ಹಿಮಾಚಲ ಪ್ರದೇಶ ಬಿಜೆಪಿ ಉಪಾಧ್ಯಕ್ಷ ರಾಮ್ ಸಿಂಗ್ ಈಗ ಬಂಡಾಯ ಅಭ್ಯರ್ಥಿ

Update: 2022-11-02 02:30 GMT

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಮ್ ಸಿಂಗ್ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಬೆನ್ನಲ್ಲೇ ಪಕ್ಷ ಅವರನ್ನು ಉಚ್ಚಾಟಿಸಿದೆ ಎಂದು timesofindia.com ವರದಿ ಮಾಡಿದೆ.

ಕುಲ್ಲು ಕ್ಷೇತ್ರದಿಂದ ರಾಮ್‍ಸಿಂಗ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇದು ಕಳೆದ ಎರಡು ದಿನಗಳಲ್ಲಿ ಬಂಡಾಯ ಅಭ್ಯರ್ಥಿಗಳ ವಿರುದ್ಧ ಬಿಜೆಪಿಯ ಆರನೇ ಶಿಸ್ತುಕ್ರಮವಾಗಿದ್ದು, ರಾಮ್‍ಸಿಂಗ್ ಅವರಿಗೆ ಪಕ್ಷದ ಟಿಕೆಟ್ ನಿರಾಕರಿಸಲಾಗಿತ್ತು.

ನಾಲ್ವರು ಮಾಜಿ ಶಾಸಕರು ಹಾಗೂ ಒಬ್ಬರು ಮಾಜಿ ಸಂಸದರನ್ನು ವಿವಿಧ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದ ಹಿನ್ನೆಲೆಯಲ್ಲಿ ಪಕ್ಷದಿಂದ ಉಚ್ಚಾಟಿಸಲಾಗಿದೆ. ಉಚ್ಚಾಟಿತ ಪ್ರತಿನಿಧಿಗಳೆಂದರೆ ತೇಜವಂತ್ ಸಿಂಗ್ ನೇಗಿ (ಕಿನ್ನೌರ್ ಕ್ಷೇತ್ರ), ಕಿಶೋರಿ ಲಾಲ್ (ಅನ್ನಿ ಮೀಸಲು), ಮನೋಹರ ಧೀಮನ್ (ಇಂದೋರಾ ಮೀಸಲು), ಕೆ.ಎಲ್.ಠಾಕೂರ್ (ನಲಗಢ) ಮತ್ತು ಮಾಜಿ ಸಂಸದ ಕೃಪಾಲ್ ಪರ್ಮಾರ್ (ಫತೇಪುರ).

ರಾಮ್‍ ಸಿಂಗ್ ಅವರು ಪಕ್ಷದ ಅಧಿಕೃತ ಅಭ್ಯರ್ಥಿ ನರೋತ್ತಮ್ ಠಾಕೂರ್ ವಿರುದ್ಧ ಕಣಕ್ಕೆ ಧುಮುಕಿದ್ದಾರೆ. ಇದಕ್ಕೂ ಮುನ್ನ ಇದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಮಹೇಶ್ವರ ಸಿಂಗ್ ಅವರನ್ನು ಮನವೊಲಿಸಿ, ನಾಮಪತ್ರ ವಾಪಾಸು ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಆದರೆ ರಾಮ್‍ಸಿಂಗ್ ಅವರು ಬಿಜೆಪಿ ಗಣ್ಯರ ಮನವಿಯನ್ನು ಧಿಕ್ಕರಿಸಿದ್ದರು ಎಂದು timesofindia.com ವರದಿ ಮಾಡಿದೆ.

Similar News