×
Ad

ಕೆಎಸ್ಸಾರ್ಟಿಸಿ ಬಸ್ ಸಂಚಾರದಲ್ಲಿ ವ್ಯತಯ: ಪುದು ಗ್ರಾಪಂನಿಂದ ಮನವಿ

Update: 2022-11-04 17:49 IST

ಬಂಟ್ವಾಳ : ಕೆಎಸ್ಸಾರ್ಟಿಸಿ ಬಸ್ ಸಂಚಾರದಲ್ಲಿ ವ್ಯತಯ ಹಾಗೂ ಇತರ ಸಮಸ್ಯೆಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿದ್ದು ಕೂಡಲೇ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಪುದು ಗ್ರಾಮ ಪಂಚಾಯತ್ ವತಿಯಿಂದ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 

ಪುದು ಗ್ರಾಮದ ಫರಂಗಿಪೇಟೆಯಲ್ಲಿ ಬೆಳಗ್ಗಿನ ಸಮಯ ಕೆಎಸ್ಸಾರ್ಟಿಸಿ ಬಸ್ ಗಳು ನಿಲುಗಡೆಯಾಗದೆ ಸಂಚಾರಿಸುತ್ತದೆ. ಕೆಲವು ಬಸ್ ಗಳು ಜನರಿಂದ ತುಂಬಿ ಬರುವುದರಿಂದ ಬಸ್ ಗೆ ಹತ್ತಲು ಜಾಗ ಇರುವುದಿಲ್ಲ. ಇದರಿಂದ ಮಂಗಳೂರು ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಹಾಗೂ ಕೆಲಸ ಕಾರ್ಯಕ್ಕೆ ತೆರಳುವ ಜನರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಗ್ರಾಮ ಪಂಚಾಯತ್ ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಎಂದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ತಿಳಿಸಿದ್ದಾರೆ.

ಸಮಸ್ಯೆಯ ಬಗ್ಗೆ ಶಾಸಕ ಯು.ಟಿ.ಖಾದರ್ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದು, ಕೂಡಲೇ ಅವರು ಕೆಎಸ್ಸಾರ್ಟಿಸಿ ವಿಭಾಗಿಯಾ ನಿಯಂತ್ರಣಾ ಅಧಿಕಾರಿ ರಾಜೇಶ್ ಶೆಟ್ಟಿ ಅವರೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಕೂಡಲೇ ಸಮಸ್ಯೆ ಪರಿಹರಿಸುವಂತೆ ಹಾಗೂ ಸೋಮವಾರದಿಂದ ಬೆಳಗ್ಗಿನ ಸಮಯ ಫರಂಗಿಪೇಟೆಯಿಂದಲೇ ಎರಡು ಬಸ್ ಗಳು ಬಿಡುವಂತೆ ಸೂಚಿಸಿದರು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ತಿಳಿಸಿದರು.

ಜನರು ಕೆಲಸ ಕಾರ್ಯಗಳಿಗೆ ಹಾಗೂ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳುವ ಬೆಳಗ್ಗಿನ ಸಮಯದಲ್ಲಿ ಕೆಎಸ್ಸಾರ್ಟಿಸಿ ಬಸ್ ಗಳ ಸಂಚಾರ ಕಡಿಮೆ ಇರುತ್ತದೆ. ಬೆಳಗ್ಗೆ 10 ಗಂಟೆಯ ಬಳಿಕ ಒಂದರ ಹಿಂದೆ ಒಂದರಂತೆ ಸರಕಾರಿ ಬಸ್ ಗಳು ಸಂಚರಿಸುತ್ತವೆ. ಇದರ ಹಿಂದೆ ಖಾಸಗಿ ಬಸ್ ಗಳ ಲಾಭಿ ಇರುವಂತೆ ಕಾಣುತ್ತಿದೆ ಎಂದು ಉಮರ್ ಫಾರೂಕ್ ಆರೋಪಿಸಿದರು.

ಲಕ್ಷಾಂತರ ವಿದ್ಯಾರ್ಥಿಗಳಿಂದ ಹಾಗೂ ಅಷ್ಟೇ ಸಂಖ್ಯೆಯಲ್ಲಿ ಸಾರ್ವಜನಿಕರಿಂದ ಪಾಸ್ ಮಾಡಿಸುವ ಕೆಎಸ್ಸಾರ್ಟಿಸಿ ಸಂಸ್ಥೆ ಅದಕ್ಕೆ ಅನುಗುಣವಾದ ಸಂಖ್ಯೆಯಲ್ಲಿ ಬಸ್ ಗಳ ವ್ಯವಸ್ಥೆ ಮಾಡಬೇಕು. ಬಸ್ ಸಮಸ್ಯೆಯಿಂದ ಶಾಲಾ ಕಾಲೇಜಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗದೆ ತರಗತಿ ಹಾಗೂ ಪರೀಕ್ಷೆಯಿಂದ ಹೊರಗುಳಿಯುವ ಪರಿಸ್ಥಿತಿ ಇದೆ. ಕೆಲಸ ಕಾರ್ಯಗಳಿಗೆ ತೆರಳುವ ಜನರು ಕೂಡಾ ಇಂಥಹದ್ದೇ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಜನರಿಂದ ನಿರಂತರ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಗ್ರಾಪಂ ಅಧ್ಯಕ್ಷರ ನೇತೃತ್ವದಲ್ಲಿ ಸ್ಥಳೀಯರು ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಸರಕಾರಿ ಬಸ್ ಗಳನ್ನು ನಿಲ್ಲಿಸಿ ವಿದ್ಯಾರ್ಥಿಗಳು ಹಾಗೂ ಜನರನ್ನು ಹತ್ತಿಸುವ ಮೂಲಕ ದಿನನಿತ್ಯ ಇಲ್ಲಿ ಬಸ್ ನಿಲ್ಲಿಸುವಂತೆ ಚಾಲಜರಿಗೆ ತಿಳಿಸಲಾಯಿತು. ಬಳಿಕ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಶಾಸಕ ಯು.ಟಿ.ಖಾದರ್ ಕೂಡಾ ಅಧಿಕಾರಿಗಳೊಂದಿಗೆ ಮಾತನಾಡಿದ್ದು ಸಮಸ್ಯೆಗೆ ಕೂಡಲೇ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಉಮರ್ ಫಾರೂಕ್ ತಿಳಿಸಿದರು. 

ಕೆಎಸ್ಸಾರ್ಟಿಸಿ ಸಹಾಯಕ ಸಂಚಾರ ವ್ಯವಸ್ಥಾಪಕಿ ನಿರ್ಮಲಾ ಎ. ಮನವಿ ಪತ್ರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಸದಸ್ಯರಾದ ಝೀನತ್, ಲವಿನಾ ಉಪಸ್ಥಿತರಿದ್ದರು.

Similar News