ಹಿಂದುಳಿದ ಜಾತಿಗೆ ಸೇರಿದವರನ್ನು ಮುಖ್ಯಮಂತ್ರಿ ಮಾಡಿ ತೋರಿಸಲಿ: ಬಿಜೆಪಿಗೆ ಸಿದ್ದರಾಮಯ್ಯ ಸವಾಲು
ಬೆಂಗಳೂರು, ನ.1: ಕರ್ನಾಟಕದಲ್ಲಿ ಹಿಂದುಳಿದ ಜಾತಿಯವರು ಮುಖ್ಯಮಂತ್ರಿಯಾಗಿದ್ದರೆ ಅದು ಕಾಂಗ್ರೆಸ್ ನಲ್ಲಿ ಮಾತ್ರ. ಕುರುಬರ ಬಗ್ಗೆ ಬಿಜೆಪಿಯವರಿಗೆ ತುಂಬಾ ಪ್ರೀತಿ ಇದ್ದರೆ ಬಸವರಾಜ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆ.ಎಸ್.ಈಶ್ವರಪ್ಪ ಅಥವಾ ಇನ್ಯಾವುದಾದರೂ ಹಿಂದುಳಿದ ಜಾತಿಗೆ ಸೇರಿದವರನ್ನು ಮುಖ್ಯಮಂತ್ರಿ ಮಾಡಿ ನೋಡೋಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.
ಮಂಗಳವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿಯಲ್ಲಿ ಬಿಜೆಪಿ ಆಯೋಜಿಸಿದ್ದ ಹಿಂದುಳಿದ ಜಾತಿಗಳ ಸಮಾವೇಶದಲ್ಲಿ ಪ್ರತಿಯೊಬ್ಬರು ನನ್ನನ್ನು ಮತ್ತು ಮಲ್ಲಿಕಾರ್ಜುನ ಖರ್ಗೆಯವರನ್ನು ಗುರಿಯಾಗಿರಿಸಿಕೊಂಡು ಸುಳ್ಳುಗಳನ್ನು ಹೇಳಿ, ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುರಿ ಮತ್ತು ಉಣ್ಣೆ ಮಹಾಮಂಡಲ ರಚನೆ ಮಾಡಿದ್ದು ಹಿಂದಿನ ನಮ್ಮ ಸರಕಾರ. 20 ಸಾವಿರ ಅರ್ಹ ಜನರಿಗೆ 354 ಕೋಟಿ ರೂ.ವೆಚ್ಚದಲ್ಲಿ 20 ಕುರಿ ಮತ್ತು ಒಂದು ಟಗರನ್ನು ಒಳಗೊಂಡ ಒಂದು ಘಟಕದ ವೆಚ್ಚ 1.75 ಲಕ್ಷ ರೂ.ನೀಡುವ ಆದೇಶ ಮಾಡಿದ್ದೇನೆ ಎಂದು ಸಮಾವೇಶದಲ್ಲಿ ಆದೇಶ ಪ್ರತಿ ಮುಖ್ಯಮಂತ್ರಿ ಪ್ರದರ್ಶನ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
1.75 ಲಕ್ಷ ರೂ.ಗಳಲ್ಲಿ ಶೇ.50ರಷ್ಟು ಹಣವನ್ನು ಎನ್‍ಸಿಡಿಸಿ ಮೂಲಕ ಸಾಲ, ಶೇ.25ರಷ್ಟು ಸರಕಾರದ ಸಬ್ಸಿಡಿ ಮತ್ತು ಉಳಿದ ಶೇ.25ರಷ್ಟು ಹಣವನ್ನು ಫಲಾನುಭವಿ ಹಾಕಬೇಕು. ಆದರೆ ಭಾಷಣದಲ್ಲಿ ಇದನ್ನು ಉಚಿತವಾಗಿ ಎಲ್ಲರಿಗೂ ನೀಡುತ್ತಿದ್ದೇವೆ ಎಂದಿದ್ದಾರೆ. ಸಚಿವ ಸಂಪುಟ ಸಭೆಯ ಮುಂದೆ ಕೂಡ ಇಡದೆ, ತರಾತುರಿಯಲ್ಲಿ ಆದೇಶ ಮಾಡಿಕೊಂಡು ಹೋಗಿದ್ದಾರೆ. ಈ ಕಾರ್ಯಕ್ರಮ ಅನುಷ್ಠಾನವೇ ಆಗಲ್ಲ. ಸುಮ್ಮನೆ ದೊಡ್ಡದಾಗಿ ಪ್ರಚಾರ ಮಾಡಲಾಗಿದೆ ಅಷ್ಟೇ ಎಂದು ಅವರು ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಬೀದರ್, ಯಾದಗಿರಿ, ಕಲಬುರಗಿಯಲ್ಲಿರುವ ಗೊಂಡ ಸಮುದಾಯ( ಕುರುಬ ಜಾತಿಯ ಜನ) ಹಾಗೂ ಕೊಡಗಿನ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಿ ಎಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದ್ದೆ. ಮೋದಿ ಪ್ರಧಾನಿಯಾಗಿ 8 ವರ್ಷ ಆಗಿದೆ, ಯಾಕಿನ್ನು ಅವರನ್ನು ಎಸ್ಟಿ ಪಟ್ಟಿಗೆ ಸೇರಿಸಿಲ್ಲ. ಬಸವರಾಜ ಬೊಮ್ಮಾಯಿ ಈ ಸಮಾಜಗಳನ್ನು ಎಸ್ಟಿಗೆ ಸೇರಿಸಲಿ ಎಂದು ಅವರು ಆಗ್ರಹಿಸಿದರು.
ಬೆಸ್ತ, ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸುವಂತೆ ಶಿಫಾರಸು ಮಾಡಿದ್ದೆ. ಬಿಜೆಪಿ ಪಕ್ಷ ಯಾವುದಾದರೊಂದು ಕಾರ್ಯಕ್ರಮ ಜಾರಿ ಮಾಡಿ ಹಿಂದುಳಿದ ಜಾತಿಗಳಿಗೆ ಸಾಮಾಜಿಕ ನ್ಯಾಯ ನೀಡಿರುವುದನ್ನು ತೋರಿಸಲಿ ನೋಡೋಣ ಎಂದು ಅವರು ಸವಾಲು ಹಾಕಿದರು.
ನರೇಂದ್ರ ಮೋದಿ ಸಾಮಾನ್ಯ ವರ್ಗದಲ್ಲಿರುವ ಆರ್ಥಿಕವಾಗಿ ದುರ್ಬಲ ಜನರಿಗೆ ಸ್ವಯಂ ಪ್ರೇರಿತವಾಗಿ ಶೇ.10ರಷ್ಟು ಮೀಸಲಾತಿ ನೀಡಿದರು. ಇದು ಸಂವಿಧಾನದ 15 ಮತ್ತು 16ನೇ ಆರ್ಟಿಕಲ್‍ಗೆ ವಿರುದ್ಧವಾಗಿದೆ. ರಾಜ್ಯದಿಂದ ಹಿಂದುಳಿದ ಜಾತಿಗಳಿಗೆ ಶಿಫಾರಸು ಮಾಡಿರುವ ಮೀಸಲಾತಿಯನ್ನು ನೀಡಿಲ್ಲ ಎಂದು ಸಿದ್ದರಾಮಯ್ಯ ಕಿಡಿಗಾರಿದರು.
ನ್ಯಾ.ನಾಗಮೋಹನ್ ದಾಸ್ ಸಮಿತಿ ರಚನೆ ಮಾಡಿದ್ದು ಸಮ್ಮಿಶ್ರ ಸರಕಾರದ ಅವಧಿಯಲ್ಲಿ. ವರದಿ ಬಂದ 24 ಗಂಟೆಗಳಲ್ಲಿ ಅದನ್ನು ಜಾರಿ ಮಾಡುವುದಾಗಿ ಹೇಳಿದ್ದ ಬಿ.ಶ್ರೀರಾಮುಲು, ಎರಡು ವರ್ಷ ಮೂರು ತಿಂಗಳು ಸುಮ್ಮನಿದ್ದುದ್ದು ಯಾಕೆ? ವಾಲ್ಮೀಕಿ ಸಮಾಜದ ಸ್ವಾಮೀಜಿ 257 ದಿನಗಳ ಕಾಲ ಧರಣಿ ಮಾಡುವಂತಾಯಿತು ಎಂದು ಅವರು ಹೇಳಿದರು.
ಸರ್ವಪಕ್ಷಗಳ ಸಭೆಯಲ್ಲಿ ಸುಗ್ರೀವಾಜ್ಞೆ ಬದಲಿಗೆ ಒಂದು ಕಾಯ್ದೆ ಮಾಡಿ, ಅದನ್ನು ಕೇಂದ್ರ ಸರಕಾರದ ಮುಂದಿಟ್ಟು ಸಂವಿಧಾನಾತ್ಮಕ ರಕ್ಷಣೆ ಪಡೆಯಲು 9ನೇ ಶೆಡ್ಯೂಲ್ ಗೆ ಸೇರಿಸಬೇಕು ಎಂದು ಹೇಳಿದ್ದೆ. ಅದನ್ನು ಬಿಟ್ಟು ಸುಗ್ರೀವಾಜ್ಞೆ ಹೊರಡಿಸಿಕೊಂಡು ಕೂತಿದ್ದಾರೆ. ಒಂದು ವೇಳೆ ಯಾರಾದರೂ ನ್ಯಾಯಾಲಯದ ಮೊರೆ ಹೋದರೆ ಏನಾಗಬಹುದು. ಇದಕ್ಕೆ ಕಾನೂನಿನ ರಕ್ಷಣೆ ಇದೆಯಾ? ಎಂದು ಅವರು ಪ್ರಶ್ನಿಸಿದರು.
ಬಹಿರಂಗ ಚರ್ಚೆಗೆ ಸಿದ್ಧ: ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸರಕಾರ ಹಿಂದುಳಿದ ಜಾತಿಗಳಿಗೆ ಏನು ಮಾಡಿದೆ ಹೇಳಲಿ, ನಮ್ಮ ಸರಕಾರ ಏನು ಮಾಡಿದೆ ಹೇಳುತ್ತೇನೆ, ಈ ಬಗ್ಗೆ ಬಹಿರಂಗ ಚರ್ಚೆ ಆಗಲಿ ಎಂದು ಸಿದ್ದರಾಮಯ್ಯ ಹೇಳಿದರು.
ಅರಿವು, ವಿದ್ಯಾಸಿರಿ, ವಿದೇಶದಲ್ಲಿ ಓದುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ವಾಲ್ಮೀಕಿ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಜಗಜೀವನ್ ರಾಮ್ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ 11 ಅಭಿವೃದ್ಧಿ ನಿಗಮಗಳಿಗೆ ನೀಡುವ ಅನುದಾನವನ್ನು ಕಡಿಮೆ ಮಾಡಲಾಗಿದೆ. ಮಡಿವಾಳ ಅಭಿವೃದ್ಧಿ ನಿಗಮಕ್ಕೆ ನಯಾಪೈಸೆ ಅನುದಾನ ನೀಡಿಲ್ಲ ಎಂದು ಅವರು ಕಿಡಿಗಾರಿದರು.
40 ಇಂದಿರಾ ಕ್ಯಾಂಟೀನ್ ಗಳನ್ನು ನಿಲ್ಲಿಸಲಾಗಿದೆ. ಬಡವರು, ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಗೆ ಬರುವ ರೋಗಿಗಳಿಗಾಗಿ ಇದ್ದ ಕ್ಯಾಂಟೀನ್‍ಗಳನ್ನು ನಿಲ್ಲಿಸಿದ್ದಾರೆ ಎಂದರೆ ಈ ಸರಕಾರ ಬಡವರ ಪರವಾಗಿ ಇಲ್ಲ ಎಂದು ಅರ್ಥ. ಬೆಂಗಳೂರಿನ 198 ವಾರ್ಡ್ ಗಳಲ್ಲಿ 198 ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಾಪನೆ ಮಾಡಿದ್ದೆವು, ಇದು ಅವೈಜ್ಞಾನಿಕ ಹೇಗಾಗುತ್ತದೆ? ಎಂದು ಅವರು ಪ್ರಶ್ನಿಸಿದರು.
ಕೆ.ಆರ್.ಪುರ ಪೊಲೀಸ್ ಇನ್ಸ್ ಪೆಕ್ಟರ್ ನಂದೀಶ್ ವರ್ಗಾವಣೆ ಮಾಡಲು ಮುಖ್ಯಮಂತ್ರಿ ಅಥವಾ ಗೃಹಸಚಿವರು ಅಥವಾ ಸ್ಥಳೀಯ ಶಾಸಕ ಯಾರೆ ಆಗಲಿ ಲಂಚ ಪಡೆದು ವರ್ಗಾವಣೆ ಮಾಡಿದ್ದರೆ ಅವರು ರಾಜೀನಾಮೆ ನೀಡಲೇಬೇಕು ಎಂದು ಅವರು ಆಗ್ರಹಿಸಿದರು.
ಪಿಎಸ್‍ಐ ನೇಮಕಾತಿ ಹಗರಣದಿಂದ ಅನ್ಯಾಯಕ್ಕೀಡಾದ ವಿದ್ಯಾರ್ಥಿಗಳು ಗೃಹ ಸಚಿವರನ್ನು ಭೇಟಿ ಮಾಡಲು ಹೋದಾಗ ಅವರನ್ನು ತಳ್ಳಿ ಹೊರಹಾಕಲಾಗಿದೆ. ಈ ಬಿಜೆಪಿಯವರಿಗೆ ಮಾನವೀಯತೆ ಇಲ್ಲ. ಹಿಟ್ಲರ್ ವಂಶಸ್ತರಾದ ಬಿಜೆಪಿಯವರಲ್ಲಿ ಮಾನವೀಯತೆ ಇರುತ್ತಾ? ಸರ್ವಾಧಿಕಾರದಲ್ಲಿ ನಂಬಿಕೆ ಇರುವುದರಿಂದಲೇ ಇವರು ಹಿಟ್ಲರ್ ನನ್ನು ಹೊಗಳುತ್ತಾರೆ. ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್, ಅಂಥವರ ಬಗ್ಗೆ ಮಾತನಾಡುವುದೇ ವ್ಯರ್ಥ ಎಂದು ಅವರು ಹೇಳಿದರು.
''ಪುನೀತ್ ರಾಜ್‍ಕುಮಾರ್ ನಟನೆಯ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಹೊಂದಿದ್ದರು. ಕರ್ನಾಟಕದಲ್ಲಿ ಈ ರೀತಿಯ ಖ್ಯಾತಿ ಪಡೆದ ನಟ ಬೇರೊಬ್ಬರಿಲ್ಲ. ಪುನೀತ್ ನಿಧನರಾದಾಗ ಇಡೀ ನಾಡಿನ ಜನ ತಮ್ಮದೇ ಮನೆಯ ಒಬ್ಬ ಸದಸ್ಯನನ್ನು ಕಳೆದುಕೊಂಡವರಂತೆ ದುಃಖವನ್ನು ವ್ಯಕ್ತಮಾಡಿದ್ದಾರೆ. ಇಂಥವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುತ್ತಿರುವುದು ಸಂತೋಷದ ವಿಚಾರ, ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ''
ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ