VIDEO- ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ
ಬೆಂಗಳೂರು, ನ.1: ಒಂದು ವರ್ಷದ ಹಿಂದೆ ಅಗಲಿದ ನಟ ಡಾ.ಪುನೀತ್ ರಾಜಕುಮಾರ್ ಅವರಿಗೆ ನಾಡಿನ ಪ್ರತಿಷ್ಠಿತ 10ನೆ "ಕರ್ನಾಟಕ ರತ್ನ" ಪ್ರಶಸ್ತಿಯನ್ನು ಮರಣೋತ್ತರವಾಗಿ ಪುನೀತ್ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಪ್ರದಾನಿಸಲಾಯಿತು.
ಮಂಗಳವಾರ ವಿಧಾನಸೌಧ ಮುಂಭಾಗ ರಾಜ್ಯ ಸರಕಾರವತಿಯಿಂದ ಆಯೋಜಿಸಿದ್ದ ಡಾ.ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವೂ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ"ಕರ್ನಾಟಕ ರತ್ನ" ಪ್ರಶಸ್ತಿ ಪದಕ ಪ್ರದಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ, ಹಿರಿಯ ನಟರಾದ ರಜನಿಕಾಂತ್, ಡಾ.ಶಿವರಾಜ್‍ಕುಮಾರ್, ಜೂ.ಎನ್‍ಟಿಆರ್, ರಾಘವೇಂದ್ರ ರಾಜ್‍ಕುಮಾರ್, ಸಚಿವರಾದ ಆರ್.ಅಶೋಕ್,ವಿ.ಸುನೀಲ್ ಕುಮಾರ್, ಬಿ.ಎ.ಬಸವರಾಜ,ಮುನಿರತ್ನ, ಡಾ.ಕೆ.ಸುಧಾಕರ್, ವಿ.ಸೋಮಣ್ಣ, ಶಾಸಕರಾದ ರಿಝ್ವಾನ್ ಆರ್ಶದ್, ಎನ್.ಎ.ಹಾರೀಸ್ ಸೇರಿದಂತೆ ರಾಜ್‍ಕುಮಾರ್ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಅಪ್ಪು ದೇವರ ಮಗು:ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ನಟ ರಜನಿಕಾಂತ್, ಮಾಕರ್ಂಡೇಯ, ಪ್ರಹ್ಲಾದನಂತೆ ಕಲಿಯುಗಕ್ಕೆ ಅಪ್ಪು. ಆತ ದೇವರ ಮಗು. ಅಪ್ಪು ಆತ್ಮ ನಮ್ಮ ಸುತ್ತಲೂ ಇದೆ. ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ನೀಡುವಾಗಲೂ ಮಳೆ ಬಂದಿತ್ತು. ಇಂದು ಸಹ ಮಳೆ ಬಂದಿದೆ ಎಂದು ನುಡಿದರು.
ಮೊದಲು ನಾನು ಪುನೀತ್ ಅವರನ್ನು ಚೆನ್ನೈನಲ್ಲಿ ನೋಡಿದ್ದೆ.ಆನಂತರ, 1979ರಲ್ಲಿ ಶಬರಿಮಲೈ ಯಾತ್ರೆಗೆ ರಾಜ್‍ಕುಮಾರ್ ಅವರುಕಾಲ್ನಾಡಿಗೆಯಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಚಿಕ್ಕ ಮಗು ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಹೇಳುವುದು ನನಗೆ ಕೇಳಿಸಿತ್ತು. ಯಾರಿದು ಎಂದೂ ಗಮನಿಸಿದಾಗ ರಾಜ್‍ಕುಮಾರ್ ಮಡಿಲಿನಲ್ಲಿ 4 ವರ್ಷದ ಮಗು ಕೂತಿತ್ತು ಎಂದರು.
ಅಲ್ಲದೆ, ಯಾರೇ ಕೂಗಿದರೂ ಆ ಮಗು ಹೋಗುತ್ತಿತ್ತು. ಆ ಮಗುವನ್ನು ಅಣ್ಣ ಅವರ್ರು ಹೆಗಲ ಮೇಲೆ ಕೂರಿಸಿಕೊಂಡು 48 ಕಿಮೀ ನಡೆದರು. ಆ ಮಗು ನಮ್ಮ ಅಪ್ಪು. ಆಗ ನೋಡಿದ ಮಗು ಬೆಳೆದು ‘ಅಪ್ಪು’ ಸಿನಿಮಾದಲ್ಲಿ ನಟಿಸಿದರು. ‘ಅಪ್ಪು’ ಸಿನಿಮಾ ನೋಡಿದ ಮೇಲೆಯೂ ನನಗೆ ರೋಮಾಂಚನ ಆಯಿತು. ಅಲ್ಲದೆ, ಈ ಚಿತ್ರ ಖಂಡಿತ 100 ದಿನ ಓಡುತ್ತೇಎಂದಿದ್ದೇ ಎಂದು ಅವರು ನೆನೆದರು.
ಅಪ್ಪು ಇಲ್ಲ ಎಂದು ನನ್ನಿಂದ ಜೀರ್ಣಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಅಪ್ಪು ಮರೆಯಾದಾಗ ನನಗೆ ಶಸ್ತ್ರಚಿಕಿತ್ಸೆ ಆಗಿ, ಐಸಿಯುನಲ್ಲಿದ್ದೆ. ಹೀಗಾಗಿ 3 ದಿನ ನನಗೆ ಯಾರೂ ವಿಷಯವನ್ನು ತಿಳಿಸಲಿಲ್ಲ. ಆಮೇಲೆ ವಿಷಯ ಗೊತ್ತಾದಾಗ ನನ್ನಿಂದ ನಂಬಲು ಆಗಲಿಲ್ಲ. ಅಪ್ಪು ಅವರ ಮನುಷ್ಯತ್ವದಿಂದ ಅಷ್ಟೊಂದು ಜನ ದರ್ಶನಕ್ಕೆ ಬಂದರು. ಅಪ್ಪು ಸಾಧಾರಣ ಮಗು ಅಲ್ಲ. ಅಪ್ಪು ಯಾವಾಗಲೂ ನಮ್ಮ ಜೊತೆ ಇರುತ್ತಾರೆ ಎಂದು ಅವರು ಭಾವುಕರಾದರು.
ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕದ ರತ್ನನಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪುನೀತ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಧನ್ಯರಾಗಿದ್ದೇವೆ.ಇಂದು ರಾಜ್ಯದೆಲ್ಲೆಡೆ ಪುನೀತ್ ಅವರಿಗೆ ಅಭಿಮಾನದ ಸಾಗರವೇ ಹರಿದಿದೆ. ಪುನೀತ್ ಅವರು ನಮ್ಮ ನಡುವೆಯೇ ಇದ್ದು, ನಮ್ಮೆಲ್ಲರ ಮನದಲ್ಲಿದ್ದಾರೆ ಎಂದು ಹೇಳಿದರು.
ನಟ ಸಾರ್ವಭೌಮ ಡಾ.ರಾಜ್‍ಕುಮಾರ್ ಹಾಗೂ ಪಾರ್ವತಮ್ಮ ಅವರ ಆಶೀರ್ವಾದದಿಂದ ಜನಿಸಿದ ಅಪ್ಪು ಇಂದು ಎಲ್ಲರ ಮನದಲ್ಲಿ ನೆಲೆಸಿದ್ದಾರೆ. ಕನ್ನಡ ನೆಲದಲ್ಲಿ ನಿಮ್ಮ ಮೇಲಿರುವ ಪ್ರೀತಿ, ಅಭಿಮಾನಗಳಿಗಾಗಿಯಾದರೂ ಮತ್ತೆ ಹುಟ್ಟಿ ಬನ್ನಿ ಎಂದು ಹಾರೈಸಿದರು.
---------------------------------------------------
ಎಲ್ಲರಿಗೂ ಧನ್ಯವಾದಗಳು. ಕರ್ನಾಟಕ ಸರಕಾರ ಹಾಗೂ ಬೊಮ್ಮಾಯಿ ಸರ್‍ಗೆ ನನ್ನ ಧನ್ಯವಾದಗಳು.
-ಅಶ್ವಿನಿ ಪುನೀತ್ ರಾಜ್‍ಕುಮಾರ್
--------------------------------------------
''ಹೆಮ್ಮೆ ಪಡುವ ವಿಚಾರ''
'ರಾಜ್ಯ ಸರಕಾರ 30 ವರ್ಷಗಳ ಹಿಂದೆ ಅಪ್ಪಾಜಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ನೀಡಿದ್ದರು. ಈಗ ಅಪ್ಪುಗೆ ಪ್ರಶಸ್ತಿ ಕೊಡುತ್ತಿದ್ದಾರೆ. ಇದು ನಮ್ಮ ಇಡೀ ಕುಟುಂಬಕ್ಕೆ ಹೆಮ್ಮೆ ಪಡುವ ವಿಚಾರ. ಈ ಪ್ರೀತಿಗೆ ನಾವು ಯಾವತ್ತೂ ಚಿರಋಣಿ. ಈ ಸಮಾರಂಭಕ್ಕೆ ರಜನಿಕಾಂತ್, ಜೂ.ಎನ್‍ಟಿಆರ್ ಬಂದಿರೋದು ನಮ್ಮ ಹೆಮ್ಮೆ'.
-ಡಾ.ಶಿವರಾಜ್ ಕುಮಾರ್, ಹಿರಿಯ ನಟ
► ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
*ಕುವೆಂಪು-ಸಾಹಿತ್ಯ-1992
*ಡಾ.ರಾಜ್‍ಕುಮಾರ್-ಸಿನೆಮಾ-1992
*ಎಸ್.ನಿಜಲಿಂಗಪ್ಪ-ರಾಜಕೀಯ-1999
*ಸಿ.ಎನ್.ಆರ್.ರಾವ್-ವಿಜ್ಞಾನ-2000
*ದೇವಿಪ್ರಸಾದ್ ಶೆಟ್ಟಿ-ವೈದ್ಯಕೀಯ-2001
*ಪಂ.ಭೀಮಸೇನ ಜೋಷಿ-ಸಂಗೀತ-2005
*ಶ್ರೀ ಶಿವಕುಮಾರ ಸ್ವಾಮೀಗಳು-ಸಮಾಜ ಸೇವೆ-2007
*ದೇ.ಜವರೇಗೌಡ-ಸಾಹಿತ್ಯ-2008
*ಡಿ.ವೀರೇಂದ್ರ ಹೆಗ್ಗಡೆ-ಸಾಮಾಜಿಕ ಸೇವೆ-2009
*ದಿ.ಪುನೀತ್ ರಾಜ್‍ಕುಮಾರ್- ಸಿನಿಮಾ-2022
ರಾಜ್ಯೋತ್ಸವದ ದಿನವಾದ ಇವತ್ತು ನಾಡಿನ ಶಕ್ತಿಸೌಧದ ಮೆಟ್ಟಿಲುಗಳು ಆ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಿದ್ದು, 13 ವರ್ಷಗಳ ಬಳಿಕ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಕರ್ನಾಟಕ ರತ್ನ’ ಪ್ರದಾನಿಸಲಾಯಿತು. ಈ ಪ್ರಶಸ್ತಿಯೂ 50 ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಹಾಗೂ ಒಂದು ಶಾಲನ್ನು ಒಳಗೊಂಡಿದೆ.
ಮಳೆಯಲ್ಲಿ ಮಿಂದ ಅಭಿಮಾನಿಗಳು..!
ಪ್ರಶಸ್ತಿ ಪ್ರದಾನ ಸಮಾರಂಭ ಆರಂಭದಿಂದಲೂ ಮಳೆ ಸುರಿಯುತ್ತಿದ್ದರೂ, ಸಾವಿರಾರು ಅಭಿಮಾನಿಗಳು ವಿಧಾನಸೌಧ ಮುಂಭಾಗ ಜಮಾಯಿಸಿದ್ದರು. ಬೆಂಗಳೂರು ಮಾತ್ರವಲ್ಲದೆ, ಹೊರಭಾಗಗಳಿಂದಲೂ ಅಪಾರ ಸಂಖ್ಯೆಗಳು ಅಭಿಮಾನಿಗಳು ಆಗಮಿಸಿ, ಮಳೆಯಲ್ಲೇ ಕಾರ್ಯಕ್ರಮ ಕಣ್ಣು ತುಂಬಿಕೊಂಡರು.