ಒಂದೇ ಕಾರ್ಡಿನಲ್ಲಿ ಎಚ್ ಡಿಕೆ, ಸಿದ್ದರಾಮಯ್ಯ ಭಾವಚಿತ್ರ: KPCC ಶಿಸ್ತು ಪಾಲನಾ ಸಮಿತಿಗೆ ದೂರು
ಹೆಸರು ದುರ್ಬಳಕೆ ಮಾಡಿ ಬಿಬಿಎಂಪಿಯಲ್ಲಿ ಗುತ್ತಿಗೆ ಪಡೆದ ಆರೋಪ
ಬೆಂಗಳೂರು, ಅ.28: ಕಾಂಗ್ರೆಸ್ ಪಕ್ಷದ ಮುಖಂಡರ ಹೆಸರು ದುರ್ಬಳಕೆ ಮಾಡಿ ಬಿಬಿಎಂಪಿಯಲ್ಲಿ ಗುತ್ತಿಗೆ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರ ವಿರುದ್ಧ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರಿಗೆ ದೂರು ಸಲ್ಲಿಸಲಾಗಿದೆ.
ಬಸವೇಶ್ವರ ನಗರ ನಿವಾಸಿ ಹಾಗೂ ಗುತ್ತಿಗೆದಾರ ಈ.ರಾಮಕೃಷ್ಣಯ್ಯ ವಿರುದ್ಧ ಸೀನಪ್ಪ ಎಂಬುವರು ದೂರು ಸಲ್ಲಿಸಿದ್ದು, ಒಂದೇ ವಿಸಿಟಿಂಗ್ ಕಾರ್ಡ್‍ನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ರಾಜಕೀಯ ಮುಖಂಡರ ಹೆಸರು, ಭಾವಚಿತ್ರಗಳನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ರಾಮಕೃಷ್ಣಯ್ಯ ರಾಜಕೀಯ ನಾಯಕರ ಹೆಸರಿನಲ್ಲಿ ಬಿಬಿಎಂಪಿಯಲ್ಲಿ ಗುತ್ತಿಗೆ ಕಾಮಗಾರಿಗಳನ್ನು ಸಹ ಪಡೆದಿದ್ದು, ಅದರಲ್ಲೂ ಪಾಲಿಕೆ ಅರಣ್ಯ ವಿಭಾಗದ ಟೆಂಡರ್‍ನಲ್ಲಿಯೂ ಅಕ್ರಮದ ಆರೋಪವಿದೆ. ಈ ಸಂಬಂಧ ಪಕ್ಷದ ನಾಯಕರು ಕ್ರಮ ಕೈಗೊಳ್ಳುವಂತೆ ಉಲ್ಲೇಖಿಸಲಾಗಿದೆ.
ಈ ಹಿಂದೆಯೂ ಮಾಜಿ ಸಚಿವರೂ ಆದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ಹೆಸರು ಹೇಳಿಕೊಂಡು ವಂಚನೆಗೈದ ಆರೋಪದಲ್ಲಿ ಅವರನ್ನು ಬಸವೇಶ್ವರ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದರು.
ಇದಾದ ಬಳಿಕ ಸ್ಥಳೀಯ ನಾಯಕರ ಲೇಟರ್ ಹೆಡ್ ದುರ್ಬಳಕೆ ಆರೋಪದಲ್ಲೂ ಇವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಇದನ್ನೇ ಕಾಯಕ ಮಾಡಿಕೊಂಡಿರುವ ಈತ ಸ್ಥಳೀಯ ಅಧಿಕಾರಿಗಳಿಗೆ ಬೆದರಿಕೆ ಗುತ್ತಿಗೆಕಾಮಗಾರಿಗಳನ್ನು ಪಡೆದುಕೊಂಡಿದ್ದಾನೆ. ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕಾಗಿದೆ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.