ತಾಯಿ, ಅವಳಿ ಮಕ್ಕಳ ಸಾವು ಪ್ರಕರಣ: ಸಚಿವ ಡಾ.ಸುಧಾಕರ್ ರಾಜೀನಾಮೆಗೆ KRS ಆಗ್ರಹ

Update: 2022-11-04 13:23 GMT

ಬೆಂಗಳೂರು, ನ. 4: ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಕಾರಣ ಗುರುವಾರ ಕಸ್ತೂರಿ ಎಂಬ ಗರ್ಭಿಣಿ ಮಹಿಳೆ ಮತ್ತು ಆಕೆಯ ಗರ್ಭದಲ್ಲಿದ್ದ ಅವಳಿ ಶಿಶುಗಳ ಸಾವಾಗಿದೆ. ಇದು ಕೊಲೆಯಾಗಿದ್ದು, ಡಾ.ಕೆ.ಸುಧಾಕರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಆರ್ ಎಸ್‍ ಪಕ್ಷ ಆಗ್ರಹಿಸಿದೆ. 

ಪಕ್ಷದ ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ ಪ್ರಕಟನೆ ಹೊರಡಿಸಿದ್ದು, ''ಆಸ್ಪತ್ರೆಗಳು ಇಂದು ನೋಡಲು ಮಾಲ್‍ಗಳ ರೀತಿ ಇದ್ದರೂ ಒಳಗೆ ಸಂಪೂರ್ಣ ಪೊಳ್ಳಾಗಿದೆ. ಕಸ್ತೂರಿ ಎಂಬ ತಾಯಿ ಮತ್ತು ಆಕೆಯ ಶಿಶುಗಳ ಕೊಲೆಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ಅವರು ನೇರವಾಗಿ ಕಾರಣರಾಗಿದ್ದಾರೆ. ರಾಜ್ಯದಲಿನ ಆಸ್ಪತ್ರೆಗಳ ಪರಿಸ್ಥಿತಿ ಹೀಗಿದೆ ಎಂದು ಈ ಘಟನೆ ತಿಳಿಸಿದೆ ಎಂದು ಹೇಳಿರುವ ಸಚಿವ ಸುಧಾಕರ್ ಅವರು ತಮ್ಮ ಅಜ್ಞಾನ ಮತ್ತು ಅಯೋಗ್ಯತನವನ್ನು ತೋರಿಸಿದ್ದಾರೆ. ಇದು ಅವರು ಯಾವ ರೀತಿಯಲ್ಲಿ ತಮ್ಮ ಖಾತೆಯನ್ನು ನಿರ್ವಹಿಸುತ್ತಿದ್ದಾರೆ'' ಎಂದು ಪ್ರಶ್ನಿಸಿದ್ದಾರೆ.

''ಕೆಆರ್‌ಎಸ್ ಪಕ್ಷವು ನಿರಂತರವಾಗಿ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿಯ ಅವ್ಯವಸ್ಥೆ ಅಕ್ರಮ ದುರಾಚಾರ, ದುರ್ವರ್ತನೆ ಮತ್ತು ಭ್ರಷ್ಟಾಚಾರಗಳ ಬಗ್ಗೆ ಹೋರಾಟ ಮಾಡುತ್ತಿದೆ. ಹಾಗೆಯೇ ಮಾಧ್ಯಮಗಳೂ ಕೂಡ ನಿರಂತರವಾಗಿ ರಾಜ್ಯದ ಆರೋಗ್ಯ ವ್ಯವಸ್ಥೆಯ ಕುಸಿತದ ಬಗ್ಗೆ ವರದಿ ಮಾಡುತ್ತಿವೆ. ಇದ್ಯಾವುದನ್ನು ಗಮನಿಸದೆ ತುಮಕೂರಿನ ಘಟನೆ ಕಣ್ಣು ತೆರೆಸಿದೆ ಎಂದು ಹೇಳುವ ಸಚಿವರು ತಮ್ಮ ಹೊಣಗೇಡಿತನ ಯಾವ ಮಟ್ಟದ್ದು ಎಂದು ತೋರಿಸಿದ್ದಾರೆ. ಇಂತಹ ಸಚಿವರ ಅವಶ್ಯಕತೆ ರಾಜ್ಯದ ಜನತೆಗೆ ಇಲ್ಲ. ಇದ್ಯಾವುದರ ಬಗ್ಗೆ ಕ್ರಮ ವಹಿಸಲಾಗುತ್ತಿಲ್ಲ ಎಂದರೆ ಈ ಅಕ್ರಮಗಳಲ್ಲಿ ಸಚಿವರು ಮತ್ತು ಉನ್ನತ ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂದು ತಿಳಿಯಬೇಕಾಗುತ್ತದೆ'' ಎಂದು ಹೇಳಿದ್ದಾರೆ.

''ಉಚಿತ ಆರೋಗ್ಯ ಸೇವೆ ಎಂದು ಹೇಳುವ ಸರ್ಕಾರ, ಅನವಶ್ಯಕವಾಗಿ ಯೋಜನೆಗಳನ್ನು ರೂಪಿಸಿ ನೂರೊಂದು ಕಾರ್ಡ್ ನೀಡಿ, ಅವು ಇಲ್ಲ ಎಂಬ ಕಾರಣಕ್ಕೆ, ನೀಡಬೇಕಾದ ಕನಿಷ್ಠ ಮಟ್ಟದ ಸೇವೆಯನ್ನು ಕೂಡ ನಿರಾಕರಿಸಲಾಗುತ್ತಿದೆ. ಆಸ್ಪತ್ರೆಗೆ ದಾಖಲಾಗಬೇಕಾದರೆ, ಅದರಲ್ಲೂ ಸರ್ಕಾರಿ ಆಸ್ಪತ್ರೆಗೆ ದಾಖಲಾಗಬೇಕಾದರೆ ಜನರು ಯಾಕಾದರೂ ಯಾವ ದಾಖಲೆ ತೋರಿಸಬೇಕು, ಇಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುವವರು ಭಾರತೀಯರೇ ಆಗಿರಬೇಕಾದರೆ ಯಾವ ದಾಖಲೆ ಸಂಗ್ರಹಿಸಿ ಏನಾಗಬೇಕಾಗಿದೆ? ಸಂಗ್ರಹಿಸಿರುವ ಮಾಹಿತಿಯನ್ನು ಡೇಟಾಬೇಸ್ ರೂಪದಲ್ಲಿ ಶೇಖರಿಸುವ ಕನಿಷ್ಠ ಮಟ್ಟದ ವ್ಯವಸ್ಥೆಯೂ ಇಲ್ಲದೆ, ಕಾಗದದ ರಾಶಿ ಗುಡ್ಡೆ ಹಾಕಿಕೊಂಡು, ವೈದ್ಯರು ಮತ್ತು ಸಿಬ್ಬಂದಿಗಳ ಸಮಯ ವ್ಯರ್ಥ ಮಾಡುವ ಇಂತಹ ಅವೈಜ್ಞಾನಿಕ ಪದ್ಧತಿಯನ್ನು ರಾಜ್ಯ ಸರ್ಕಾರ ನಡೆಸಿಕೊಂಡು ಬರುತ್ತಿದೆ. ಇಂತಹ ಅಗತ್ಯವಿಲ್ಲದ ಕ್ರಮಗಳನ್ನು ಕೂಡಲೇ ಕೈಬಿಡಬೇಕು ಮತ್ತು ಸರ್ವರಿಗೂ ಗುಣಮಟ್ಟದ ಉಚಿತ ಆರೋಗ್ಯ ಸೇವೆ ಒದಗಿಸಬೇಕು. ಹಾಗೆ ರಾಜ್ಯದ ಪ್ರತಿ ನಾಗರೀಕರ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸಿ ಅವರಿಗೆ ಜೀವನವಿಡಿ ನಿರಂತರವಾಗಿ ಅದನ್ನು ಒದಗಿಸುವ ವ್ಯವಸ್ಥೆ ನಿರ್ಮಾಣ ಮಾಡಬೇಕು'' ಎಂದು ಒತ್ತಾಯಿಸಿದ್ದಾರೆ. 

Similar News