ಇಂದು ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ

ಬಿಜೆಪಿ, ಪ್ರಾದೇಶಿಕ ಪಕ್ಷಗಳ ನಡುವೆ ತೀವ್ರ ಪೈಪೋಟಿ

Update: 2022-11-03 04:55 GMT

ಹೊಸದಿಲ್ಲಿ:ಆರು ರಾಜ್ಯಗಳಾದ ಬಿಹಾರ, ತೆಲಂಗಾಣ, ಹರ್ಯಾಣ, ಉತ್ತರಪ್ರದೇಶ, ಮಹಾರಾಷ್ಟ್ರ ಹಾಗೂ ಒಡಿಶಾದ  ಏಳು ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಉಪಚುನಾವಣೆ ನಡೆಯುತ್ತಿದ್ದು ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷಗಳ ನಡುವೆ ಪೈಪೋಟಿ ಏರ್ಪಟ್ಟಿದೆ.  ತೆಲಂಗಾಣ ಹಾಗೂ  ಬಿಹಾರ ಚುನಾವಣೆ ಹೆಚ್ಚು ಕುತೂಹಲ ಕೆರಳಿಸಿದೆ.

ತೆಲಂಗಾಣದಲ್ಲಿ  ಬಿಜೆಪಿ ಹಾಗೂ  ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪಕ್ಷ ಟಿಆರ್‌ಎಸ್ ನಡುವೆ ಪೈಪೋಟಿ ಕಂಡುಬಂದಿದೆ. ತನ್ನ ಶಾಸಕರನ್ನು ಭಾರೀ  ಮೊತ್ತದ ಹಣದ ಮೂಲಕ ಖರೀದಿಸುವ ಪ್ರಯತ್ನ ನಡೆದಿದೆ ಎಂದು ಟಿಆರ್ ಎಸ್  ಆರೋಪವು  ಹೆಚ್ಚಿನ ಪೈಪೋಟಿಗೆ ಪ್ರಮುಖವಾಗಿದೆ.

ತೆಲಂಗಾಣದ ಮನುಗೋಡೆಯಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ ಕಾರಣ ಉಪಚುನಾವಣೆ ನಡೆಯುತ್ತಿದೆ. ಬಿಜೆಪಿಯ ಆರ್‌.ಕೆ. ರಾಜಗೋಪಾಲ್‌ ರೆಡ್ಡಿ, ಟಿಆರ್‌ಎಸ್‌ನ ಮಾಜಿ ಶಾಸಕ ಕುಸುಕುಂಟ್ಲ ಪ್ರಭಾಕರ ರೆಡ್ಡಿ ಮತ್ತು ಕಾಂಗ್ರೆಸ್‌ನ ಪಾಲ್ವಾಯಿ ಶ್ರವಂತಿ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಇತ್ತೀಚಿನ "ಮಹಾಮೈತ್ರಿಕೂಟ" ವು  ಬಿಹಾರದಲ್ಲಿ ಮೊದಲ ಚುನಾವಣಾ ಪರೀಕ್ಷೆಯನ್ನು ಎದುರಿಸುತ್ತಿದೆ, ಜೆಡಿಯು ಪಕ್ಷವು 3 ತಿಂಗಳ ಹಿಂದೆ ಬಿಜೆಪಿಯನ್ನು ತೊರೆದು ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಹಾಗೂ  ಕಾಂಗ್ರೆಸ್‌ನೊಂದಿಗೆ ಸರಕಾರ ರಚಿಸಿದೆ. ರಾಜ್ಯದಲ್ಲಿ ಮೊಕಾಮಾ ಹಾಗೂ ಗೋಪಾಲ್‌ಗಂಜ್‌ನಲ್ಲಿ ಉಪ ಚುನಾವಣೆ ನಡೆಯುತ್ತಿದೆ.  ಈ ಹಿಂದೆ ಕ್ರಮವಾಗಿ ಆರ್‌ಜೆಡಿ ಹಾಗೂ  ಬಿಜೆಪಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದವು.

ಹರ್ಯಾಣದ ಆದಂಪುರದಲ್ಲಿ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಕಿರಿಯ ಪುತ್ರ ಕುಲದೀಪ್ ಬಿಷ್ಣೋಯ್ ಅವರು ಆಗಸ್ಟ್‌ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರವಾದ ನಂತರ ಭಜನ್ ಲಾಲ್ ಕುಟುಂಬ ಐದು ದಶಕಗಳ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಉತ್ತರಪ್ರದೇಶದಲ್ಲಿ ಪ್ರತಿಷ್ಠೆಯ ಕದನದಲ್ಲಿ ಶಾಸಕ ಅರವಿಂದ್ ಗಿರಿ ಅವರ ನಿಧನದ ನಂತರ ತೆರವಾದ ಗೋಲ ಗೋರಖ್‌ನಾಥ್ ಸ್ಥಾನವನ್ನು ಉಳಿಸಿಕೊಳ್ಳುವ ಭರವಸೆಯನ್ನು ಬಿಜೆಪಿ ಹೊಂದಿದೆ. ಬಿಎಸ್‌ಪಿ ಹಾಗೂ  ಕಾಂಗ್ರೆಸ್ ಸ್ಪರ್ಧೆಯಿಂದ ದೂರ ಉಳಿದಿರುವುದರಿಂದ ಬಿಜೆಪಿ ಮತ್ತು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ನಡುವೆ ಹೋರಾಟ ನಡೆಯಲಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಬಣವು ಮುಂಬೈನ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯು ಸ್ಪರ್ಧೆಯಿಂದ ಹಿಂದೆ ಸರಿದ ನಂತರ ಆರಾಮವಾಗಿ ಗೆಲ್ಲುವ ನಿರೀಕ್ಷೆಯಿದೆ. ಇದು ಪಕ್ಷದ ಇತ್ತೀಚಿನ ವಿಭಜನೆಯ ನಂತರ ಮೊದಲ ಚುನಾವಣೆಯಾಗಿದೆ.

ಬಿಜೆಪಿ ಪಕ್ಷದ ಶಾಸಕ ಬಿಷ್ಣು ಚರಣ್ ಸೇಥಿ ಅವರ ನಿಧನದಿಂದಾಗಿ ಒಡಿಶಾದ ಧಮ್‌ನಗರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು ಈ ಸ್ಥಾನ  ಉಳಿಸಿಕೊಳ್ಳಲು ಬಿಜೆಪಿ ಆಶಿಸುತ್ತಿದೆ.

ರವಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Similar News