ಸಮಾಜ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಲೇಖಕನೊಬ್ಬ ಕೊಡುವ ಗೌರವ

Update: 2022-10-28 09:52 GMT

ದಕ್ಷಿಣ ಭಾರತದ ಜಾನಪದದಲ್ಲಿ ಅವಳಿ ವೀರರು ಅಲ್ಲಲ್ಲಿ ಕಂಡು ಬರುತ್ತಾರೆ. ಈ ಅವಳಿಗಳಲ್ಲಿ ಹಿರಿಯವನು ಶಾಂತ ಸ್ವರೂಪಿಯಾಗಿದ್ದು ಯಾವುದೇ ನಿರ್ಣಯಗಳನ್ನು ಕೈಗೊಳ್ಳುವಾಗ ಬಹಳ ಯೋಚಿಸಿ ತನ್ನ ತೀರ್ಮಾನವನ್ನು ಪ್ರಕಟಿಸುತ್ತಾನೆ. ಕಿರಿಯವನು ಇದಕ್ಕೆ ವಿರುದ್ಧವಾಗಿ ಸದಾ ದುಡುಕು ಸ್ವಭಾವದವನಾಗಿದ್ದು ಕ್ರಿಯೆಗಳು ಬಹಳ ವೇಗವಾಗಿ ಮುಂದುವರಿಯುವಂತೆ ಮಾಡುತ್ತಾನೆ. 

ಈ ಎರಡೂ ಶಕ್ತಿಗಳು ಸೇರಿದರೇನೇ ಸಮುದಾಯಕ್ಕೆ ಪ್ರಯೋಜನ. ಆಧುನಿಕ ಕಾಲ ಘಟ್ಟದಲ್ಲಿ ಈ ಸಾಂಪ್ರದಾಯಿಕ ಜಾನಪದ ಪರಿಕಲ್ಪನೆಯು ಮುಂದುವರಿದುಕೊಂಡು ಬರುತ್ತಿದೆಯೋ ಎಂಬ ಭಾವ ಬರುವಂತೆ, ಕಳೆದ ಸುಮಾರು 40 ವರ್ಷಗಳಿಂದ ಕೃಷ್ಣ ಮೂಲ್ಯ ಮತ್ತು ಶೀನ ಶೆಟ್ಟರು ಅವಳಿಗಳ ಹಾಗೆ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಹಿರಿಯವರಾದ ಕೃಷ್ಣ ಮೂಲ್ಯರಿಗೆ ‘ತಾಳ್ಮೆ, ಸಹನೆ ಹೆಚ್ಚು, ಸಮಾಧಾನಿ, ಮೃದು ಧ್ವನಿ, ಎಷ್ಟೋಬಾರಿ ಶೀನ ಶೆಟ್ಟರ ವೇಗಕ್ಕೆ ಕೃಷ್ಣಣ್ಣನ ಮಧುರ ಧ್ವನಿ ಕಡಿವಾಣ ಹಾಕುತ್ತದೆ’. ಕಿರಿಯವರಾದ ಶೀನ ಶೆಟ್ಟರಿಗೆ ‘ಬೇಗ ಕೋಪ, ಮಾತು ನಿಷ್ಠುರತೆ, ಹಿಡಿದ ಕೆಲಸ ಕೂಡಲೇ ಮುಗಿಯಬೇಕು ಎಂಬ ಹಠ’ (ಪುಟ 221).

ಪರಸ್ಪರ ವಿರೋಧ ಅನ್ನಬಹುದಾದ ಗುಣಗಳೆರಡು ಸಂಗಮಿಸಿದಾಗ ಸಮಾಜಕ್ಕೆ ಎಷ್ಟೊಂದು ಉಪಯೋಗ ಆಗಬಹುದೆಂಬುದನ್ನು ಕೃಷಿ, ಪರಿಸರ, ಊರು, ಜನಗಳ ಬಗ್ಗೆ ನಿರಂತರವಾಗಿ ಬರೆಯುತ್ತಲೇ ಬರುತ್ತಿರುವ ನರೇಂದ್ರ ರೈ ದೇರ್ಲ ಅವರು ‘ಅದ್ವಿತೀಯ’ ಹೆಸರಿನ ಪುಸ್ತಕದಲ್ಲಿ ವಿವರಿಸಿದ್ದಾರೆ. ಒಂದು ರೀತಿಯಿಂದ ಇದು ಸಮಾಜ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಲೇಖಕನೊಬ್ಬ ಕೊಡುವ ಗೌರವವೂ ಹೌದು. ಹಾಗೆ ನೋಡಿದರೆ, ಪುಸ್ತಕವು ಕೃಷ್ಣ ಮತ್ತು ಶೀನರನ್ನು ಎಲ್ಲಿಯೂ ವೈಯಕ್ತಿಕವಾಗಿ ವೈಭವೀಕರಿಸುವುದೇ ಇಲ್ಲ. 

ಅದರ ಬದಲು ಸಮಾಜ ಸೇವಕರನ್ನು ‘ಆಂದೋಲನ ಜೀವಿಗಳೆಂದು’ ಕರೆದು ಹಾಸ್ಯ ಮಾಡುವ ಮಟ್ಟಕ್ಕೆ ಜನರು ಇಳಿದಿರುವಾಗ, ಸಮಾಜ ಕಾರ್ಯದ ಮಹತ್ವವನ್ನು ಆಧಾರ ಸಮೇತ ಓದುಗರ ಮುಂದಿಡುತ್ತದೆ. ಪುಸ್ತಕದ ಕೇಂದ್ರದಲ್ಲಿ ಕೃಷ್ಣ ಮೂಲ್ಯ ಮತ್ತು ಶೀನ ಶೆಟ್ಟಿ ಇರುವುದು ಹೌದಾದರೂ ಅವರ ಸುತ್ತ ಸೋಲಿಗರು, ಕೊರಗರು, ಮಹಿಳೆಯರು ಮತ್ತಿತರರು ಇದ್ದಾರೆ. ದಿಡುಪೆ, ಕೊಳ್ಳೇಗಾಲ, ಮಂಗಳೂರು, ಮುಡಿಪು, ಉಡುಪಿ ಮೊದಲಾದ ಊರುಗಳೂ ಇವೆ. 

ಧರ್ಮಸ್ಥಳದಲ್ಲಿ ಓದು ಮುಗಿಸಿದ ಕೃಷ್ಣ, ಶೀನರು ಅಲ್ಲಿಗೆ ಹತ್ತಿರವಾದ ದಿಡುಪೆ ಎಂಬ ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ತಮ್ಮ ಕೆಲಸಗಳನ್ನು ಆರಂಭಿಸುತ್ತಾರೆ. ಜನರ ವಿಶ್ವಾಸ ಗಳಿಸಿ, ಆ ಊರಿನ ಕೃಷಿ ಅಭಿವೃದ್ಧಿ, ರಸ್ತೆ, ಶಾಲೆ, ವಿದ್ಯುತ್ ಸಂಪರ್ಕ, ಅಂಚೆ ಕಚೇರಿ ಇತ್ಯಾದಿ ಕ್ಷೇತ್ರಗಳಲ್ಲಿ ಮಹತ್ವದ ಸುಧಾರಣೆಗಳನ್ನು ತರುತ್ತಾರೆ. ಮುಂದೆ ಅವರು ಕೆಲಸ ಮಾಡಿದ್ದು ಕೊಳ್ಳೆಗಾಲದ ಮಹದೇಶ್ವರ ಬೆಟ್ಟದಲ್ಲಿನ ಸೋಲಿಗರ ನಡುವೆ. ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತರಾಗಿರುವ ಸೋಲಿಗರು ಆರ್ಥಿಕವಾಗಿ ಬಹಳ ದುರ್ಬಲರು. 

ಇದನ್ನು ಗಮನಿಸಿದ ಈ ಇಬ್ಬರು ಸೋಲಿಗ ಸಮುದಾಯಕ್ಕೆ ನೀರು ಒದಗಿಸಲು, ಔಷಧಿ ದೊರೆಯಲು ಮತ್ತು ಅಕ್ಷರ ನೀಡಲು ಪ್ರಾಮಾಣಿಕವಾಗಿ ದುಡಿಯುತ್ತಾರೆ. 1990ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಸಾಕ್ಷರತಾ ಆಂದೋಲನ ನಡೆದಾಗ ಶೀನ, ಕೃಷ್ಣರು ಅದರಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡದ್ದನ್ನು ನಾನೇ ಕಂಡಿದ್ದೇನೆ. ‘ಬಡವರಲ್ಲಿ ಅಕ್ಷರ ಇರದಿರಬಹುದು, ಆದರೆ ಸಾಂಸ್ಕೃತಿಕ ಶ್ರೀಮಂತಿಕೆಗೆ ಕೊರತೆ ಇಲ್ಲ’ ಎಂದು ನಂಬಿದ್ದ ಅವರು ಸಾಕ್ಷರತೆಯ ಜೊತೆಗೆ, ಸಂವಿಧಾನದ ಅರಿವು, ಸ್ವಚ್ಛತೆಯ ಕುರಿತ ತಿಳಿವಳಿಕೆ, ನೀರಿನ ಮಹತ್ವ, ಮಹಿಳಾ ಜಾಗೃತಿ, ಕೊರಗರ ಅಭಿವೃದ್ಧಿ ಇತ್ಯಾದಿ ಕ್ಷೇತ್ರಗಳಲ್ಲಿ ಗಂಭೀರವಾಗಿ ಕೆಲಸ ಮಾಡಿದ್ದರು. 

ಕೊರೋನ ಕಾಲದಲ್ಲಿಯೂ ಜೀವದ ಹಂಗು ತೊರೆದು ಜನರ ನಡುವೆ ದುಡಿದ ಇವರ ಕೆಲಸಗಳಿಂದ ಪ್ರಯೋಜನ ಪಡೆದ ಬಡಿಲ ಹುಸೇನ್, ಶಾಂತಿ ಕಾರ್ಕಳ, ಸೆಮಿಮಾ, ಯಶೋದಾ ಲಾಯಿಲ, ಕಮಲ ಮೊಂಟೆಪದವು, ಸೇಸಮ್ಮ ಮೊದಲಾದವರ ಪ್ರಾತಿನಿಧಿಕ ಮಾತುಗಳೂ ಪುಸ್ತಕದಲ್ಲಿವೆ. ಶೀನ- ಕೃಷ್ಣರು ಯಾರೊಡನೆಯಾದರೂ ಜಗಳ ಮಾಡಿದ್ದನ್ನು ಕಂಡವರಿಲ್ಲ. ಅವರಿವರ ಬಗ್ಗೆ ಅವರು ಗೊಣಗಿಕೊಂಡದ್ದೂ ಇಲ್ಲ. ಹಾಗಾಗಿಯೇ ಅವರಿಗೆ ಜನರ ನಡುವೆ ಸುದೀರ್ಘ ಕಾಲ ಕೆಲಸ ಮಾಡಲು ಸಾಧ್ಯವಾಗಿದೆ. ‘‘ನೀವು ಎಲ್ಲಾದರೂ ಒಂದೆಡೆಯಲ್ಲಿ ಗಟ್ಟಿಯಾಗಿ ಕೆಲಸ ಮಾಡಬಹುದಿತ್ತಲ್ಲಾ?’’ ಎಂದು ಕೇಳಿದವರಿಗೆ ಅವರು ಕೊಡುವ ಉತ್ತರವೆಂದರೆ- ‘‘ಅಲ್ಲಿಯೇ ಉಳಿದಿದ್ದರೆ ನಮಗೀಗ ತುಂಬಾ ಭೌತಿಕ ಸುಖ ಇರುತ್ತಿತ್ತು. ಬೇರೆ ಬೇರೆ ಕಡೆಗಳಿಂದ ಫಂಡ್ ತರಿಸುವುದು, ಯೋಜನೆ ರೂಪಿಸುವುದು, ಖರ್ಚು ಮಾಡುವುದು..ಇಷ್ಟೇ. ಕಚೇರಿ, ಕಂಪ್ಯೂಟರ್ ಹಣದ ಲೆಕ್ಕಾಚಾರ, ಓಡಾಡಲು ವಾಹನ, ಹೀಗೆ ಅದೊಂದು ರೀತಿ ಸುಖ, ಆದರೆ ಈ ಬಗೆಯ ಸೇವೆಯಲ್ಲಿ ನಮಗೆ ನಂಬಿಕೆಯಿಲ್ಲ’’( ಪು : 84).

ಹೀಗೆ ತಾವು ಕಟ್ಟಿದ್ದನ್ನು ತಾವೇ ಒಡೆಯುತ್ತಾ, ಎಲ್ಲಿಯೂ ಸಾಂಸ್ಥೀಕರಣಗೊಳ್ಳದೆ ಇಂದಿನವರೆಗೆ ಸಮಾಜ ಕಾರ್ಯದಲ್ಲಿ ನಿರತರಾದ ಈ ಅವಳಿಗಳಂತಹ ಗೆಳೆಯರ ಬಗ್ಗೆ ಲೇಖಕ ದೇರ್ಲರು ಹೀಗೆ ಹೇಳುತ್ತಾರೆ-‘‘ಪರ ಸುಖದಲ್ಲಿಯೇ ಸುಖಕಾಣುತ್ತಿರುವ ಶೀನ ಶೆಟ್ಟಿ ಮತ್ತು ಕೃಷ್ಣಮೂಲ್ಯರನ್ನು ಇಬ್ಬರು ವ್ಯಕ್ತಿಗಳೆನ್ನುವುದಕ್ಕಿಂತ ಸಮಾಜ ಹಿತಕ್ಕಾಗಿ ಎರಡು ವ್ಯಕ್ತಿಗಳು ಸಮಾಗಮಗೊಂಡ ಒಂದು ಶಕ್ತಿ ಎನ್ನಬಹುದು. ಸಮಷ್ಟಿಯ ಹಿತ ಬಯಸಿದ ಅಪೂರ್ವ ಶಕ್ತಿ ಅದು’’ ( ಪುಟ 11).

ಸಾಮಾಜಿಕ ಬದ್ಧತೆಯುಳ್ಳವರು ಧ್ಯಾನಿಸಿ ಓದಬೇಕಾದ ಪುಸ್ತಕವಿದು.

ಕೃತಿ: ಅದ್ವಿತೀಯ
(ಶೀನ ಶೆಟ್ಟಿ-ಕೃಷ್ಣ ಮೂಲ್ಯ ಸೇವಾ ಕಥನ)
ಲೇಖಕರು: ನರೆಂದ್ರ ರೈ ದೇರ್ಲ
ಪ್ರಕಾಶಕರು: ಆಕೃತಿ ಆಶಯ ಪಬ್ಲಿಕೇಶನ್ಸ್, ಮಂಗಳೂರು
ಬೆಲೆ: 300 ರೂ.
ಫೋನ್: 0824-2972002

Similar News