ಮಧ್ಯಪ್ರದೇಶ:ನಾಲ್ಕರ ಹರೆಯದ ಬಾಲಕಿಯ ಅತ್ಯಾಚಾರಗೈದು ಪೊದೆಯಲ್ಲೆಸೆದ ದುಷ್ಕರ್ಮಿ

Update: 2022-11-01 18:30 GMT

ಖಂಡವಾ (ಉ.ಪ್ರ),ನ.1: ಮಧ್ಯಪ್ರದೇಶದ ಖಂಡವಾ ಜಿಲ್ಲೆಯಲ್ಲಿ ನಾಲ್ಕರ ಹರೆಯದ ಬಾಲಕಿಯ ಅತ್ಯಾಚಾರಗೈದು ಪೊದೆಯಲ್ಲಿ ಎಸೆಯಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.

ಸೋಮವಾರ ಕಬ್ಬಿನ ಗದ್ದೆಯೊಂದರ ಪೊದೆಗಳ ನಡುವೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಾಲಕಿಯನ್ನು ಇಂದೋರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಲಕಿ ಸೋಮವಾರ ಬೆಳಿಗ್ಗೆ ಜಸ್ವಾಡಿಯಲ್ಲಿನ ತನ್ನ ಸಂಬಂಧಿಗಳ ಮನೆಯಿಂದ ನಾಪತ್ತೆಯಾಗಿದ್ದಳು. ಮಾಹಿತಿ ಪಡೆದ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ರವಿವಾರ ರಾತ್ರಿ ಮಂಚವನ್ನು ಎರವಲು ಪಡೆಯಲು ಬಾಲಕಿಯ ಕುಟುಂಬವನ್ನು ಸಂಪರ್ಕಿಸಿದ್ದ,ಸ್ಥಳೀಯ ಹೋಟೆಲ್ಲೊಂದರಲ್ಲಿ ಕೆಲಸ ಮಾಡುತ್ತಿದ್ದ 25 ಹರೆಯದ ಶಂಕಿತ ಯುವಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿತ್ತು. ತಾನು ನಿದ್ರಿಸುತ್ತಿದ್ದ ಬಾಲಕಿಯನ್ನು ಅಪಹರಿಸಿ,ಗದ್ದೆಗೆ ಒಯ್ದು ಅತ್ಯಾಚಾರವೆಸಗಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಆತ ನೀಡಿದ್ದ ಮಾಹಿತಿಯ ಮೇರೆಗೆ ಬಾಲಕಿ ಕಬ್ಬಿನ ಗದ್ದೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಎಸ್‌ಪಿ ವಿವೇಕ ಸಿಂಗ್ ತಿಳಿಸಿದರು.

ಅಪರಾಧದಲ್ಲಿ ಇನೋರ್ವ ವ್ಯಕ್ತಿಯೂ ಭಾಗಿಯಾಗಿದ್ದ ಎಂದು ಆರೋಪಿಯು ತಿಳಿಸಿದ್ದಾನೆ,ಆದರೆ ಅದು ದೃಢಪಟ್ಟಿಲ್ಲ ಮತ್ತು ಪೊಲೀಸರು ಆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದರು.

Similar News