×
Ad

ನ.2ರಿಂದ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪ್ರಧಾನಿ ಚಾಲನೆ, 5 ಲಕ್ಷ ಕೋಟಿ ರೂ.ಹೂಡಿಕೆ ನೀರಿಕ್ಷೆ: ಸಚಿವ ನಿರಾಣಿ

Update: 2022-10-31 22:49 IST

ಬೆಂಗಳೂರು, ಅ.31: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವು ನ.2 ರಿಂದ 4ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್ ಆಗಿ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು. 

ಸೋಮವಾರ ಬೆಂಗಳೂರು ಅರಮನೆ ಆವರಣದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶದ ಪೂರ್ವ ಸಿದ್ಧತೆ ಕುರಿತು ಪರಿಶೀಲನೆ ನಡೆಸಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ.2ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್ ಆಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಲಿದ್ದಾರೆ ಎಂದರು.

ಈ ಬಾರಿ ವಿಶ್ವದ ಮುಂಚೂಣಿಯಲ್ಲಿರುವ ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದು, ಅಂದಾಜು 5 ಲಕ್ಷ ಕೋಟಿಗೂ ಅಧಿಕ ಹೂಡಿಕೆ ಆಗಲಿದೆ, 5 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಜನೆಯಾಗಲಿವೆ ಎಂದು ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು. 

ಕೈಗಾರಿಕೆಗಳು ಬೆಂಗಳೂರನ್ನೇ ಕೇಂದ್ರೀಕೃತವಾಗಿರಿಸಿಕೊಂಡಿದ್ದು, ಅದನ್ನು ಎರಡು ಮತ್ತು ಮೂರನೇ ಹಂತದ ನಗರಗಳಿಗೂ ವಿಸ್ತರಿಸಲು ಸರಕಾರ ಮುಂದಾಗಿದೆ. ಬೆಂಗಳೂರಿನ ಆಚೆಗೆ ಉದ್ಯಮ ವಿಸ್ತರಣೆ ಮತ್ತು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದರು. 

ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಎಂಟಿಬಿ ನಾಗರಾಜ್, ಅಶ್ವತ್ಥನಾರಾಯಣ, ಕೇಂದ್ರ ಸಚಿವರಾದ ನಿರ್ಮಲಾ  ಸೀತಾರಾಮನ್,  ಪಿಯೂಶ್ ಗೋಯಲ್, ಪ್ರಹ್ಲಾದ್ ಜೋಷಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. 

ನ.4ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕೇಂದ್ರ ಸಾರಿಗೆ ಮತ್ತು ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಹೂಡಿಕೆದಾರರ ಸಮಾವೇಶದಲ್ಲಿ ಆದಂಥ ಹೂಡಿಕೆ ಒಪ್ಪಂದದ ವಿವರ, ಎಷ್ಟು ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂಬ ಎಷ್ಟು ನಿಖರವಾದ ಮಾಹಿತಿ ಒದಗಿಸಲಾಗುವುದು ಎಂದು ಅವರು ಹೇಳಿದರು.

ಸಾಂಸ್ಕೃತಿಕ ಮೇಳ: ಈ ಸಮಾವೇಶ ಬಂಡವಾಳ ಹೂಡಿಕೆಗಷ್ಟೇ ಸೀಮಿತವಾಗಿಲ್ಲ. ಕರ್ನಾಟಕದ ಸಾಂಸ್ಕøತಿಕ ಲೋಕ ಅಲ್ಲಿ ಅನಾವರಣಗೊಳ್ಳಲಿದೆ. ಆಹಾರ ಮೇಳದಲ್ಲಿ ಕರ್ನಾಟಕದ ವಿಶೇಷ ಖಾದ್ಯಗಳನ್ನು ಸವಿಯಬಹುದು ಎಂದು ಅವರು ವಿವರಿಸಿದರು.

ಗ್ರಾಮಿ ಪ್ರಶಸ್ತಿ ಪುರಸ್ಕøತ ರಿಕ್ಕಿ ಕೇಜ್, ಗಾಯಕಿ ವಸುಂಧರಾ ದಾಸ್, ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತದ ಜುಗಲ್‍ಬಂದಿಯ ಸಂಗೀತ ಆಸ್ವಾದಿಸಬಹುದು. ಯಕ್ಷಗಾನ, ವಸ್ತು ಪ್ರದರ್ಶನ, ಕೈಮಗ್ಗ ಮತ್ತು ಜವಳಿ, ವಾಸ್ತುಶಿಲ್ಪ ಪ್ರದರ್ಶನ, ಚಿತ್ರಕಲಾ ಪರಿಷತ್‍ನಲ್ಲಿ ವಿಶೇಷ ಪ್ರದರ್ಶನ ಇರಲಿದೆ ಎಂದು ಅವರು ಹೇಳಿದರು.

ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆಟ್ರ್ಸ್, ರಾಜ್ಯದ ಎಲ್ಲ ಭಾಗಗಳಲ್ಲಿರುವ ವಸ್ತು ಸಂಗ್ರಹಾಲಯಗಳು ಮತ್ತು ಗ್ಯಾಲರಿಗಳಿಂದ ವರ್ಣಚಿತ್ರಗಳು ಮತ್ತು ಕಲಾಕೃತಿಗಳನ್ನು ಪ್ರದರ್ಶಿಸಲಿದೆ ಎಂದು ಮುರುಗೇಶ್ ನಿರಾಣಿ ತಿಳಿಸಿದರು.

ಭಾಗವಹಿಸಲಿರುವ ಪ್ರಮುಖ ಉದ್ಯಮಿಗಳು: ಕುಮಾರ್ ಮಂಗಳಂ ಬಿರ್ಲಾ(ಅಧ್ಯಕ್ಷರು, ಆದಿತ್ಯ ಬಿರ್ಲಾ ಗ್ರೂಪ್), ಕರಣ್ ಗೌತಮ್ ಅದಾನಿ(ಸಿಇಒ ಅದಾನಿ ಗ್ರೂಪ್ಸ್), ಜೀವ್ ಸೇಗ್ಲ್(ಸಹ-ಸಂಸ್ಥಾಪಕ, ಸ್ಟಾರ್ಬಕ್ಸ್), ವಿಕ್ರಮ್ ಕಿರ್ಲೋಸ್ಕರ್(ಉಪಾಧ್ಯಕ್ಷರು, ಟೊಯೋಟಾ ಕಿರ್ಲೋಸ್ಕರ್ ಮೋಟಾರ್), ರಿಷಾದ್ ಪ್ರೇಮ್ ಜೀ, ಅಧ್ಯಕ್ಷರು, ವಿಪೆÇ್ರೀ), ಪ್ರತೀಕ್ ಅಗರ್ವಾಲ್(ಸಿಎಂಡಿ, ಸ್ಟೆರ್ಲೈಟ್ ಪವರ್).

ಡಾ.ಸೌಮ್ಯಾ ಸ್ವಾಮಿನಾಥನ್(ಮುಖ್ಯ ವಿಜ್ಞಾನಿ, ವಿಶ್ವ ಆರೋಗ್ಯ ಸಂಸ್ಥೆ), ಡಾ. ದೇವಿ ಶೆಟ್ಟಿ(ಸಂಸ್ಥಾಪಕರು, ನಾರಾಯಣ ಹೆಲ್ತ್), ಅರುಂಧತಿ ಭಟ್ಟಾಚಾರ್ಯ(ಸಿಇಒ ಸೇಲ್ಸ್‍ ಫೋರ್ಸ್ ಇಂಡಿಯಾ), ಕಿರಣ್ ಮಜುಂದಾರ್ ಶಾ(ಅಧ್ಯಕ್ಷರು, ಬಯೋಕಾನ್) ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

‘ಬಿಲ್ಡ್ ಫಾರ್ ದಿ ವರ್ಲ್ಡ್'ಎಂಬ ಪರಿಕಲ್ಪನೆಯೊಂದಿಗೆ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ 2022 ಜಾಗತಿಕ ಸಮಾವೇಶದಲ್ಲಿ ಫ್ರಾನ್ಸ್, ಜರ್ಮನಿ, ನೆದಲ್ಯಾರ್ಂಡ್ಸ್, ದಕ್ಷಿಣ ಕೊರಿಯಾ, ಜಪಾನ್ ಮತ್ತು ಆಸ್ಟ್ರೇಲಿಯಾ ಸರಕಾರ ಹಾಗೂ ಉದ್ಯಮದ ಪ್ರತಿನಿಧಿಗಳು ಸೇರಿ ಒಟ್ಟು 5000ಕ್ಕೂ ಹೆಚ್ಚು ಗಣ್ಯರು ಭಾಗವಹಿಸಲಿದ್ದಾರೆ ಎಂದು ನಿರಾಣಿ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ  ಉಪಸ್ಥಿತರಿದ್ದರು.

Similar News