ಮುಂದಿನ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ವಯೋಮಿತಿ ಪರಿಷ್ಕರಣೆ: ಸಿಎಂ ಬೊಮ್ಮಾಯಿ

Update: 2022-11-01 16:52 GMT

ಬೆಂಗಳೂರು, ನ. 1: ಸಣ್ಣ ವಯಸ್ಸಿನಲ್ಲಿಯೇ ಪ್ರಶಸ್ತಿಯನ್ನು ನೀಡಿದರೆ, ಪರಸ್ಕೃತರು ಇನ್ನು ಹೆಚ್ಚಿನ ಸಾಧನೆ ಮಾಡಲು ಅವಕಾಶ ನೀಡಿದಂತಾಗುತ್ತದೆ. ಹಾಗಾಗಿ ರಾಜ್ಯೋತ್ಸವ ಪ್ರಶಸ್ತಿಗೆ ವಯೋಮಿತಿ ಪರಿಷ್ಕರಣೆ ಅಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಮಂಗಳವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 67ನೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

60 ವರ್ಷ ತುಂಬಿದವರಿಗೆ ಮಾತ್ರ ಪ್ರಶಸ್ತಿ ಪ್ರದಾನ ಮಾಡಬೇಕು ಎಂಬುದು ಸರಕಾರದ ತಪ್ಪು ತಿಳುವಳಿಕೆಯಾಗಿದೆ. ಹಾಗಾಗಿ ಮುಂದಿನ ವರ್ಷ ವಯಸ್ಸಿನ ಮಿತಿಯನ್ನು ಪರಿಷ್ಕರಣೆ ಮಾಡಲಾಗುತ್ತದೆ. ವಯಸ್ಸಿನ ಮಿತಿ ಇಲ್ಲದೇ ನಿಜವಾದ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು. 

ರಾಜ್ಯೋತ್ಸವ ಪ್ರಶಸ್ತಿ ಪಡೆದವರನ್ನು ಗುರುತು ಮಾಡಿ ಅವರ ಅನುಭವ, ಸಂದೇಶವನ್ನು ಕಲೆ ಹಾಕಬೇಕು. ಪ್ರಶಸ್ತಿ ಪಡೆದವರು ನಾಡು ಕಟ್ಟುವಲ್ಲಿ ಹೇಗೆ ಶ್ರಮಿಸಿದರು ಎನ್ನುವುದನ್ನು ನಾಡಿನ ಜನರಿಗೆ ತಿಳಿಸಬೇಕು. ಈ ನಿಟ್ಟಿನಲ್ಲಿ ನಾಡು ಕಟ್ಟುವ ಒಂದು ಕೃತಿಯನ್ನು ಬಿಡುಗಡೆ ಮಾಡಬೇಕು. ಹಾಗೆಯೇ ಆ ಕೃತಿಯನ್ನು ಎಲ್ಲ ವಿದ್ಯಾರ್ಥಿಗಳು ಸೇರಿ ನಾಡಿನ ಜನರಿಗೆ ಹಂಚಬೇಕು ಎಂದು ಅವರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಸೂಚಿಸಿದರು.

ನಾಡು ಕಟ್ಟಲು ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಳ್ಳದೆ, ನಾವೆಲ್ಲ ಒಗ್ಗಟ್ಟಾಗಿ ಶ್ರಮಿಸಬೇಕು. ಜನರನ್ನು ಫಲಾನುಭವಿಗಳನ್ನಾಗಿಸದೆ, ಪಾಲುದಾರರನ್ನಾಗಿ ಮಾಡಬೇಕು. ಪ್ರಶಸ್ತಿಯನ್ನು ಪಡೆದವರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ನಮ್ಮ ಸರಕಾರ ಎಲ್ಲ ರಂಗದಲ್ಲೂ ರಾಜ್ಯವನ್ನು ಮುಂದೆತರಲು ಪ್ರಯತ್ನಿಸುತ್ತಿದೆ. ನವ ಕರ್ನಾಟಕದಿಂದ ನವ ಭಾರತವನ್ನು ನಿರ್ಮಾಣ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು. 

ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಮಾತನಾಡಿ, ಕಲಾವಿದರಿಗೆ ನೀಡುವ ಪಿಂಚಣಿಯನ್ನು 1500 ರೂ.ಗಳಿಂದ 2 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ. ಈ ಹಿಂದೆ 12 ಸಾವಿರ ಕಲಾವಿದರಿಗೆ ಪಿಂಚಣಿ ನೀಡುತ್ತಿದ್ದು, ಈಗ 15 ಸಾವಿರ ಕಲಾವಿದರಿಗೆ ಪಿಂಚಣಿಯನ್ನು ವಿಸ್ತರಿಸಲಾಗಿದೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಸೇವಾ ಸಿಂಧು ಆಪ್‍ನಲ್ಲಿ 9 ಸಾವಿರ ಅರ್ಜಿಗಳು ಬಂದಿದ್ದು, ಅರ್ಜಿ ಸಲ್ಲಿಸಿದವರಿಗಿಂತ, ಸಮಿತಿ ಗುರುತಿಸಿದವರಿಗೆ ಪ್ರಶಸ್ತಿ ನೀಡಲಾಗಿದೆ. ಎಲ್ಲ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 67 ಜನ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಂದಾಯ ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ್ ಗರುಡಾಚಾರ್ ಮತ್ತಿತರರು ಉಪಸ್ಥಿತರಿದ್ದರು.

Similar News