×
Ad

ಎಸ್ಸಿ-ಎಸ್ಟಿ ಸಮುದಾಯದ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಲು ಸಚಿವರಿಗೆ ಮನವಿ

Update: 2022-11-04 19:59 IST

ಮಂಗಳೂರು : ಸರಕಾರದಿಂದ ಜಾಗ ಮಂಜೂರಾತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರ ಭೂಪರಿವರ್ತನೆಗೆ ಅವಕಾಶ ಕಲ್ಪಿಸಬೇಕು ಎಂದು ಮುಖಂಡರು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಮನವಿ ಸಲ್ಲಿಸಿದ್ದಾರೆ.

ದ.ಕ.ಜಿಪಂನಲ್ಲಿರುವ ತನ್ನ ಕಚೇರಿಯಲ್ಲಿ ಶುಕ್ರವಾರ ಸಾರ್ವಜನಿಕರ ಕುಂದುಕೊರತೆ, ಅರ್ಜಿ ಸ್ವೀಕಾರದ ವೇಳೆ ಸಚಿವರಿಗೆ ಮನವಿ ಸಲ್ಲಿಸಿದ ಎಸ್ಸಿ-ಎಸ್ಟಿ ಮುಖಂಡರು ಸರಕಾರದಿಂದ ಜಾಗ ಮಂಜೂರಾದರೂ ಪಿಟಿಸಿಎಲ್ (ಪ್ರೊಹಿಬಿಷನಲ್ ಆಫ್ ಟ್ರಾನ್ಸಫರ್ ಆಫ್ ಸರ್‌ಟೈನ್ ಲಾಂಡ್ಸ್) ಜಾಗ ಎಂಬ ಕಾರಣಕ್ಕೆ ಅದನ್ನು ಪರಿವರ್ತನೆ (ಕನ್ವರ್ಷನ್)ಗೊಳಿಸಲು ಸಾಧ್ಯವಾಗುತ್ತಿಲ್ಲ. ಜಾಗ ಕನ್ವರ್ಷನ್ ಮಾಡಿಸದಿದ್ದರೆ ಮನೆ ನಿರ್ಮಿಸಲು ಸಾಲ ಸೌಲಭ್ಯ ಸಹಿತ ಸರಕಾರದ ಯಾವುದೇ ಸವಲತ್ತು ಸಿಗುತ್ತಿಲ್ಲ ಎಂದು ಹೇಳಿದರು.

ಕರಾವಳಿ ಜಿಲ್ಲೆಯ ಹೊರತು ಬೇರೆ ಕಡೆಗಳಲ್ಲಿ ಗ್ರಾಮ ಠಾಣಾ ಜಾಗಗಳು ಇರುವುದರಿಂದ ಅಲ್ಲಿ ಭೂಪರಿವರ್ತನೆಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಕರಾವಳಿ ಜಿಲ್ಲೆಯಲ್ಲಿ ಪ.ಜಾತಿ, ಪಂಗಡಕ್ಕೆ ಸರಕಾರ ಜಾಗ ನೀಡಿದರೂ ಪಿಟಿಸಿಎಲ್ ತೊಂದರೆಯಿಂದಾಗಿ ಭೂ ಪರಿವರ್ತನೆಯಾಗುತ್ತಿಲ್ಲ. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಿಯಮಾನುಸಾರ ಪರಿವರ್ತನೆಗೆ ಅವಕಾಶ ಇಲ್ಲ ಎನ್ನುತ್ತಿದ್ದಾರೆ ಎಂದು ಎಸ್ಸಿ-ಎಸ್ಟಿ ಸಮುದಾಯ ಮುಖಂಡರು ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಅಹವಾಲು ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈ ಸಮಸ್ಯೆ ಕರಾವಳಿಯಲ್ಲಿ ಮಾತ್ರ ಇದೆ. ಸ್ವಂತ ಜಾಗ ಇದ್ದರೂ ಮನೆ ನಿರ್ಮಾಣಕ್ಕೆ ಅಸಾಧ್ಯವಾದ ಪರಿಸ್ಥಿತಿ ಫಲಾನುಭವಿಗಳದ್ದಾಗಿದೆ. ಆ ಹಿನ್ನೆಲೆಯಲ್ಲಿ ನಿಗದಿತ ಕಾಲಾವಧಿವರೆಗೆ ಪರಭಾರೆಗೆ ಅವಕಾಶ ಇಲ್ಲ ಎಂಬ ಷರತ್ತು ವಿಧಿಸಿ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸುವಂತೆ ಕೋರಿ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಸರಕಾರ ಇತ್ತೀಚೆಗೆ ದೈವಾರಾಧಕರಿಗೆ ಮಾಸಾಶನ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ೫೮ ವರ್ಷದ ವಯೋಮಿತಿ ಹಾಗೂ ಕುಟುಂಬದ ವರಮಾನ ೧.೨೫ ಲಕ್ಷ ರೂ. ನಿಗದಿಪಡಿಸಲಾಗಿದೆ. ಇದರಿಂದಾಗಿ ಅರ್ಹತೆ ಇದ್ದರೂ ಈ ಷರತ್ತಿನಿಂದಾಗಿ ಅನೇಕ ಮಂದಿ ಮಾಸಾಶನದಿಂದ ವಂಚಿತಗೊಳ್ಳುತ್ತಿದ್ದಾರೆ. ಹಾಗಾಗಿ ವಯೋಮಿತಿಯನ್ನು ೫೫ ವರ್ಷ ಎಂದು ನಿಗದಿಪಡಿಸಬೇಕು. ಕುಟುಂಬದ ವರಮಾನ ಬದಲು ವ್ಯಕ್ತಿಯ ಆದಾಯ ಎಂದು ಮಿತಿ ವಿಧಿಸಬೇಕು ಎಂದು ಪಾಣಾರ ಸಮುದಾಯದ ಪ್ರಮುಖರು ಸಚಿವರಿಗೆ ಮನವಿ ಸಲ್ಲಿಸಿದರು.

Similar News