ದಲಿತ ಉದ್ದಿಮೆದಾರರಿಗೆ ನಿವೇಶನ ಹಂಚಿಕೆಯಲ್ಲಿನ ಭೂಮಿ ಕೊರತೆಗೆ ಪರಿಹಾರ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-10-29 14:56 GMT

ಬೆಂಗಳೂರು, ಅ. 29: ದಲಿತ ಉದ್ದಿಮೆದಾರರಿಗೆ 2009ರಲ್ಲಿ ನಿಗದಿ ಪಡಿಸಿದ ಮೀಸಲಾತಿಯಂತೆ ಕೈಗಾರಿಕಾ ನಿವೇಶನ ಹಂಚಿಕೆಯಲ್ಲಿನ ಭೂಮಿ ಕೊರತೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ನಿಯೋಗದ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿದ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಹಾಗೂ  ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಜೊತೆಯಾಗಿ ಲ್ಯಾಂಡ್ ಆಡಿಟ್ ಮಾಡಿ ವರದಿ ಸಲ್ಲಿಸಿ, ಕೊರತೆಯಾಗಿರುವ ಭೂಮಿ ಹಂಚಿಕೆಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಎಸ್‍ಸಿ-ಎಸ್‍ಟಿ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನವನ್ನು ಶೇ.60ರಷ್ಟು ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿಯಲ್ಲಿ ಹಾಗೂ ಶೇ.40ರಷ್ಟು ರಾಜ್ಯಮಟ್ಟದ ಸಮಿತಿಯಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಆದರೆ, ದಲಿತ ಉದ್ದಿಮೆದಾರರಲ್ಲಿ ಬಹುತೇಕ ಮಂದಿಯ ಯೋಜನಾ ವೆಚ್ಚ 15 ಕೋಟಿ ರೂ.ಗಿಂತ ಕಡಿಮೆ ಇರುವುದರಿಂದ ಜಿಲ್ಲಾ ಮಟ್ಟದಲ್ಲಿನ ಹಂಚಿಕೆಯ ಪ್ರಮಾಣವನ್ನು ಹೆಚ್ಚಿಸುವಂತೆ ಸಂಘದವರು ಮಾಡಿದ ಮನವಿಗೆ ಸ್ಪಂದಿಸಿದ ಸಿಎಂ, ಜಿಲ್ಲಾಮಟ್ಟದಲ್ಲಿ ಶೇ. 70ರಷ್ಟು ಹಾಗೂ ರಾಜ್ಯ ಮಟ್ಟದಲ್ಲಿ ಶೇ.30ರಷ್ಟು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. 

ಕೆಎಸ್‍ಎಫ್‍ಸಿಯಲ್ಲಿ ಸಾಲ ಸೌಲಭ್ಯ ಪಡೆಯುವಾಗ ಸಮಾನಾಂತರ ಭದ್ರತೆಗೆ ಕೈಗಾರಿಕಾ ಭೂಮಿಯ ವಾಸ್ತವ ಬೆಲೆಯನ್ನು ಪರಿಗಣಿಸುವಂತೆ ಸಂಘದವರು ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಅವರು, ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ದಲಿತ ಉದ್ದಿಮೆದಾರರ ಕೈಗಾರಿಕೆಯಲ್ಲಿ ಕನಿಷ್ಠ 10 ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದರೆ ವೇತನ  ಪ್ರೋತ್ಸಾಹ ನೀಡುವಂತೆ ಸಂಘವು ಮಾಡಿದ ಮನವಿಯನ್ನು ಮುಂದಿನ ಆಯವ್ಯಯದಲ್ಲಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದಲಿತ ಉದ್ದಿಮೆದಾರರ ಸಂಘದ ಅಧ್ಯಕ್ಷ ಡಾ.ಎಲ್. ಹನುಮಂತಯ್ಯ, ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸನ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಹಣಕಾಸು ಇಲಾಖೆ ಕಾರ್ಯದರ್ಶಿ ಏಕ್ರೂಪ್ ಕೌರ್, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್ ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Similar News