ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ಅವರ ಟ್ವೆಂಟಿ-20 ವಿಶ್ವಕಪ್ ದಾಖಲೆ ಮುರಿದ ವಿರಾಟ್ ಕೊಹ್ಲಿ

Update: 2022-11-02 10:04 GMT

ಅಡಿಲೇಡ್: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಐಸಿಸಿ ಟ್ವೆಂಟಿ- 20 ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ರನ್ ಗಳಿಸುವ ಮೂಲಕ ದಾಖಲೆಯೊಂದನ್ನು ಮುರಿದರು.

ಬುಧವಾರ ಟಿ-20 ವಿಶ್ವಕಪ್  ಗ್ರೂಪ್ 2 ಮುಖಾಮುಖಿಯಲ್ಲಿ ಬಾಂಗ್ಲಾದೇಶ ವಿರುದ್ಧ ವೈಯಕ್ತಿಕ ಸ್ಕೋರ್ 16 ತಲುಪಿದಾಗ ಕೊಹ್ಲಿ ಈ ಸಾಧನೆ ಮಾಡಿದರು. ಭಾರತವು ನಾಯಕ ರೋಹಿತ್ ಶರ್ಮಾ ಅವರನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡ ನಂತರ ಕೊಹ್ಲಿ ಬೇಗನೆ ಬ್ಯಾಟಿಂಗ್‌ಗೆ ಇಳಿದರು. ಕೊಹ್ಲಿ ಅವರು 31 ಇನಿಂಗ್ಸ್‌ಗಳಲ್ಲಿ 1, 016 ರನ್ ಗಳಿಸಿದ್ದ ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ಅವರ ದಾಖಲೆಯನ್ನು ಹಿಂದಿಕ್ಕಿದರು. ಟೂರ್ನಿಯ ಇತಿಹಾಸದಲ್ಲಿ ಕೊಹ್ಲಿ 25ನೇ ಇನ್ನಿಂಗ್ಸ್ ಆಡುತ್ತಿದ್ದಾರೆ.

ಕೊಹ್ಲಿ  2014 ಹಾಗೂ  2016 ರ ಐಸಿಸಿ ಟಿ 20 ವಿಶ್ವಕಪ್ ಆವೃತ್ತಿಗಳಲ್ಲಿ ಮಿಂಚಿದ್ದರು. ಅವರು 2014 ರಲ್ಲಿ ಗರಿಷ್ಠ  ರನ್ ಗಳಿಸಿದ ಆಟಗಾರರಾಗಿದ್ದರು, ಒಟ್ಟು 319 ರನ್ ಗಳಿಸಿ  ಭಾರತವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ಫೈನಲ್ ನಲ್ಲಿ ಭಾರತವು ಶ್ರೀಲಂಕಾ ವಿರುದ್ಧ ಸೋಲುಂಡಿತ್ತು.

2016 ರಲ್ಲಿ, ಭಾರತವು ಸೆಮಿಫೈನಲ್ ಹಂತದಲ್ಲಿ ನಿರ್ಗಮಿಸಿದಾಗ ಕೊಹ್ಲಿ ರನ್ ಪಟ್ಟಿಯಲ್ಲಿ (273) ಎರಡನೇ ಸ್ಥಾನ ಪಡೆದಿದ್ದರು.

ಕೊಹ್ಲಿ ತಮ್ಮ ಯಶಸ್ಸಿನ ಕಿರೀಟಕ್ಕೆ  ಮತ್ತೊಂದು ಗರಿಯನ್ನು ಸೇರಿಸಿಕೊಂಡಿದ್ದಕ್ಕಾಗಿ ಬಿಸಿಸಿಐ ಅಭಿನಂದನೆ ಸಲ್ಲಿಸಿದೆ.

ಕೊಹ್ಲಿ ಅವರು ಪಾಕಿಸ್ತಾನದ ವಿರುದ್ಧ ಔಟಾಗದೆ 82 ರನ್‌ ಗಳಿಸಿ ತಂಡಕ್ಕೆ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು ಹಾಗೂ  ನೆದರ್‌ಲ್ಯಾಂಡ್ಸ್ ವಿರುದ್ಧ 62 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ಉತ್ತಮ ಪ್ರದರ್ಶನ  ಮುಂದುವರಿಸಿದರು. ಆದಾಗ್ಯೂ, ದಕ್ಷಿಣ ಆಫ್ರಿಕಾ ವಿರುದ್ಧ, ಕೊಹ್ಲಿ 12 ರನ್ ಗಳಿಸಿ ಔಟಾದರು.

Similar News