ದೇವನೂರು, ಜಿ.ರಾಮಕೃಷ್ಣ ಸೇರಿ ಏಳು ಲೇಖಕರ ಪಠ್ಯ ಮರು ಸೇರ್ಪಡೆ

ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ

Update: 2022-10-29 16:14 GMT

ಬೆಂಗಳೂರು, ಅ.29: ಲೇಖಕ ದೇವನೂರ ಮಹಾದೇವ ಹಾಗೂ ಡಾ. ಜಿ.ರಾಮಕೃಷ್ಣ ಸೇರಿ ಏಳು ಲೇಖಕರ ಪಠ್ಯವನ್ನು ಕೈಬಿಟ್ಟಿರುವುದಾಗಿ ತಿಳಿಸಿದ್ದ ಸೆ.23ರ ಆದೇಶವನ್ನು ಶಿಕ್ಷಣ ಇಲಾಖೆ ಹಿಂಪಡಿದೆ. ಈ ಮೂಲಕ ಅವರ ಗದ್ಯ ಮತ್ತು ಪದ್ಯಗಳನ್ನು ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

10ನೇ ತರಗತಿಯ ಪಠ್ಯದಲ್ಲಿನ (ಪ್ರಥಮ ಭಾಷೆ) ದೇವನೂರ ಮಹಾದೇವ ಅವರ 'ಎದೆಗೆ ಬಿದ್ದ ಅಕ್ಷರ' ಗದ್ಯ, ಜಿ.ರಾಮಕೃಷ್ಣ ಅವರ 'ಭಗತ್ ಸಿಂಗ್' ಪೂರಕ ಗದ್ಯ, 9ನೇ ತರಗತಿ ಪಠ್ಯದಲ್ಲಿನ (ತೃತೀಯ ಭಾಷೆ) ರೂಪ ಹಾಸನ ಅವರ 'ಅಮ್ಮನಾಗುವುದೆಂದರೆ' ಪೂರಕ ಪದ್ಯ 10ನೇ ತರಗತಿ ಪಠ್ಯದಲ್ಲಿನ (ತೃತೀಯ ಭಾಷೆ) ಈರಪ್ಪ ಎಂ.ಕಂಬಳಿ ಅವರ 'ಹೀಗೊಂದು ಬಸ್ ಪ್ರಯಾಣ' ಪೂರಕ ಗದ್ಯ, ಸತೀಶ್ ಕುಲಕರ್ಣಿ ಅವರ 'ಕಟ್ಟುತ್ತೇವ ನಾವು' ಪದ್ಯ, 10ನೇ ತರಗತಿ ಪಠ್ಯದಲ್ಲಿನ (ದ್ವಿತೀಯ ಭಾಷೆ) ಸುಕನ್ಯ ಮಾರುತಿ ಅವರ 'ಏಣಿ' ಪದ್ಯ, 6ನೇ ತರಗತಿ ಪಠ್ಯದಲ್ಲಿನ (ಪ್ರಥಮ ಭಾಷೆ) ದೊಡ್ಡಹುಲ್ಲೂರು ರುಕ್ಕೋಜಿರಾವ್ ಅವರ 'ಡಾ.ರಾಜ್ ಕುಮಾರ್' ಗದ್ಯಗಳನ್ನು ಪರಿಗಣಿಸದಂತೆ ಶಿಕ್ಷಣ ಇಲಾಖೆಯು ಒಂದು ತಿಂಗಳ ಹಿಂದೆ ಆದೇಶ ಹೊರಡಿಸಿತ್ತು.

ಪಠ್ಯ ಪರಿಶೀಲನೆಗೆ ರಚಿಸಿದ್ದ ರೋಹಿತ್ ಚಕ್ರತೀರ್ಥ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸಾಹಿತಿಗಳು ತಮ್ಮ ಪಠ್ಯವನ್ನು ಕೈಬಿಡುವಂತೆ ಕೋರಿದ್ದರು. ಈ ಸಂಬಂಧ ಪತ್ರ ಸಹ ಬರೆದಿದ್ದರು, ಗದ್ಯ ಮತ್ತು ಪದ್ಯಗಳನ್ನು ಪಠ್ಯದಲ್ಲಿ ಉಳಿಸಿಕೊಳ್ಳಲು ಶಿಕ್ಷಣ ಇಲಾಖೆ ಈ ಲೇಖಕರ ಅನುಮತಿ ಕೋರಿತ್ತು. ಮನವಿಯನ್ನು ಲೇಖಕರು ತಿರಸ್ಕರಿಸಿದ್ದರು. ಈ ಹಿನ್ನೆಲೆ ಸುತ್ತೋಲೆ ಹೊರಡಿಸಲಾಗಿತ್ತು. ಆದೆರೆ ಪೋಷಕ, ವಿದ್ಯಾರ್ಥಿಗಳ, ಗಣ್ಯರ ಕೋರಿಕೆಯ ಮೇರೆಗೆ ಪಠ್ಯಗಳನ್ನು ಮುಂದುವರೆಸುತ್ತಿರುವುದಾಗಿ ಇಲಾಖೆ ಸ್ಪಷ್ಟ ಪಡಿಸಿದೆ.

Similar News