ಸ್ತನ ಕ್ಯಾನ್ಸರ್ ಜಾಗ್ರತಿ ಮಾಸಾಚರಣೆ; ಆ್ಯಸ್ಟರ್ ಸಿಎಂಐ ಆಸ್ಪತ್ರೆಯಿಂದ ಪಿಂಕ್ ಬೈಕ್ ರ‍್ಯಾಲಿ

Update: 2022-10-29 11:03 GMT

ಬೆಂಗಳೂರು,ಅ.29: ನಗರದ ಖ್ಯಾತ ಆಸ್ಪತ್ರೆಗಳಲ್ಲೊಂದಾಗಿರುವ ಆ್ಯಸ್ಟರ್ ಸಿಎಂಐ ಹಾಸ್ಪಿಟಲ್ (Aster CMI Hospital) ಸ್ತನ ಕ್ಯಾನ್ಸರ್ ಜಾಗ್ರತಿ ಮಾಸಾಚರಣೆಯ ಅಂಗವಾಗಿ ಸಮುದಾಯದ ಮೇಲೆ ಸ್ತನ ಕ್ಯಾನ್ಸರ್ ನ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಹೆಚ್ಚಿಸಲು ಪಿಂಕ್ ಬೈಕ್ ರ‍್ಯಾಲಿಯನ್ನು ಆಯೋಜಿಸಿತ್ತು. 60ಕ್ಕೂ ಅಧಿಕ ಬೈಕರ್ ಗಳು ಪಾಲ್ಗೊಂಡಿದ್ದ ರ‍್ಯಾಲಿಯು ಹೆಬ್ಬಾಳದಲ್ಲಿರುವ ಆ್ಯಸ್ಟರ್ ಸಿಎಂಐ ಆಸ್ಪತ್ರೆಯಿಂದ ಆರಂಭಗೊಂಡು ಕಬ್ಬನ್ ಪಾರ್ಕ್ ಮತ್ತು ಕ್ವೀನ್ಸ್ ಸ್ಟಾಚ್ಯೂ ಮೂಲಕ ಸಾಗಿ ಆಸ್ಪತ್ರೆಗೆ ಮರಳಿತು.

ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಆ್ಯಸ್ಟರ್ ಸಿಎಂಐ ಆಸ್ಪತ್ರೆಯ ಸಿಇಒ ಎಸ್.ರಮೇಶಕುಮಾರ ಅವರು, ‘ಸ್ತನ ಕ್ಯಾನ್ಸರ್ ತಡೆಗಟ್ಟುವ ತಂತ್ರಗಳು ಮತ್ತು ರೋಗಿಗಳ ಜೀವ ಉಳಿಸುವಲ್ಲಿ ವರದಾನವಾಗಿರುವ ತಾಂತ್ರಿಕ ಬೆಳವಣಿಗೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ರ್ಯಾಲಿಯನ್ನು ಆಯೋಜಿಸಲಾಗಿದೆ. ಈ ಜಾಗ್ರತಿ ಅಭಿಯಾನಗಳು ನಮ್ಮ ಮೇಲಿನ ಸಾಮಾಜಿಕ ಹೊಣೆಗಾರಿಕೆಗಳಾಗಿವೆ ಎಂದು ನಾವು ಭಾವಿಸಿದ್ದೇವೆ. ಸ್ತನ ಕ್ಯಾನ್ಸರ್ ನಂತಹ ಸಾಮಾಜಿಕ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಟವು ಸಾರ್ವಜನಿಕ ಜಾಗ್ರತಿಯನ್ನು ಹೆಚ್ಚಾಗಿ ಅವಲಂಬಿಸಿದೆ' ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆ್ಯಸ್ಟರ್ ಡಿಎಂ ಹೆಲ್ತ್ ಕೇರ್ ನ ವೈದ್ಯಕೀಯ ಸಲಹಾ ಮಂಡಳಿಯ ಅಧ್ಯಕ್ಷ ಪ್ರೊ.ಡಾ.ಸೋಮಶೇಖರ ಎಸ್.ಪಿ.ಅವರು, 'ಪ್ರತಿ ವರ್ಷ 23 ಲಕ್ಷಕ್ಕೂ ಅಧಿಕ ಮಹಿಳೆಯರನ್ನು ಸ್ತನ ಕ್ಯಾನ್ಸರ್ ಬಾಧಿಸುತ್ತಿದೆ. ಜಾಗತಿಕ ಕ್ಯಾನ್ಸರ್ ಪ್ರಕರಣಗಳಲ್ಲಿ ಸ್ತನ ಕ್ಯಾನ್ಸರ್ನ ಪಾಲು ಸುಮಾರು ಶೇ.12ರಷ್ಟಿದೆ. ಸ್ತನ ಕ್ಯಾನ್ಸರ್ ಆನುವಂಶಿಕ ಸ್ಥಿತಿಗಿಂತ ಹೆಚ್ಚಾಗಿ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಯುವ ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಪ್ರಕರಣಗಳಿಗೆ ಒತ್ತಡ,ಕೆಟ್ಟ ಆಹಾರ ಪದ್ಧತಿ,ಜಡ ಜೀವನಶೈಲಿ ಹಾಗೂ ವಾಯು ಮತ್ತು ಜಲಮಾಲಿನ್ಯಗಳು ಪ್ರಮುಖ ಕಾರಣಗಳಾಗಿವೆ' ಎಂದು ತಿಳಿಸಿದರು.

ಜಾಗ್ರತಿಯನ್ನು ಹೆಚ್ಚಿಸುವ ಸಲುವಾಗಿ ಪಿಂಕ್ ರಿಬ್ಬನ್ ಧರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸೆಲ್ಫಿ ಪೋಸ್ಟ್ ಮಾಡುವುದು ಸೇರಿದಂತೆ ಹಲವಾರು ಆಂತರಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ವೈದ್ಯರ ಶಿಫಾರಸಿನ ಮೇರೆಗೆ ಉಚಿತ ಸಮಾಲೋಚನೆ ಮತ್ತು ಸ್ಕ್ರೀನಿಂಗ್ ಕಾರ್ಯಕ್ರಮವನ್ನು ನಡೆಸಲಾಗಿದೆ. ಪಿಂಕ್ ರಿಬ್ಬನ್ ಅಭಿಯಾನದಲ್ಲಿ ಆಸ್ಪತ್ರೆಯು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಕೈಜೋಡಿಸಿದೆ. ಆ್ಯಸ್ಟರ್ ಸಿಎಂಐ ಆಸ್ಪತ್ರೆಯು ಭಾರತವು ಸೇರಿದಂತೆ ಏಳು ದೇಶಗಳಲ್ಲಿ 27 ಆಸ್ಪತ್ರೆಗಳು,118 ಕ್ಲಿನಿಕ್ ಗಳು,323 ಫಾರ್ಮಸಿಗಳು,66 ಲ್ಯಾಬ್ ಗಳು ಮತ್ತು ರೋಗಿ ಅನುಭವ ಕೇಂದ್ರಗಳನ್ನು ಹೊಂದಿದೆ.

Similar News