ಪ್ರಯಾಗರಾಜ್‌ನಲ್ಲಿ ಡೆಂಗ್ಯೂ ಹಾವಳಿ: ಉ.ಪ್ರ ಸರ್ಕಾರದ ವಿವರಣೆಗೆ ಹೈಕೋರ್ಟ್ ಅತೃಪ್ತ; ಸಿಎಂಒ, ಡಿಎಮ್‌ಗೆ ನೋಟಿಸ್‌

Update: 2022-11-03 13:26 GMT

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ (Prayagraj) ಡೆಂಗ್ಯೂ (Dengue) ಹಾವಳಿ ಮಿತಿಮೀರಿರುವುದರಿಂದ ಅದರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಸರಕಾರ ನೀಡಿದ ವಿವರಣೆಯಿಂದ ಸಮಾಧಾನಗೊಳ್ಳದ ಅಲಹಾಬಾದ್‌ ಹೈಕೋರ್ಟ್‌ (Allahabad High Court), ಬುಧವಾರ ನಡೆದ ವಿಚಾರಣೆ ವೇಳೆ ಮಹತ್ವದ ಸೂಚನೆಯೊಂದನ್ನು ನೀಡಿ ನವೆಂಬರ್‌ 4 ರ ವಿಚಾರಣೆಗೆ  ಪ್ರಯಾಗರಾಜ್‌ ಜಿಲ್ಲಾ ಮ್ಯಾಜಿಸ್ಟ್ರೇಟ್‌, ಮುನಿಸಿಪಲ್‌ ಆಯುಕ್ತರು ಮತ್ತು ಮುಖ್ಯ ವೈದ್ಯಾಧಿಕಾರಿ ಖುದ್ದಾಗಿ ಹಾಜರಾಗಬೇಕೆಂದು ಹೇಳಿದೆ.

ಪ್ರಯಾಗರಾಜ್‌ನಲ್ಲಿ ಡೆಂಗ್ಯು ಹಾವಳಿ ನಿಯಂತ್ರಿಸುವ ಉದ್ದೇಶದಿಂದ ದಾಖಲಾಗಿರುವ ಸ್ವಯಂಪ್ರೇರಿತ ಪಿಐಎಲ್‌ ಮೇಲಿನ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಲ್‌ ಹಾಗೂ ನ್ಯಾಯಮೂರ್ತಿ ಜೆ ಜೆ ಮುನೀರ್‌ ಅವರ ಪೀಠ ಮೇಲಿನ ಸೂಚನೆ ನೀಡಿದೆ.

ಡೆಂಗ್ಯು ನಿಯಂತ್ರಣಕ್ಕೆ ಕೈಗೊಳ್ಳಲಾದ ಕ್ರಮಗಳ ಕುರಿತು ಸ್ಥಳೀಯಾಡಳಿತ ನೀಡಿದ ವಿವರಣೆ ಸಮಾಧಾನ ತಂದಿಲ್ಲ ಎಂದು ನ್ಯಾಯಾಲಯ ಹೇಳಿತಲ್ಲದೆ, ನಿವಾರಣೋಪಾಯ ಕ್ರಮಗಳ ಭಾಗವಾಗಿ ನಗರದಲ್ಲಿ ಸೂಕ್ತವಾಗಿ ಫಾಗಿಂಗ್‌ ನಡೆಸಲಾಗುತ್ತಿಲ್ಲ ಎಂದು  ಹಿರಿಯ ವಕೀಲ ಹಾಗೂ ವಕೀಲರ ಸಂಘದ ಅಧ್ಯಕ್ಷ ರಾಧಾ ಕಾಂತ್‌ ಓಝಾ ಅವರ ಹೇಳಿಕೆಯನ್ನೂ ಗಣನೆಗೆ ತೆಗೆದುಕೊಂಡಿದೆ.

ಲಕ್ನೋ ನಗರದಲ್ಲೂ ಡೆಂಗ್ಯು ಹಾವಳಿ ಅಧಿಕವಾಗಿರುವುದರಿಂದ ಅಲ್ಲಿನ ನಗರ ನಿಗಮ ಕೈಗೊಂಡ ಕ್ರಮಗಳ ಕುರಿತು ವಿವರಣೆಯನ್ನು ಕಳೆದ ವಾರ ಅಲಹಾಬಾದ್‌ ಹೈಕೋರ್ಟ್‌ ಕೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: ಹಲವು ಹೊಸ ಫೀಚರ್ಸ್‌ ಬಿಡುಗಡೆಗೊಳಿಸಿದ ವಾಟ್ಸ್ ಆ್ಯಪ್‌

Similar News