ಮೊರ್ಬಿ ಆಸ್ಪತ್ರೆ ಮಾದರಿಯನ್ನು ದೇಶದ ಇತರ ಆರೋಗ್ಯ ಕೇಂದ್ರಗಳಲ್ಲಿಯೂ ಪುನರಾವರ್ತಿಸಿ

*► ಮೋದಿ ಸರಕಾರಕ್ಕೆ ಎನ್‌ಸಿಪಿ ಸವಾಲು *► ರಾತ್ರಿ ಬೆಳಗಾಗುವುದರೊಳಗೆ ಆಸ್ಪತ್ರೆಯ ನವೀಕರಣ

Update: 2022-11-02 15:11 GMT

ಅಹ್ಮದಾಬಾದ್,ನ.2: ಪ್ರಧಾನಿ ನರೇಂದ್ರ ಮೋದಿ(Narendra Modi) ಭೇಟಿಯ ಹಿನ್ನೆಲೆಯಲ್ಲಿ ರಾತ್ರಿ ಬೆಳಗಾಗುವುದರೊಳಗೆ ಮೊರ್ಬಿ ಸರಕಾರಿ ಆಸ್ಪತ್ರೆ(Morbi Government Hospital)ಯನ್ನು ಸಂಪೂರ್ಣವಾಗಿ ನವೀಕರಣಗೊಳಿಸಿದ ಯೋಜನೆಯನ್ನು ದೇಶಾದ್ಯಂತದ ಎಲ್ಲಾ ಆರೋಗ್ಯ ಸಂಸ್ಥಾಪನೆಗಳಲ್ಲಿ ಪುನರಾವರ್ತಿಸಬೇಕು’’ ಎಂದು ಎನ್‌ಸಿಪಿ ಪಕ್ಷ(NCP party)ವು ಕೇಂದ್ರ ಸರಕಾರದ ವಿರುದ್ಧ ಅಣಕವಾಡಿದೆ.

ಅಕ್ಟೋಬರ್ 30ರಂದು ಸಂಭವಿಸಿದ ತೂಗುಸೇತುವೆ ದುರಂತದಲ್ಲಿ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿರುವ ಮೊರ್ಬಿಯ ಸರಕಾರಿ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೇಟಿ ನೀಡಿದ್ದರು. ಅವರ ಆಗಮನದ ಹಿಂದಿನ ದಿನದ ರಾತ್ರಿಯೊಳಗೆ ಆಸ್ಪತ್ರೆಯನ್ನು ಅತ್ಯಂತ ತ್ವರಿತವಾಗಿ ನವೀಕರಿಸಿ, ಸುಸಜ್ಜಿತಗೊಳಿಸಿರುವ ಬಗ್ಗೆ ಎನ್‌ಸಿಪಿಯ ವಕ್ತಾರ ಕ್ಲೈಡ್ ಕ್ರಾಸ್ಟೊ ಹೀಗೆ ಪ್ರತಿಕ್ರಿಯಿಸಿದ್ದಾರೆ.

  ‘‘ಖಂಡಿತವಾಗಿಯೂ ಇಂತಹ ಬದಲಾವಣೆಯು ಭವಿಷ್ಯದಲ್ಲಿ ಜನರಿಗೆ ನೆರವಾಗಲಿದೆ. ಒಂದು ವೇಳೆ ಗುಜರಾತ್ ಸರಕಾರ ಹಾಗೂ ನಗರಾಡಳಿತದ ಅಧಿಕಾರಿಗಳಿಗೆ ರಾತ್ರಿ ಬೆಳಗಾಗುವುದರೊಳಗೆ ಆಸ್ಪತ್ರೆಯನ್ನು ನವೀಕರಿಸಲು ಸಾಧ್ಯವಾಗುವುದಾದರೆ, ರಾಜ್ಯಾದ್ಯಂತದ ಉಳಿದ ಆಸ್ಪತ್ರೆಗಳನ್ನು ಕೂಡಾ ಅದೇ ರೀತಿ ಮಾಡಲು ಯಾಕೆ ಸಾಧ್ಯವಿಲ್ಲವೆಂಬ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ’’ ಎಂದು ಕ್ರಾಸ್ಟೊ ಹೇಳಿದರು. ಒಂದು ವೇಳೆ ಗುಜರಾತ್ ಸರಕಾರವು ಈ ಬದಲಾವಣೆಯನ್ನು ರಾಜ್ಯದ ಇತರ ಆಸ್ಪತ್ರೆಗಳಲ್ಲಿ ಪುನರಾವರ್ತಿಸದೆ ಇದ್ದಲ್ಲಿ, ಮೊರ್ಬಿ ತೂಗುಸೇತುವೆ ದುರಂತದ ಸಂತ್ರಸ್ತರು ಬಿಜೆಪಿಗೆ ಮುಖ್ಯವಲ್ಲ ಮತ್ತು ಪ್ರಧಾನಿಯನ್ನು ಸಂತುಷ್ಟಗೊಳಿಸುವ ಉದ್ದೇಶದಿಂದ ಇವೆಲ್ಲವನ್ನೂ ಮಾಡಲಾಗಿದೆ ಎಂಬುದು ಸಾಬೀತಾಗುತ್ತದೆ’’ ಎಂದವರು ಹೇಳಿದ್ದಾರೆ. ಒಂದು ವೇಳೆ ಹಾಗಾದಲ್ಲಿ ಇದು ನಿಜಕ್ಕೂ ನಾಚಿಕೆಗೇಡಿನ ಹಾಗೂ ಸಂವೇದನಾಹೀನ ಕೃತ್ಯವಾಗಿದೆ ಎಂದವರು ಹೇಳಿದರು.

 ಮೊರ್ಬಿ ಆಸ್ಪತ್ರೆಯ ಹಠಾತ್ ನವೀಕರಣವನ್ನು ಕಾಂಗ್ರೆಸ್(Congress) ಹಾಗೂ ಆಮ್ ಆದ್ಮಿ ಪಕ್ಷ(Aam Aadmi Party)ಗಳು ಕೂಡಾ ಟೀಕಿಸಿದೆ. ತೂಗುಸೇತುವೆ ದುರಂತದಲ್ಲಿ ಹಲವಾರು ಮಂದಿ ಮೃತಪಟ್ಟಿರುವಾಗ, ಮೋದಿ ಭೇಟಿಗೋಸ್ಕರವೇ ಆಸ್ಪತ್ರೆಯನ್ನು ಸಜ್ಜುಗೊಳಿಸಿರುವದು ನಾಚಿಕೆಗೇಡು. ಎಂದು ಅವು ಖಂಡಿಸಿವೆ.

Similar News