ಸಚಿವ ಸುಧಾಕರ್ ಕಡೆಯಿಂದಲೂ ಪತ್ರಕರ್ತರಿಗೆ ಲಂಚ ರೂಪದ ಉಡುಗೊರೆ: ಕಾಂಗ್ರೆಸ್ ಆರೋಪ

''ಸ್ಕಾಚ್, ವಾಚ್, ಗೋಲ್ಡ್ ಕಾಯಿನ್ ಅಲ್ಲದೆ ಬಾಕ್ಸ್ ನಲ್ಲಿ ಇನ್ನೂ ಏನೇನಿದೆ?''

Update: 2022-10-29 12:32 GMT

ಬೆಂಗಳೂರು, ಅ. 29: ‘ಕೇಂದ್ರೀಯ ಭದ್ರತಾ ಪಡೆಗಳ ನೇಮಕಾತಿಗೆ ಕೇವಲ ಹಿಂದಿ ಇಂಗ್ಲಿಷ್ ನಲ್ಲಿ ಮಾತ್ರ ಪರೀಕ್ಷೆ ಬರೆಯುವ ಅವಕಾಶ ನೀಡಿದ್ದಕ್ಕೆ ಬಿಜೆಪಿ ಸರಕಾರ ಆಕ್ಷೇಪ ಎತ್ತಲಿಲ್ಲವೇಕೆ?ಕನ್ನಡಿಗರ ಹಿತ ಬೇಕಿಲ್ಲವೇ? ಕನ್ನಡಿಗರಿಗೆ ಉದ್ಯೋಗ ಬೇಡವೇ?' ಎಂದು ಕಾಂಗ್ರೆಸ್ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಬಿಜೆಪಿಯ 25 ಸಂಸದರಿಗೆ ಮೋದಿ ಗುಲಾಮಗಿರಿ ಮುಖ್ಯವೋ, ಕನ್ನಡಿಗರ ಹಿತ ಮುಖ್ಯವೋ?' ಎಂದು ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದೆ.

‘ಪಿಎಸ್‍ಐ ಅಕ್ರಮ ನಡೆದಾಗ, ಕೊಳವೆಬಾವಿ ಅಕ್ರಮ ನಡೆದಾಗ,ಕೆಪಿಟಿಸಿಎಲ್ ನೇಮಕಾತಿ ಅಕ್ರಮ ನಡೆದಾಗ, ಗಂಗಾ ಕಲ್ಯಾಣ ಹಗರಣ ನಡೆದಾಗ,ಕಾಂಗ್ರೆಸ್‍ನದ್ದು ಗಾಳಿಯಲ್ಲಿ ಗುಂಡು ಎಂದಿತ್ತು ಬಿಜೆಪಿ. ನಂತರ ಎಲ್ಲದರ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ, ಇದೂ ಬಯಲಾಗಲಿದೆ.ಗುಂಡು ಗಾಳಿಯನ್ನೇ ಸೀಳಿಕೊಂಡು ಮುನ್ನುಗ್ಗುತ್ತದೆ ನೆನಪಿರಲಿ. ಸರಕಾರದ ಲಂಚದ ಬಾಕ್ಸ್ ಬೇಡ, ನಮ್ಮ ಲಂಚ್ ಬಾಕ್ಸ್ ಅಷ್ಟೇ ಸಾಕು ಎನ್ನುವ ಪ್ರಾಮಾಣಿಕ ಪತ್ರಕರ್ತರಿಂದ ಸರಕಾರದ ಮಹಾ ಅಕ್ರಮ ಹೊರಬಿದ್ದಿದೆ' ಎಂದು ಲೇವಡಿ ಮಾಡಿದೆ.

‘ಡಾ.ಸುಧಾಕರ್ ಅವರೇ, ಸ್ಕಾಚ್, ವಾಚ್, ಗೋಲ್ಡ್ ಕಾಯಿನ್ ಅಲ್ಲದೆ ಇನ್ನೂ ಏನೇನಿದೆ ಈ ಬಾಕ್ಸ್ ನಲ್ಲಿ? ಎಲ್ಲವನ್ನೂ ಹಣದಿಂದ ಖರೀದಿಸುತ್ತೇವೆ ಎಂಬ ಧಿಮಾಕು ಬಿಜೆಪಿಗೆ ಬಂದಿರುವುದು ಭ್ರಷ್ಟಾಚಾರದಿಂದ.ಸಚಿವ ಸುಧಾಕರ್ ಅವರ ಕಡೆಯಿಂದಲೂ ಪತ್ರಕರ್ತರಿಗೆ ದುಬಾರಿ ಬೆಲೆ ಲಂಚ ರೂಪದ ಉಡುಗೊರೆ ನೀಡಿರುವ ಸಂಗತಿ ಹೊರಬಂದಿದೆ' ಎಂದು ಕಾಂಗ್ರೆಸ್ ಟೀಕಿಸಿದೆ.

‘ಡಾ.ಸುಧಾಕರ್ ಅವರೇ, ಏಕೆ ಈ ಬಗ್ಗೆ ತಾವು ತುಟಿ ಬಿಚ್ಚುತ್ತಿಲ್ಲ?ಅಕ್ರಮ ಮುಚ್ಚಿಕೊಳ್ಳಲು ಸರಕಾರ ಯಾವ ಹಂತಕ್ಕೆ ಬೇಕಿದ್ದರೂ ಇಳಿಯಬಹುದು ಎನ್ನಲು ಪತ್ರಕರ್ತರಿಗೆ ಲಂಚ ನೀಡಿದ ಈ ಪ್ರಕರಣವೇ ನಿದರ್ಶನ' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

Similar News