ಬೆಂಗಳೂರು: ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಮಸಾಲೆ ದೋಸೆ, ಫಿಲ್ಟರ್‌ ಕಾಫಿ ಸವಿದ ಸ್ಟಾರ್‌ ಬಕ್ಸ್‌ ಸಹಸ್ಥಾಪಕ

Update: 2022-11-04 12:05 GMT

ಬೆಂಗಳೂರು: ಬೆಂಗಳೂರಿನ (Bengaluru) ಜನಪ್ರಿಯ ರೆಸ್ಟೋರೆಂಟ್‌ ವಿದ್ಯಾರ್ಥಿ ಭವನಕ್ಕೆ (Vidyarthi Bhavan) ಗುರುವಾರ ವಿಶೇಷ ಅತಿಥಿಯೊಬ್ಬರು ಆಗಮಿಸಿ ಅಲ್ಲಿದ್ದವರ ದಿನವನ್ನು ಸ್ಮರಣೀಯವಾಗಿಸಿದರು. ಬಂದವರು ಜಗತ್ತಿನ ಅತ್ಯಂತ ದೊಡ್ಡ ಕಾಫಿ ಚೈನ್‌ ಸಂಸ್ಥೆ ಸ್ಟಾರ್‌ ಬಕ್ಸ್‌ (Starbucks) ಸಹಸ್ಥಾಪಕ ಝೆವ್‌ ಸೀಗ್ಲ್ (Zev Siegl).‌ ವಿದ್ಯಾರ್ಥಿ ಭವನದಲ್ಲಿ ಅವರು ಅಲ್ಲಿನ ಖ್ಯಾತ ಮಸಾಲೆ ದೋಸೆ ಮತ್ತು ಫಿಲ್ಟರ್‌ ಕಾಫಿ ಸವಿದರು. ಅವರು ಭೇಟಿ ನೀಡಿದ ಸಂದರ್ಭದ ಕೆಲವೊಂದು ಚಿತ್ರಗಳನ್ನು ವಿದ್ಯಾರ್ಥಿ ಭವನ ತನ್ನ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಭೆ 2022 ರಲ್ಲಿ ಭಾಗವಹಿಸಲು ಬಂದಿದ್ದ ಸಂದರ್ಭ ಝೆವ್‌ ಸೀಗ್ಲ್‌ ಅವರು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಅಲ್ಲಿನ ಅತಿಥಿ ಪುಸ್ತಕದಲ್ಲಿ ತಮ್ಮ ಕೈಬರಹದಲ್ಲಿ ಸಣ್ಣ ಸಂದೇಶವೊಂದನ್ನೂ ಬರೆದಿದ್ದಾರೆ. "ನನ್ನ ಸ್ನೇಹಿತರೇ,  ನಿಮ್ಮ ಖ್ಯಾತ ಆಹಾರ ಮತ್ತು ಕಾಫಿ ಹಾಗೂ ಸವಿನಯ ಆತಿಥ್ಯ ನನಗೆ ಗೌರವ ತಂದಿದೆ. ಈ ಅತ್ಯುತ್ತಮ ಅನುಭವದೊಂದಿಗೆ ಸಿಯಾಟ್ಲ್‌ಗೆ ಮರಳುತ್ತೇನೆ, ಧನ್ಯವಾದ," ಎಂದು ಬರೆದ ಸೀಗ್ಲ್‌ ಜೊತೆಗೆ ಮೂರು ನಕ್ಷತ್ರಗಳ ಚಿಹ್ನೆಯನ್ನೂ ಅಲ್ಲಿ ಚಿತ್ರಿಸಿದ್ದಾರೆ.

ವಿದ್ಯಾರ್ಥಿ ಭವನದ ಟ್ವಿಟರ್‌ ಪೋಸ್ಟ್‌ ವೈರಲ್‌ ಆಗಿದ್ದು ಹಲವರು ಸ್ವಾರಸ್ಯಕರ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಸ್ಟಾರ್‌ ಬಕ್ಸ್‌ ನಲ್ಲೂ ಫಿಲ್ಟರ್‌ ಕಾಫಿ ದೊರೆಯಬಹುದು ಎಂದು ಒಬ್ಬರು ಬರೆದಿದ್ದರೆ ಇನ್ನೊಬ್ಬರು, ʻʻಸ್ಟಾರ್‌ ಬಕ್ಸ್‌ ಸಹಸ್ಥಾಪಕ ನಮ್ಮ ಫಿಲ್ಟರ್‌ ಕಾಪಿ ಸವಿಯುತ್ತಿರುವುದು,ʼʼ ಎಂದು ಬರೆದಿದ್ದಾರೆ.

ವಿದ್ಯಾರ್ಥಿ ಭವನ ಬೆಂಗಳೂರಿನಲ್ಲಿ 1943ರಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ಸಣ್ಣ ಉಪಾಹಾರ ಕೇಂದ್ರವಾಗಿ ಆರಂಭಗೊಂಡು ಮುಂದೆ ತನ್ನ ಸ್ವಾದಿಷ್ಟ ತಿನಿಸುಗಳಿಂದ ಜನಪ್ರಿಯತೆ ಗಳಿಸಿದೆ.

ಇದನ್ನೂ ಓದಿ: ಬೈಜುಸ್ ನ ಜಾಗತಿಕ ರಾಯಭಾರಿಯಾಗಿ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ನೇಮಕ

Similar News