೂಬಕರ್ ಸುರತ್ಕಲ್, ಗೌರವಾಧ್ಯಕ್ಷ ವಿಷ್ಣುಮೂರ್ತಿ, ಕಾರ್ಯದರ್ಶಿ ಭರತ್ ಕುಮಾರ್, ಸಲಹೆಗಾರರಾದ ಮುಹಮ್ಮದ್ ಇರ್ಫಾನ್,  ಅರುಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Similar News