ಚೀನಾದ ಲಡಾಖ್ ಪ್ರವೇಶ ತಡೆಯದ ಕೇಂದ್ರ ನನ್ನನ್ನು ಕಾರ್ಗಿಲ್ ಗೆ ಬಿಡುತ್ತಿಲ್ಲ: ಉಮರ್ ಅಬ್ದುಲ್ಲಾ

Update: 2022-11-01 17:20 GMT

ಹೊಸದಿಲ್ಲಿ,ನ.1: ಲಡಾಖ್‌ನಲ್ಲಿಯ ಅಧಿಕಾರಿಗಳು ತಾನು ಕಾರ್ಗಿಲ್ ಪ್ರವೇಶಿಸುವುದನ್ನು ತಡೆಯಲು ಪ್ರಯತ್ನಿಸಿದ್ದರು ಎಂದು ನ್ಯಾಷನಲ್ ಕಾನ್ಫರೆನ್ಸ್‌ನ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಹೇಳಿದ್ದಾರೆ.

ಇಲ್ಲಿಗೆ ಬರಬಾರದು ಎಂದು ಅವರು ತನಗೆ ಹೇಳಿದ್ದರು ಎಂದು ಕಾರ್ಗಿಲ್ ಸಮೀಪದ ದ್ರಾಸ್ ಪಟ್ಟಣದಲ್ಲಿ ತನ್ನ ಬೆಂಬಲಿಗರಿಗೆ ತಿಳಿಸಿದ ಅಬ್ದುಲ್ಲಾ,‘ಈಶಾನ್ಯ ಲಡಾಖ್‌ನಲ್ಲಿ ಚೀನಾ ಪ್ರವೇಶಿಸಿದಾಗ ಅವರನ್ನು ತಡೆಯಲು ನಿಮಗೆ ಸಾಧ್ಯವಾಗಲಿಲ್ಲ,ಅವರನ್ನು ವಾಪಸ್ ಕಳುಹಿಸಲಾಗಲಿಲ್ಲ. ನಾವು ದ್ರಾಸ್ ಮೂಲಕ ಶ್ರೀನಗರದಿಂದ ಕಾರ್ಗಿಲ್‌ಗೆ ಹೋಗುತ್ತಿದ್ದೇವೆ ಅಷ್ಟೇ. ನಾವು ಪಟ್ಟಣವನ್ನು ವಶಪಡಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ ’ಎಂದರು.

ಕಾರ್ಯಕರ್ತರ ಸಭೆಯಲ್ಲಿ ತಾನು ಮೈಕ್ರೋಫೋನ್ ಬಳಸುವುದನ್ನು ಮತ್ತು ಡ್ರಾಸ್‌ನ ಡಾಕ್ ಬಂಗಲೆಯಲ್ಲಿ ತಂಗುವುದನ್ನು ತಡೆಯಲಾಗಿತ್ತು ಎಂದ ಅವರು,ಆರು ವರ್ಷಗಳ ಕಾಲ ತಾನು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದೆ,ಆದರೆ ಅವರ ಕೆಲವು ನಿರ್ಧಾರಗಳನ್ನು ಅರ್ಥ ಮಾಡಿಕೊಳ್ಳಲು ತಾನು ವಿಫಲನಾಗಿದ್ದೇನೆ. ಡಾಕ್ ಬಂಗಲೆಯನ್ನು ತಾನು ಹೆಚ್ಚೆಂದರೆ ದಣಿವಾರಿಸಿಕೊಳ್ಳಲು ಬಳಸುತ್ತಿದ್ದೆ ಎಂದರು. ಸ್ಥಳೀಯ ಉಪವಿಭಾಗಾಧಿಕಾರಿಗಳು ತನ್ನ ತಂಡದ ಚಟುವಟಿಕೆಗಳ ಮೇಲೆ ಕಣ್ಣಿರಿಸಿದ್ದಾರೆ ಎಂದು ತಿಳಿಸಿದ ಅಬ್ದುಲ್ಲಾ,‘ಇದು ಮೊದಲನೆಯದಾಗಿ ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ತನ್ನದೇ ನಿರ್ಧಾರದ ಬಗ್ಗೆ ಆಡಳಿತವು ಎಷ್ಟೊಂದು ಅಸ್ಥಿರವಾಗಿದೆ ಎನ್ನುವುದನ್ನು ತೋರಿಸುತ್ತಿದೆ. ಯಾವುದೇ ಬಹಿರಂಗ ಸಭೆ ಅಥವಾ ಜಾಥಾ ನಡೆಸುವುದು ನಮ್ಮ ಉದ್ದೇಶವಲ್ಲ, ಆದಾಗ್ಯೂ ಅವರು ಮೈಕ್ ಕಿತ್ತುಕೊಳ್ಳುವಂತಹ ಚಿಲ್ಲರೆ ಕೆಲಸಗಳನ್ನು ಮಾಡಿದ್ದಾರೆ. ಎರಡನೆಯದಾಗಿ ಪ್ರಾಥಮಿಕ ಆತಿಥ್ಯ ನೀಡುವಲ್ಲಿಯೂ ಅವರು ಎಷ್ಟು ಕಳಪೆಯಾಗಿದ್ದಾರೆ ಎನ್ನುವುದನ್ನು ತೋರಿಸುತ್ತಿದೆ ’ ಎಂದರು.

ಕಾರ್ಗಿಲ್ ಮತ್ತು ಲೇಹ್ ಪ್ರಜೆಗಳ ಬೇಡಿಕೆಗಳನ್ನು ಉಲ್ಲೇಖಿಸುವ ಮೂಲಕ ಕೇಂದ್ರವು ತನ್ನ 2019,ಆ.5ರ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು ಎಂದ ಅವರು,ಈ ಪ್ರದೇಶಗಳಿಗೆ ಭೇಟಿಗೆ ತನಗೆ ಅವಕಾಶ ನೀಡಲು ಸರಕಾರವೇಕೆ ಹೆದರುತ್ತಿದೆ ಎಂದು ಪ್ರಶ್ನಿಸಿದರು.

 ಗಡಿಗಳನ್ನು ಎಳೆಯುವ ಮೂಲಕ ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಿವಾಸಿಗಳ ನಡುವಿನ ಶತಮಾನಗಳಷ್ಟು ಹಳೆಯ ಸಂಬಂಧಗಳನ್ನು ಕಡಿಯಲು ಸರಕಾರಕ್ಕೆ ಸಾಧ್ಯವಿಲ್ಲ ಎಂದ ಅಬ್ದುಲ್ಲಾ,‘ನಮ್ಮ ಸಂಬಂಧಗಳು ಅತ್ಯಂತ ಬಲವಾಗಿವೆ ಮತ್ತು ಈ ನಕಲಿ ಗೆರೆಗಳು ಅದನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ನಿಮ್ಮ ನೋವು ನಮಗೆ ಅರ್ಥವಾಗುತ್ತಿದೆ,ನಿಮ್ಮನ್ನು ಕಡೆಗಣಿಸಲಾಗುತ್ತಿದೆ ಎನ್ನುವುದು ನಮಗೆ ಗೊತ್ತಿದೆ ’ಎಂದರು.

Similar News