ಕನ್ನಡ... ಕನ್ನಡ... ಹಾ ಸವಿಗನ್ನಡ!

ವಾರ್ತಾಭಾರತಿ ಅವಲೋಕನ

Update: 2022-10-31 04:30 GMT

ಕನ್ನಡ ಮೂಲತಃ ತನ್ನದೇ ಆದ ಶ್ರೀಮಂತಿಕೆಯನ್ನು ಹೊಂದಿರುವ ಭಾಷೆ. ವಿವಿಧ ಭಾಷೆಗಳಿಂದ ಎರವಲು ಪಡೆಯುತ್ತಾ ಅದು ಇನ್ನಷ್ಟು ಜೀವಂತಿಕೆಯನ್ನೂ ಲವಲವಿಕೆಯನ್ನೂ ಪಡೆಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡದೊಳಗಿನ ಸಂಸ್ಕೃತವನ್ನು ಬೇರ್ಪಡಿಸಬೇಕೆಂಬ ವಾದಗಳು, ಆ ನಿಟ್ಟಿನ ಹಲವು ಪ್ರಯೋಗಗಳು ನಡೆದಿವೆ. ಶುದ್ಧಕನ್ನಡ ಎಂಬ ವಿಚಾರವಾಗಿ ವಿವಾದಗಳು ಎದ್ದವು. ಇದೆಲ್ಲ ಜನರಿಗೆ ಬೇಕಾಗಿಯೊ ಅಥವಾ ಸಾಂಸ್ಕೃತಿಕ ರಾಜಕಾರಣವೊ ಎಂಬುದು ಪ್ರಶ್ನೆ. ಜನಸಮೂಹದ ಮೂಲಕ ಜೀವಂತವಾಗಿರುವ ಭಾಷೆಯ ಹರಿವಿಗೆ ವಿದ್ವತ್ತಿನ ಮಧ್ಯಪ್ರವೇಶದಿಂದ ಆಗುವ ತೊಡಕುಗಳೇನು ಎಂಬುದು ಕೂಡ ಯೋಚಿಸಬೇಕಾದ ವಿಚಾರ.

‘ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’ ಎಂದಿದ್ದರು ಕವಿ ಕುವೆಂಪು. ಕನ್ನಡದ ಪರ ದನಿಯೆಂಬುದು ಕನ್ನಡಕ್ಕೆ ಪ್ರಭುತ್ವದ ಕಡೆಯಿಂದ ಅನ್ಯಾಯವಾದಾಗ ಅದನ್ನು ಪ್ರಶ್ನಿಸುವುದಾಗಬೇಕು. ಕನ್ನಡದ ಪರ ದನಿಯೆಂಬುದು ಕನ್ನಡ ಜನರ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ದೃಢವಾಗಬೇಕು. ವಿದ್ವತ್ತಿನ ಜಗಳಗಳಲ್ಲಿ ಅವೆಲ್ಲ ಮರೆತು ಹೋಗುವಂತಾಗದೆ, ವಿದ್ವತ್ತು ರಾಜಕಾರಣದ ಭಾಗವಾಗದೆ, ಕನ್ನಡಕ್ಕಾಗಿ ನಿಜವಾಗಿಯೂ ಕೈ ಎತ್ತುವಂತಾಗಬೇಕು ಎಂಬುದೇ ಎಲ್ಲರ ಆಶಯ.

ಭಾಷೆಯೊಂದು ಸದಾ ಹರಿವ ನೀರಿನಂತೆ. ಅದು ಬದಲಾಗುತ್ತಲೇ ಇರುತ್ತದೆ. ಹೊಸತನ್ನು ಒಳಗೊಳ್ಳುತ್ತಲೇ ಇರುತ್ತದೆ. ಸಾವಿರಾರು ವರ್ಷಗಳ ಚರಿತ್ರೆಯುಳ್ಳ ಕನ್ನಡ ಭಾಷೆ ಕೂಡ ಇದಕ್ಕೆ ಹೊರತಲ್ಲ. ಕನ್ನಡ ಭಾಷೆ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದು. ಸಂಸ್ಕೃತ, ಪ್ರಾಕೃತದಂಥ ಭಾಷೆಗಳ ಪ್ರಭಾವವನ್ನು ತೊಟ್ಟುಕೊಳ್ಳುತ್ತಲೇ ತನ್ನದೇ ಸಿರಿವಂತಿಕೆಯೊಂದಿಗೆ ಕನ್ನಡ ಈ ಸಾವಿರಾರು ವರ್ಷಗಳಲ್ಲಿ ಬೆಳೆದುಬಂದಿದೆ. ಹಲವು ರೂಪಗಳನ್ನು ಕಂಡಿದೆ. ಹೊಸತನವನ್ನು ಪಡೆಯುತ್ತಾ ಜಗತ್ತಿನ ವಿವಿಧ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತಾ ವಿಸ್ತಾರಗೊಳ್ಳುತ್ತಲೇ ಇದೆ.

ಇದೊಂದು ಕಡೆಯಾದರೆ, ತನ್ನದೇ ನೆಲೆಯಲ್ಲಿ ಕನ್ನಡ ಎದುರಿಸುತ್ತಿರುವ ಬಿಕ್ಕಟ್ಟು ಕೂಡ ಸಣ್ಣದಲ್ಲ. ಶೈಕ್ಷಣಿಕ ವಿಚಾರ ಬಂದಾಗ, ಸ್ಪರ್ಧಾತ್ಮಕತೆಯ ಮಾತು ಬಂದಾಗ ಕನ್ನಡವನ್ನು ಬದಿಗೆ ಸರಿಸಿ ಇಂಗ್ಲಿಷಿನ ಬೆನ್ನು ಹತ್ತುವ ನಮ್ಮದೇ ಜಾಯಮಾನದ ಎದುರು ಕನ್ನಡದ ಅಸ್ತಿತ್ವ ಸವಾಲನ್ನು ಮತ್ತೆ ಮತ್ತೆ ಎದುರಿಸುತ್ತಲೇ ಇದೆ. ಕನ್ನಡದ ಹೆಸರಿನ ರಾಜಕಾರಣವೂ ಇದೆ. ಕನ್ನಡದ ಹೆಸರಿನಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ರಾಜಕಾರಣವೂ ಸಣ್ಣದಲ್ಲ. ಇವೆಲ್ಲವನ್ನೂ ನೋಡುವಾಗ ಜನಭಾಷೆಯಾಗಿರುವ ಕನ್ನಡದ ಮುಂದಿರುವ ತೊಡಕುಗಳು ಮತ್ತು ಕನ್ನಡದ ಪರಿಸರದಲ್ಲಿನ ತಕರಾರುಗಳ ಬೇರೆ ಬೇರೆ ಬಿಂಬಗಳು ಕಾಣಿಸುತ್ತಾ ಹೋಗುತ್ತವೆ. ಕನ್ನಡ ಮಾತನಾಡುವವರು ಬೆಂಗಳೂರಿನಂಥ ನಗರಗಳಲ್ಲಿ ಕಡಿಮೆಯಾಗುತ್ತಿದ್ದಾರೆ ಎಂಬ ಆತಂಕವಿರುವ ಹೊತ್ತಿನಲ್ಲಿಯೇ, ಕನ್ನಡವನ್ನು ಅದರ ಸಹಜ ಚಹರೆಗಳಿಂದ ಒಡೆದು ಬೇರೆ ಮಾಡುವ ಬೆಳವಣಿಗೆಗಳು ಕನ್ನಡಕ್ಕೆ ಬೇಕಿದೆಯೇ ಎಂಬ ಪ್ರಶ್ನೆ ಏಳುತ್ತದೆ.

ಇದನ್ನು ವಿವರಿಸುವುದಕ್ಕೆ ಮೊದಲು, ಕನ್ನಡದ ಚಾರಿತ್ರಿಕ ಪರಿಸರ ವನ್ನು ಸ್ವಲ್ಪ ಗಮನಿಸಬೇಕು. ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡದ ಕುರಿತ ಮೊದಲ ಅಧಿಕೃತ ದಾಖಲೆಯೆಂದು ಕದಂಬರ ಕಾಲದ ಅಂದರೆ ಕ್ರಿ.ಶ.೪೫೦ರ ಹಲ್ಮಿಡಿ ಶಾಸನವನ್ನು ಗುರುತಿಸಲಾಗಿತ್ತು. ಕನ್ನಡ ಲಿಪಿಯ ಪ್ರಾರಂಭಿಕ ರೂಪವನ್ನು ಅದರಲ್ಲಿ ಕಾಣಬಹುದು. ಭಾರತೀಯ ಭಾಷೆಗಳ ಮೂಲ ಲಿಪಿಯಾದ ಬ್ರಾಹ್ಮೀ ಲಿಪಿಯೇ ಕನ್ನಡ
ಲಿಪಿಗೂ ಮೂಲ. ಆನಂತರ ಸಾವಿರಾರು ವರ್ಷಗಳ ಅವಧಿಯಲ್ಲಿ ಅದು ಬದಲಾವಣೆಯಾಗುತ್ತಾ ಇವತ್ತಿನ ಸ್ವರೂಪ ಪಡೆದಿದೆ.

ಆದರೆ ಈಗ ಹಲ್ಮಿಡಿ ಶಾಸನಕ್ಕಿಂತಲೂ ಹಿಂದಿನ ಅಂದರೆ ಕ್ರಿ.ಶ. ೩೭೦-೪೫೦ರ ಅವಧಿಯದ್ದೆನ್ನಲಾಗುವ ಶಾಸನವನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ತಾಳಗುಂದದಲ್ಲಿ ಕೇಂದ್ರ ಪುರಾತತ್ವ ಇಲಾಖೆ ಪತ್ತೆ ಮಾಡಿದೆ. ಭೂಮಿ ಉಂಬಳಿಯಾಗಿ ಕೊಟ್ಟ ವಿಚಾರವುಳ್ಳ ಶಾಸನ ಇದಾಗಿದೆ.

ಇನ್ನುಳಿದಂತೆ ಹಲ್ಮಿಡಿ ಶಾಸನವೂ ಸೇರಿದಂತೆ ಕನ್ನಡದ ದಾಖಲೆಗಳಾಗಿರುವ ಪ್ರಮುಖ ಚಾರಿತ್ರಿಕ ಸಂಗತಿಗಳೆಂದರೆ,

  ಹಲ್ಮಿಡಿ ಶಾಸನ - ಕ್ರಿ.ಶ.೪೫೦ - ಹಲ್ಮಿಡಿ ಗ್ರಾಮದಲ್ಲಿ ದೊರೆತ ಕದಂಬರ ಕಾಲದ ಶಾಸನ

  ಬಾದಾಮಿ ಚಾಲುಕ್ಯರ ಕಾಲದ, ಬಾದಾಮಿ ಗುಹೆಯಲ್ಲಿ ದೊರೆತ ಕ್ರಿ.ಶ.೫೭೮ರ ಶಾಸನ

  ಪಶ್ಚಿಮ ಗಂಗ ಸಾಮ್ರಾಜ್ಯದ ಕಾಲದ ತಲಕಾಡು ಶಾಸನ - ಕ್ರಿ.ಶ.೭೨೬

  ರಾಷ್ಟ್ರಕೂಟರ ಕಾಲದ ಹಂಪಿ ದುರ್ಗೆ ಗುಡಿ ಶಾಸನ - ಕ್ರಿ.ಶ.೯ನೇ ಶತಮಾನ

  ಮಂಡ್ಯದ ಅಟಕೂರು ಶಾಸನ - ಕ್ರಿ.ಶ.೯೪೯ - ರಾಷ್ಟ್ರಕೂಟರ ಕಾಲ

  ಬಳ್ಳಾರಿಯ ಹಿರೆಹಡಗಲಿಯ ಕಲ್ಲೇಶ್ವರ ದೇವಸ್ಥಾನದಲ್ಲಿನ ಶಾಸನ - ಕ್ರಿ.ಶ.೧೦೫೭ - ಚಾಲುಕ್ಯರ ಕಾಲ

  ಕೊಪ್ಪಳದ ಇಟಗಿ ಮಹಾದೇವ ದೇವಸ್ಥಾನದಲ್ಲಿರುವ ಶಾಸನ - ಕ್ರಿ.ಶ. ೧೧೧೨ - ಚಾಲುಕ್ಯರ ಕಾಲ

  ಹಾಸನದ ಅರಸಿಕೆರೆಯ ಈಶ್ವರ ದೇವಸ್ಥಾನದಲ್ಲಿರುವ ಶಾಸನ - ಕ್ರಿ.ಶ.೧೨೨೦ - ಹೊಯ್ಸಳರ ಕಾಲ

  ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿನ ಕೃಷ್ಣದೇವರಾಯ ಪಟ್ಟಾಭಿಷೇಕ ಕುರಿತ ಶಾಸನ - ಕ್ರಿ.ಶ.೧೫೦೯

  ಯಳಂದೂರಿನಲ್ಲಿರುವ ಶಾಸನ - ಕ್ರಿ.ಶ.೧೬೫೪

ಸುಮಾರು ೩ನೇ ಶತಮಾನದಿಂದಲೇ ಕನ್ನಡವು ಜನಸಾಮಾನ್ಯರ ಆಡುಭಾಷೆಯಾಗಿತ್ತೆಂದು ಹೇಳಲಾಗುತ್ತದೆ. ಹಳೆಗನ್ನಡ, ನಡುಗನ್ನಡ ಎಂಬೆರಡು ಹಂತಗಳನ್ನು ದಾಟಿಬಂದ ನಂತರದ್ದು ಇವತ್ತು ನಾವು ಬಳಸು
ತ್ತಿರುವ ಹೊಸಗನ್ನಡ. ಸಾವಿರ ವರ್ಷಗಳಿಗೂ ಹಿಂದೆ ಇದ್ದ ಕನ್ನಡಕ್ಕೂ ಈಗಿರುವ ಕನ್ನಡಕ್ಕೂ ಅಗಾಧ ವ್ಯತ್ಯಾಸ. ಇಂಥ ಪ್ರಾಚೀನ ಭಾಷೆಗೆ ಮೊದಲ ಕನ್ನಡ-ಇಂಗ್ಲಿಷ್ ನಿಘಂಟು ರಚಿಸಿಕೊಟ್ಟವರು ರೆವರೆಂಡ್ ಫರ್ಡಿನಂಡ್ ಕಿಟೆಲ್. ೭೦ ಸಾವಿರಕ್ಕೂ ಹೆಚ್ಚು ಕನ್ನಡ ಶಬ್ದಗಳನ್ನು ಒಳ ಗೊಂಡಿದೆ ಈ ನಿಘಂಟು. ಅತ್ಯಂತ ಪ್ರಮಾಣಬದ್ಧ ಮತ್ತು ವೈಜ್ಞಾನಿಕ ಸ್ವರೂಪದಲ್ಲಿರುವ ಈ ನಿಘಂಟು ಕನ್ನಡದ ವಿವಿಧ ಪ್ರಾದೇಶಿಕ ಉಪಭಾಷೆಗಳನ್ನೂ ಗಾದೆ ಮತ್ತು ನಾಣ್ಣುಡಿಗಳನ್ನೂ, ಹಳೆಗನ್ನಡ ಹೊಸಗನ್ನಡ ಪ್ರಯೋಗಗಳನ್ನೂ ಒಳಗೊಂಡ ಸಮೃದ್ಧ ಕೃತಿ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂಬ ಒತ್ತಾಯ ಶುರುವಾದದ್ದು ತಮಿಳಿಗೆ ಅಂಥ ಮಾನ್ಯತೆ ಮೊದಲು ಸಿಕ್ಕಿಬಿಟ್ಟಾಗ. ಕಡೆಗೂ ೨೦೦೮ರಲ್ಲಿ ಕನ್ನಡವನ್ನು ಅಭಿಜಾತ ಭಾಷೆ ಎಂದು ಕೇಂದ್ರ ಸರಕಾರ ಘೋಷಿಸಿತು. ಹಾಗೆ ನೋಡಿದರೆ, ಕನ್ನಡಕ್ಕೆ ತಂತಾನೇ ಒಂದು ಶಾಸ್ತ್ರೀಯ ಗರಿಮೆ ಇದೆ. ಶಾಸ್ತ್ರೀಯ ಭಾಷೆ ಎಂಬ ಘೋಷಣೆಯ ಹಿಂದಿರುವುದು ರಾಜಕಾರಣವಷ್ಟೆ. ಆದರೆ ಇದನ್ನೊಂದು ಅಭಿಮಾನದ ಮತ್ತು ಭಾವನಾತ್ಮಕ ವಿಚಾರವಾಗಿ ಬಿಂಬಿಸುತ್ತ, ರಾಜಕೀಯ ಉದ್ದೇಶವನ್ನು ಮರೆಮಾಚಲಾಗುತ್ತದೆ. ಹೀಗೆ ಮರೆಮಾಚುವಾಗ, ಶಾಸ್ತ್ರೀಯ ಭಾಷೆ ಸ್ಥಾನಮಾನದಿಂದ ಕನ್ನಡದ ಉದ್ಧಾರವೇನಾದರೂ ಆಯಿತೆ ಎಂಬ ಪ್ರಶ್ನೆ ಕೂಡ ಗೌಣವಾಗಿಬಿಡುತ್ತದೆ.

ಶಾಸ್ತ್ರೀಯ ಸ್ಥಾನಮಾನದ ಬಳಿಕ ಕನ್ನಡಕ್ಕೆ ಅನುದಾನ ಸಿಗುತ್ತದೆ ಎಂಬುದು ಒಂದು ಮುಖ್ಯ ವಿಚಾರವಾಗಿ ಬಿಂಬಿತವಾಯಿತು. ಅಧ್ಯಯನಗಳಿಗೆ ನಿಧಿಸಹಾಯದ ವಿಚಾರ ಗಮನ ಸೆಳೆಯಿತು. ಆದರೆ ನಿಧಿಸಹಾಯ ಪಡೆದು ನಡೆಯುವ ಅಧ್ಯಯನಗಳು ಎಂಥವು, ಅವುಗಳಿಂದ ಕನ್ನಡಿಗರಿಗೆ ಆಗುವುದೇನು, ಕನ್ನಡದ ಜನಪದಕ್ಕೆ ಸಿಗುವುದೇನು ಇಂಥ ವಿಚಾರಗಳು ಚರ್ಚೆಯಾಗುವುದೇ ಇಲ್ಲ ಅಥವಾ ಚರ್ಚೆಯಾಗದಂತೆ ನೋಡಿಕೊಳ್ಳಲಾಗುತ್ತದೆ.

ಸರಕಾರಗಳಿಗೆ ಶಾಸ್ತ್ರೀಯ ಭಾಷೆಯಡಿಯಲ್ಲಿ ವಿದೇಶಗಳಲ್ಲಿ ಕನ್ನಡ ಅಧ್ಯಯನ ಕೇಂದ್ರ ತೆರೆಯುವ ನಿಟ್ಟಿನಲ್ಲಿ ಆಸಕ್ತಿಯಿರುತ್ತದೆ. ಅದಕ್ಕಾಗಿ ಕೋಟ್ಯಂತರ ಹಣ ತೆಗೆದಿಡುವ ಉತ್ಸಾಹವೂ ಇರುತ್ತದೆ.
ಆದರೆ ಇಲ್ಲೇ ಇರುವ ಸರಕಾರಿ ಕನ್ನಡ ಶಾಲೆಗಳು ಮುಚ್ಚುತ್ತಿರುವ
ಬಗ್ಗೆ ಕಿಂಚಿತ್ ಚಿಂತೆಯೂ ಇರುವುದಿಲ್ಲ. ಕನ್ನಡ ವಿಷಯವನ್ನು ತೆಗೆದುಕೊಂಡು ಓದುವ ವಿದ್ಯಾರ್ಥಿಗಳು ಕಡಿಮೆ ಯಾಗುತ್ತಿರುವುದು, ಕನ್ನಡ ಪದವಿ ತರಗತಿಗಳು ಮುಚ್ಚಿ ಹೋಗುತ್ತಿರುವುದು ಇವಾವುದೂ ಸರಕಾರಕ್ಕೆ ಕಾಡುವುದಿಲ್ಲ.

ಭಾಷೆಯ ವಿಚಾರದಲ್ಲಿನ ನಿರರ್ಥಕ ರಾಜಕಾರಣ ಇಷ್ಟಕ್ಕೇ ನಿಲ್ಲುವುದಿಲ್ಲ. ಕಳೆದ ರಾಜ್ಯೋತ್ಸವ ಆಚರಣೆ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುದ್ಧ ಕನ್ನಡ ಮಾತನಾಡುವ ಸ್ಪರ್ಧೆ ಆಯೋಜಿಸಿದಾಗ ವಿವಾದ ಉಂಟಾಯಿತು. ಅನ್ಯಭಾಷೆಯ ಪದಬಳಕೆ ಮಾಡದೆ ಕನ್ನಡ ಮಾತನಾಡಬೇಕೆಂಬುದು ಆ ಸ್ಪರ್ಧೆಯ ಷರತ್ತಾಗಿತ್ತು. ಶುದ್ಧ ಕನ್ನಡ ಎಂದರೆ ಯಾವುದು ಎಂಬ ಪ್ರಶ್ನೆಯನ್ನು ಭಾಷೆಯನ್ನು ಅಧ್ಯಯನಿಸುವ ಪರಿಣತರು ಎತ್ತಿದರು. ತಜ್ಞರು ಹೇಳುವುದು:

‘‘ಯಾವುದೇ ಭಾಷೆ ಶುದ್ಧ ಭಾಷೆ ಅಲ್ಲವೇ ಅಲ್ಲ. ಭಾಷೆ ಎಂಬುದು ಬದಲಾಗುತ್ತಲೇ ಇರುವ ವಿದ್ಯಮಾನ. ಗ್ರೀಕ್ ಲ್ಯಾಟಿನ್‌ನಂಥ ಕ್ಲಾಸಿಕಲ್ ಭಾಷೆಯೇ ಆಗಿರಲಿ, ಲಿಪಿಯೇ ಇರದ ಆಡುಮಾತಿನಲ್ಲಷ್ಟೇ ಇರುವ ಭಾಷೆಯೇ ಆಗಲಿ ಬದಲಾವಣೆ ಗಳನ್ನು ನಿರಂತರ ಸ್ವಿಕರಿಸುತ್ತಲೇ ಬೆಳೆಯುತ್ತಿರುತ್ತದೆ. ಹೊರಗಿನ ಯಾವುದನ್ನೂ ಸ್ವೀಕರಿಸದೆ ಮಡಿವಂತಿಕೆ ತೋರುವ ಭಾಷೆ ಸಂಸ್ಕೃತದಂತೆ ಸಾಯುತ್ತದೆ. ಕನ್ನಡ ಭಾಷೆಯಲ್ಲಿ ಕನ್ನಡ ಪದಗಳಿಗಿಂತ ಹೇರಳವಾಗಿ ಬೇರೆ ಭಾಷೆಯ ಪದಗಳಿವೆ ಮತ್ತು ಅವೆಲ್ಲವೂ ಕನ್ನಡದ್ದೇ ಪದಗಳಾಗಿವೆ. ಹಾಗಾಗಿ ಭಾಷೆಯಲ್ಲಿ ಸರಿ ತಪ್ಪು ಎಂಬುದು ಮಾತ್ರವಿದೆಯೇ ಹೊರತು ಶುದ್ಧ ಅಶುದ್ಧ ಎಂಬುದು ಇಲ್ಲ. ಶುದ್ಧ, ಅಶುದ್ಧ ಎಂಬುದು ಭಾಷೆಯೊಂದು ಬೆಳೆದು ಎಷ್ಟೋ ವರ್ಷಗಳಾದ ಮೇಲೆ ಶಾಸ್ತ್ರಜ್ಞರು, ವಿದ್ವಾಂಸರು ಸೇರಿ ಮಾಡಿದ್ದೇ ಹೊರತು ಅದು ಭಾಷೆಯ ಮೂಲ ಲಕ್ಷಣವಲ್ಲ. ಅದು ಶಾಸ್ತ್ರ ಮತ್ತು ವ್ಯಾಕರಣಗಳಿಂದ ಬರುವಂತಹ ಕೃತಕ ಚೌಕಟ್ಟು. ಭಾಷೆಯಲ್ಲಿ ಶುದ್ಧ, ಅಶುದ್ಧ ಎಂಬ ಚರ್ಚೆ ಶುರುವಾಗುತ್ತಿದ್ದಂತೆ ಸಾಮಾಜಿಕ ಅಸಮಾನತೆಯೂ ಅಲ್ಲಿ ಪ್ರವೇಶ ಮಾಡುತ್ತದೆ.’’

ಕಳೆದ ವರ್ಷ ಈ ವಿವಾದ ಎದ್ದಾಗ ಕೊನೆಗೆ ಅಧಿಕಾರಿಗಳು ಏನೋ ಒಂದು ಸಬೂಬು ಹೇಳಿ ನುಣುಚಿಕೊಂಡರು. ಶುದ್ಧ ಅಶುದ್ಧ ಎನ್ನಲಾಗದು, ಅದನ್ನು ಪರಿಶೀಲಿಸುವುದಾಗಿ ಹೇಳಿ ಪಾರಾದರು. ಕನ್ನಡ ಕುರಿತ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಎಂಬ ಮಾತು ಆಗ ಬಂತು. ಜಾಗೃತಿ ಮೂಡಿಸಬೇಕು ಎಂಬವರಿಗೆ ಕನ್ನಡದ ಮೇಲೆ ಆಗುತ್ತಿರುವ ದಬ್ಬಾಳಿಕೆಗಳೇ ಕಾಣಿಸದೆ, ಇಂಥ ಯಾವುದೋ ಅಪಸವ್ಯಗಳಿಂದ ಕೂಡಿದ ಕಾರ್ಯಕ್ರಮಗಳು ಹೆಚ್ಚಿನದೆನ್ನಿಸಿಬಿಡುತ್ತದಲ್ಲ, ಅಲ್ಲೇ ಹೆಜ್ಜೆ ತಪ್ಪುವುದು. ಕಳೆದ ವರ್ಷ ಲಕ್ಷ ಕಂಠಗಳಲ್ಲಿ ಸಾವಿರ ಕಡೆಗಳಲ್ಲಿ ಕನ್ನಡದ ಮೂರು ಹಾಡುಗಳನ್ನು ಹಾಡುವ ಕಾರ್ಯಕ್ರಮವಿಟ್ಟುಕೊಂಡಿದ್ದ ಸಂಸ್ಕೃತಿ ಇಲಾಖೆ ಈ ವರ್ಷ ಕೋಟಿ ಕಂಠ ಗಾಯನ ನಡೆಸುತ್ತಿದೆ. ಆರು ಕನ್ನಡ ಗೀತೆಗಳನ್ನು ಇದಕ್ಕಾಗಿ ಸೂಚಿಸಿದೆ. ಇದೆಲ್ಲವೂ ಕನ್ನಡದ ಮನಸ್ಸುಗಳಲ್ಲಿ ಕನ್ನಡ ಹಬ್ಬದ ಖುಷಿ ತುಂಬುವುದಕ್ಕೆ ಪೂರಕ ಎಂಬುದನ್ನು ಇಲ್ಲವೆನ್ನಲಾಗದು. ಕನ್ನಡ ಹಬ್ಬದ ಹೊತ್ತಲ್ಲಿ ಕನ್ನಡ ಸಾಹಿತ್ಯವನ್ನು ಗೌರವಿಸುವ ಒಂದು ಬಗೆಯಾಗಿಯೂ ಇದನ್ನು ಸ್ವೀಕರಿಸೋಣ. ಆದರೆ ಅಂತಿಮವಾಗಿ ಅದು ಕೊಡುವುದೇನು? ನವೆಂಬರ್‌ನ ಆಚೆಗೆ ಕನ್ನಡದ ಎದುರಿನ ಸವಾಲುಗಳೇನು, ಅದರೆದುರು ಇರುವ ತಲ್ಲಣಗಳಿಗೆ ಪರಿಹಾರವೇನು ಎಂಬುದು ಹಾಗೆಯೇ ಉಳಿದುಬಿಡುತ್ತದೆ.

ಕನ್ನಡದ ಮೇಲೆ ಹಿಂದಿ ಹೇರಿಕೆ ವಿಚಾರವಾಗಿ ಅದೆಷ್ಟು ದನಿಗಳು ಒಟ್ಟಾಗುತ್ತವೆ, ಎಷ್ಟು ಕನ್ನಡಿಗರಿಗೆ ರೈಲ್ವೆಯಂಥ ಇಲ್ಲವೆ ಈ ನೆಲದ ಎಲ್ಲ ಸೌಲಭ್ಯವನ್ನೂ ಬಳಸಿಕೊಳ್ಳುವ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಸಿಗುತ್ತದೆ, ಕನ್ನಡ ಮಾಧ್ಯಮಕ್ಕೆ ಕನ್ನಡದ ನೆಲದಲ್ಲೇ ನೆಲೆ ಇಲ್ಲವಾಗುತ್ತಿರುವುದರ ಮರ್ಮವೇನು ಇಂಥ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗದೇ ಹೋಗುತ್ತಿದೆ.

ಶುದ್ಧ ಕನ್ನಡ ಎಂಬ ವಿಚಾರದಲ್ಲಿ ತಲೆದೋರುವ ಮತ್ತೊಂದು ತಕರಾರು ‘ಅ’ಕಾರ ಮತ್ತು ‘ಹ’ಕಾರ ಕುರಿತದ್ದು. ಕಳೆದ ವರ್ಷದ ಕೊನೆಯಲ್ಲಿ ಈ ವಿಚಾರವಾಗಿ ತೀವ್ರ ಗದ್ದಲವೆದ್ದಿತ್ತು. ಕನ್ನಡದಲ್ಲಿ ‘ಹ’ ಎಂಬುದಿಲ್ಲ, ಅದು ಸಂಸ್ಕೃತದಿಂದ ಬಂದದ್ದು, ‘ಅ’ಕಾರ, ‘ಹ’ಕಾರದ ತರತಮವು ಸಂಸ್ಕೃತದ ಸೃಷ್ಟಿ ಎಂಬ ವಾದವೂ ಮುನ್ನೆಲೆಗೆ ಬಂತು. ಇಲ್ಲಿಯೂ ‘ಅ’ಕಾರ, ‘ಹ’ಕಾರ ಉಚ್ಚಾರಣೆಯಲ್ಲಿನ ವ್ಯತ್ಯಾಸ ಸ್ವೀಕಾರಾರ್ಹ ಎಂಬ ವಾದವಿರುವುದರ ಜೊತೆಗೇ ಅಂಥ ಉಚ್ಚಾರಣ ವ್ಯತ್ಯಾಸ ತೊಡಕಿನದ್ದೂ ಆಗಿರುವುದನ್ನು ಕಾಣಬಹುದು. ಅಲ್ಪಪ್ರಾಣ, ಮಹಾಪ್ರಾಣದ ನಡುವಿನ ತಾರತಮ್ಯದ ವಿಚಾರವಾಗಿಯೂ ಇದೇ ವಾದವಿದೆ.  ಇಂಥ ವಾದಗಳ ಸಂದರ್ಭದಲ್ಲಿನ ಒಂದು ಪ್ರತಿಪಾದನೆ ಯ ಪ್ರಕಾರ, ಕನ್ನಡದಲ್ಲಿರುವುದು ೩೩ ಅಕ್ಷರಗಳು ಮಾತ್ರ.ಅವೆಂದರೆ, ಅ ಆ ಇ ಈ ಉ ಊ ಎ ಏ ಐ ಒ ಓ ಔ ಅಂ. ಕ ಗ ಚ ಜ. ಟ ಡ ಣ. ತ ದ ನ. ಪ ಬ ಮ. ಯ ರ ಲ ವ ಶ ಸ ಳ.

೫೨ ಅಕ್ಷರಗಳಿದ್ದ ಕನ್ನಡ ವರ್ಣಮಾಲೆಯಿಂದ ಕೆಲವು ಅಕ್ಷರ ಗಳನ್ನು ಕಡಿಮೆ ಮಾಡಲು ಆಧುನಿಕ ವೈಯಾಕರಣಿಗಳು ದಶಕ ಗಳಿಂದ
ವಾದಿಸುತ್ತಲೇ ಬಂದಿದ್ದಾರೆ. ಕೆಲ ವರ್ಷ ಮೊದಲು ಕನ್ನಡದ ‘ಋ’, ‘ಕ್ಷ’ ಮತ್ತು ‘ಜ್ಞ’ ಅಕ್ಷರಗಳು ಅಗತ್ಯವಿಲ್ಲ ಎಂಬ ವಾದವೂ ಎದ್ದಿತ್ತು. ಕನ್ನಡದ ಈ ಲಿಪಿ ಸುಧಾರಣೆ ವಾದ ಹೆಚ್ಚು ಚುರುಕುಗೊಳ್ಳತೊಡಗಿದ್ದು ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನದ ಸ್ವರೂಪ ಸಿಕ್ಕ ಬಳಿಕ.

ಲಿಪಿ ಸುಧಾರಣೆ ವಾದದ ಹಿಂದಿರುವ ಅಂಶಗಳನ್ನು ಹೀಗೆ ಪಟ್ಟಿ ಮಾಡಬಹುದು:

ಮೊದಲನೆಯದು, ಸಂಸ್ಕೃತ ಮೂಲದ ಅಕ್ಷರಗಳನ್ನು ತೆಗೆದುಹಾಕಬೇಕೆಂಬುದು. ಆ ಮೂಲಕ ಸಂಸ್ಕೃತ ಪದಗಳು ಕನ್ನಡದಿಂದ ಹೊರಗಿರುವಂತೆ ಮಾಡುವುದು ಸಾಧ್ಯ ಎಂಬುದು ಇಲ್ಲಿನ ವಾದ. ಮಹಾಪ್ರಾಣ ಬಳಕೆ ಬೇಡವೆಂಬುದು ಕೂಡ ಇದರದ್ದೇ ಮುಂದುವರಿಕೆ

ಎರಡನೆಯದು, ಅಚ್ಚಕನ್ನಡ ಮತ್ತು ಶುದ್ಧ ಕನ್ನಡ ಎಂಬ ಭಿನ್ನತೆಯ ಹಿನ್ನೆಲೆಯಲ್ಲಿನ ವಾದ.

ಮೂರನೆಯದು, ಆಡುನುಡಿಗೆ ಹ್ತತಿರವಾಗುವ ಕನ್ನಡವನ್ನು ಹೆಚ್ಚು ಪ್ರಚುರಪಡಿಸಬೇಕು ಎಂಬ ವಾದ.

ಮಹಾಪ್ರಾಣಗಳ ಬಳಕೆ ಗೊಂದಲಮಯವಾಗಿರುತ್ತದೆ. ಇದು ಬರವಣಿಗೆ ಮತ್ತು ಆಡುಮಾತಿನ ನಡುವೆ ದೊಡ್ಡ ಕಂದರಕ್ಕೆ ಕಾರಣ ಎಂಬ ವಾದಗಳನ್ನು ಈ ಹಂತದಲ್ಲಿ ಮಾಡಲಾಗುತ್ತದೆ. ಇದೇ ರೀತಿ ಕೆಲವು ಅಕ್ಷರಗಳನ್ನು ಕೈಬಿಟ್ಟೂ ಬರವಣಿಗೆ ಸಾಧ್ಯ ಎಂಬ ವಾದಗಳು. ಆದರೆ, ಬಿಡಲಾಗುವ ಅಕ್ಷರಗಳಿಗೆ ಪರ್ಯಾಯವಾಗಿ ಹೊಸ ರೀತಿಯಲ್ಲಿ ಬರೆಯಬೇಕಾದ ಪ್ರಮೇಯ ಇನ್ನೂ ಗೊಂದಲ ಕಾರಿಯಾಗುವ ಸಂದರ್ಭಗಳು ಎದುರಾಗದೇ ಇರುವುದಿಲ್ಲ. ‘ಋ’ ಬೇಡ ಎನ್ನುವಾಗ ಋತು, ಕೃಷ್ಣ ಮೊದಲಾದ ಪದಗಳನ್ನು ರುತು, ಕ್ರಿಷ್ಣ ಎಂದೆಲ್ಲ ಬರೆಯುವ ಸಂದರ್ಭವನ್ನು ನೋಡಬೇಕು. ಹಾಗೆಯೇ ‘ಐ’ ಅಥವಾ ’ಔ’ ಅಕ್ಷರವನ್ನು ಬಿಡುವುದಾದರೆ ಅವನ್ನು ಬಳಸಿ ಬರೆಯುವ ಐರಾವತ, ಔಷಧ ಮೊದಲಾದ ಶಬ್ದಗಳನ್ನು ಬರೆಯುವ ಕ್ರಮದಲ್ಲಿ ಅನುಸರಿಸಬೆಕಾದ ಬೇರೆ ಬಗೆಯ ಅಕ್ಷರ ಬಳಕೆ ಎಷ್ಟು ವಿಚಿತ್ರವಾಗಿ ಕಾಣಿಸುತ್ತದೆ ಎಂಬುದನ್ನೂ ನೋಡಬೇಕು.

ಇನ್ನೊಂದು ಕಡೆಯಿಂದ, ಕನ್ನಡದಲ್ಲಿ ಕನ್ನಡದವೇ ಆಗಿ ಬಳಕೆಯಲ್ಲಿರುವ ಮತ್ತು ಕನ್ನಡದ ಜಾಯಮಾನಕ್ಕೆ ಪೂರ್ತಿಯಾಗಿ ಒಗ್ಗಿರುವ ಪದಗಳಿಗೆ ಪರ್ಯಾಯವನ್ನು ಹುಡುಕಬೇಕೆಂಬ ವಾದ. ಇಂಗ್ಲಿಷಿನ ಬಸ್ಸು, ಕಾರು ಮೊದಲಾದ ಪದಗಳಿಗೆ ಬೇರೆ ಪದ ಹುಡುಕಿಕೊಳ್ಳುವ ಅಗತ್ಯವಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಐಸ್‌ಕ್ರೀಮ್, ಮೊಬೈಲ್ ಇಂಥ ಪದಗಳಿಗೆ ತಂಡಿಗಡ್ಡೆ, ಜಂಗಮಗಂಟೆ ಎಂಬಂಥ ಪದಪ್ರಯೋಗ ತರಬೇಕೆಂಬ ವಾದಗಳೂ ವಾದಕ್ಕಾಗಿ ವಾದ ಎಂಬಂತಿರುವುದೇ ಹೆಚ್ಚು. ಯಾವುದು ನಮ್ಮ ಭಾಷಾ ಪರಿಸರದಲ್ಲಿ ಸರಾಗವಾಗಿ ಸೇರಿಕೊಂಡಿದೆಯೋ ಅದರ ವಿಚಾರದಲ್ಲಿ ಭೇದವೆಣಿಸುವುದು ಎಷ್ಟು ಸರಿ? ಹಾಗೆಯೇ ಸಂಸ್ಕೃತದಿಂದ ಹೇರಳ ವಾಗಿ ಕನ್ನಡದೊಳಗೆ ಸೇರಿಕೊಂಡಿರುವ ಪದಗಳು, ಪರ್ಷಿಯನ್ ಪದಗಳು ಇವೆಲ್ಲಕ್ಕೂ ಪರ್ಯಾಯವನ್ನು ಹುಡುಕಿ ಕೊಳ್ಳುವುದರಿಂದ ಆಗುವುದಾದರೂ ಏನು? ಎಷ್ಟೋ ವರ್ಷಗಳಿಂದ ನಮ್ಮದಾಗಿರುವ ಆ ಪದಗಳ ಜೊತೆಗಿನ ನಮ್ಮ ಭಾವವೂ ಅವಿನಾಭಾವ ಎನ್ನುವಂತಿರುವುದಕ್ಕೆ ಮಹತ್ವ ಕೊಡಬೇಕಲ್ಲವೆ ಎಂಬ ವಾದಗಳೂ ಇನ್ನೊಂದು ಕಡೆಯಿಂದ ಕೇಳಿಬರುತ್ತವೆ.

ಹೀಗೆ ಬೇರೆ ಭಾಷೆಯ ಪದಗಳೆಂದು ಭೇದವೆಣಿಸುವುದು, ಅವನ್ನು ತೆಗೆದುಹಾಕಬೇಕೆನ್ನುವುದು ಅಸಹಿಷ್ಣುತೆಯೇ ಅಲ್ಲವೇ ಎಂಬ ಮತ್ತೊಂದು ಪ್ರಶ್ನೆಯು ಏಳುತ್ತದೆ. ಇದೊಂದು ಭಾಷಾ ಸಂಬಂಧಿ ಮೂಲಭೂತ ವಾದಿತನವಲ್ಲವೇ ಎಂಬ ಅನುಮಾನ ಕೂಡ ಕಾಡದೇ ಇರುವುದಿಲ್ಲ.

ಇಂಥ ಲಿಪಿ ಬೇಡ, ಇಂಥ ಪದ ಬೇಡ
ಎಂಬುದು ಪ್ರಯೋಗ ಶೀಲತೆಯ ನೆಲೆಯಲ್ಲಷ್ಟೇ ಉಳಿದುಬಿಡುವ ವಿಚಾರ ವಾಗುತ್ತದೆ ಬಹಳ ಸಲ. ಒಂದು ಅನ್ಯಭಾಷೆಯ ಪದಕ್ಕೆ ಹೊಸದೊಂದು ಕನ್ನಡ ಪದವನ್ನು ಟಂಕಿಸಿ ಪ್ರಯೋಗಿಸುವುದು ಬರವಣಿಗೆಯಲ್ಲಿ ಚಂದ. ಆದರೆ ಅದು ಆಡುನುಡಿಯಲ್ಲಿ ಬಳಕೆ
ಯಾಗಿ ನಮ್ಮದಾಗುವುದು ಅಷ್ಟು ಸುಲಭವಲ್ಲ.
ಹೀಗೆ ಎಷ್ಟೋ ಪ್ರಯೋಗಶೀಲ ಪ್ರಯೋಗಗಳು ಉದಾಹರಣೆಗಾಗಿ ಮಾತ್ರವೇ ಉಪಯುಕ್ತವಾಗ ಬಲ್ಲವೇ ಹೊರತು ವ್ಯಾವಹಾರಿಕವಾಗಿ ಅವು ಗೆಲ್ಲುವುದು ದಿಢೀರನೆ ಆಗುವಂಥದ್ದಲ್ಲ. ಕನ್ನಡ ವರ್ಣಮಾಲೆಯಲ್ಲಿನ ಅಕ್ಷರಗಳನ್ನು ಕಡಿಮೆ ಮಾಡಬೇಕೆಂಬ ವಾದಗಳ ನಡುವೆಯೂ ಅಲ್ಲಿನ ೫೨ ಅಕ್ಷರಗಳೂ ನಮ್ಮ ಬಳಕೆಯಲ್ಲಿವೆ. ಪರ್ಯಾಯ ಪದ ಬಳಕೆ ಇಲ್ಲವೆ ಮಹಾಪ್ರಾಣಗಳು ಬೇಡ ಎಂಬುದು ತಾತ್ವಿಕ ನೆಲೆಯಲ್ಲಿ ಮಾತ್ರವೇ ಉಳಿದು, ಬರವಣಿಗೆಯಲ್ಲಿ ಅದರ ಪ್ರತಿಪಾದಕರೇ ಬಳಸದಿರುವುದನ್ನೂ ಕಾಣಬಹುದು. ‘ಕ್ಷ’, ‘ಜ್ಞ’ ಮೊದಲಾದ ಅಕ್ಷರಗಳನ್ನೂ ನಾವು ಬಳಸುತ್ತೇವೆ. ಅವು ನಮ್ಮ ಬರವಣಿಗೆಯಲ್ಲಿ ಒದಗಿಸಿರುವ ಅನುಕೂಲ ದೊಡ್ಡದು.

ಕನ್ನಡದ ಯಾವುದೇ ಲಿಪಿ, ಅದರದ್ದೇ ಆದ ಸೌಂದರ್ಯ ಮುಖ್ಯವಾಗಬೇಕೇ ಹೊರತು ಅದನ್ನು ಕನ್ನಡದ್ದಲ್ಲ ಎಂದು ಹೊಸದಾಗಿ ವಾದಿಸುವುದು ಎಷ್ಟು ಔಚಿತ್ಯಪೂರ್ಣ ಎಂಬ
ಪ್ರಶ್ನೆಯೂ ಇದೆ. ಯಾವುದೇ ಪದಗಳು ನಮ್ಮವಾಗಿ ಭಾಷೆ ಯಲ್ಲಿ ಬಳಕೆಯಾಗುವಾಗ ವ್ಯಕ್ತವಾಗುವ ಚೆಲುವು ಮುಖ್ಯವೇ ಹೊರತು ಅವುಗಳನ್ನು ದೂರವಿಟ್ಟು ನಮ್ಮದೇ ಭಾಷೆಯ ಸಿರಿಯನ್ನು ಸೊರಗಿಸುವುದರಲ್ಲಿ ಅರ್ಥವಿಲ್ಲ ಎಂಬ ಮಾತುಗಳೂ ಇವೆ.

‘ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’ ಎಂದಿದ್ದರು ಕವಿ ಕುವೆಂಪು. ಕನ್ನಡದ ಪರ ದನಿಯೆಂಬುದು ಕನ್ನಡಕ್ಕೆ ಪ್ರಭುತ್ವದ ಕಡೆಯಿಂದ ಅನ್ಯಾಯವಾದಾಗ ಅದನ್ನು ಪ್ರಶ್ನಿಸುವುದಾಗಬೇಕು. ಕನ್ನಡದ ಪರ ದನಿಯೆಂಬುದು ಕನ್ನಡ ಜನರ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ದೃಢವಾಗಬೇಕು. ವಿದ್ವತ್ತಿನ ಜಗಳಗಳಲ್ಲಿ ಅವೆಲ್ಲ ಮರೆತು ಹೋಗುವಂತಾಗದೆ, ವಿದ್ವತ್ತು ರಾಜಕಾರಣದ ಭಾಗವಾಗದೆ, ಕನ್ನಡಕ್ಕಾಗಿ ನಿಜವಾಗಿಯೂ ಕೈ ಎತ್ತುವಂತಾಗಬೇಕು ಎಂಬುದೇ ಎಲ್ಲರ ಆಶಯ.

Full View

Similar News