ಶೇ.70ರಷ್ಟು ಬಂಡವಾಳ ‘ಬಿಯಾಂಡ್ ಬೆಂಗಳೂರು’ ಪಾಲು: ಸಚಿವ ಮುರುಗೇಶ್ ನಿರಾಣಿ

Update: 2022-11-04 16:16 GMT

ಬೆಂಗಳೂರು, ನ.4: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವು ಅತ್ಯಂತ ಯಶಸ್ವಿಯಾಗಿದ್ದು, ಸುಮಾರು 10 ಲಕ್ಷ ಕೋಟಿ ರೂ.ಗಳ ಹೂಡಿಕೆ ಸಂಬಂಧ ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ನಿರಾಣಿ ತಿಳಿಸಿದರು.

ಶುಕ್ರವಾರ ಬೆಂಗಳೂರು ಅರಮನೆ ಆವರಣದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ-2022’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಸರಕಾರದ ‘ಬಿಯಾಂಡ್ ಬೆಂಗಳೂರು’ ಉಪಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದ್ದು, ಶೇ.70ರಷ್ಟು ಬಂಡವಾಳ ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಹೂಡಿಕೆಯಾಗಲಿದೆ ಎಂದರು.

ಈಗಾಗಲೆ ಧಾರವಾಡದಲ್ಲಿ  ಎಫ್‍ಎಂಸಿಜಿ ಕ್ಲಸ್ಟರ್ ಆರಂಭಿಸಲು ಚಾಲನೆ ನೀಡಲಾಗಿದ್ದು, ಸುಮಾರು 10 ಸಾವಿರ ಕೋಟಿ ರೂ.ಹೂಡಿಕೆಯಾಗಲಿದೆ. ಮುಂದಿನ ಎರಡು, ಮೂರು ವರ್ಷಗಳಲ್ಲಿ ಸುಮಾರು ಒಂದು ಲಕ್ಷ ಉದ್ಯೋಗಾವಕಾಶಗಳು ಲಭ್ಯವಾಗಲಿದೆ. 2025ರ ಜನವರಿಯಲ್ಲಿ ಪುನಃ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು.

ಹಸಿರು ಇಂಧನ ಕ್ಷೇತ್ರಕ್ಕೆ 2 ಲಕ್ಷ ಕೋಟಿ ರೂ.ಹೂಡಿಕೆ: ಈ ಹೂಡಿಕೆದಾರರ ಸಮಾವೇಶದಲ್ಲಿ ಹಸಿರು ಇಂಧನ(ಗ್ರೀನ್ ಎನರ್ಜಿ) ಕ್ಷೇತ್ರದಲ್ಲಿ ಎರಡು ಲಕ್ಷ ಕೋಟಿ ರೂ.ಗಳ ಹೂಡಿಕೆಯ ಒಪ್ಪಂದ ಆಗಿದೆ. ದೇಶ ಹಾಗೂ ರಾಜ್ಯದ ಆರ್ಥಿಕ ಬೆಳವಣಿಗೆಗೆ ದೊಡ್ಡ ಪ್ರಮಾಣದಲ್ಲಿ ಉದ್ಯಮಗಳು ಬರಬೇಕು. ಅವುಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.

ಮೂಲಭೂತ ಸೌಕರ್ಯಗಳಲ್ಲಿ ಇಂಧನ ಇಲಾಖೆಯ ಪಾತ್ರ ಬಹುದೊಡ್ಡದು. ನಮ್ಮ ರಾಜ್ಯ ಹಸಿರು ಇಂಧನ ಉತ್ಪಾದನೆಯಲ್ಲಿ ಬೇರೆ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ. ಕರ್ನಾಟಕದಲ್ಲಿ ಉತ್ಪಾದನೆ ಆಗುವ 30 ಸಾವಿರ ಮೆಗಾವ್ಯಾಟ್ ಇಂಧನ ಪೈಕಿ, 15,800 ಮೆಗಾವ್ಯಾಟ್ ಉತ್ಪಾದನೆ ಗ್ರೀನ್ ಎನರ್ಜಿ ಮೂಲಕ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಮುಂದಿನ 10-15 ವರ್ಷಗಳಲ್ಲಿ ಇಂಧನ ಇಲಾಖೆ ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಲಕಾಲಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅಲ್ಲದೆ, ಸೌರವಿದ್ಯುತ್ ಹಾಗೂ ಪವನ ವಿದ್ಯುತ್ ಉತ್ಪಾದನೆ ಮಾಡುವ ಘಟಕ ಒಳಗೊಂಡ ಹೈಬ್ರೀಡ್ ಪಾರ್ಕ್ ನಿರ್ಮಾಣ ಮಾಡಲು ಮುಖ್ಯಮಂತ್ರಿ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದಾರೆ ಎಂದು ಸುನೀಲ್ ಕುಮಾರ್ ಹೇಳಿದರು.

ಕಳೆದ ಮಾರ್ಚ್‍ನಲ್ಲಿ 14,800 ಮೆಗಾವ್ಯಾಟ್ ಬೇಡಿಕೆ ಬಂದಿತ್ತು. ಅದನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದೇವೆ. ಭವಿಷ್ಯದಲ್ಲಿಯೂ ಈ ರೀತಿಯ ಬೇಡಿಕೆಗಳನ್ನು ಪೂರೈಸಲು ಬದ್ಧವಾಗಿ ಕೆಲಸ ಮಾಡಲಾಗುತ್ತಿದೆ. ಎರಡು ಲಕ್ಷ ಕೋಟಿ ರೂ.ಗಳು ಗ್ರೀನ್ ಎನರ್ಜಿ ಕ್ಷೇತ್ರಕ್ಕೆ ಬಂದಿರುವುದರಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಸುನೀಲ್ ಕುಮಾರ್ ಹೇಳಿದರು.

ಉತ್ಪಾದನೆ ಹೆಚ್ಚಾದಾಗ ಗ್ರಿಡ್ ನಿರ್ವಹಣೆ, ಹೊಸ ಸಬ್ ಸ್ಟೇಷನ್ ನಿರ್ವಹಣೆಯನ್ನು ಯಶಸ್ವಿ ಆಗಿ ನಿರ್ವಹಣೆ ಮಾಡುತ್ತೇವೆ. ಗುಣಮಟ್ಟದ ವಿದ್ಯುತ್ ಸರಜರಾಜು ಮಾಡುವ 34 ಹೆಚ್ಚು ಸಬ್ ಸ್ಟೇಷನ್ ನಿರ್ಮಾಣ ಮಾಡಲಾಗಿದೆ. 100ಕ್ಕೂ ಹೆಚ್ಚು ಸಬ್ ಸ್ಟೇಷನ್‍ಗಳನ್ನು ಉನ್ನತೀಕರಿಸಲಾಗಿದೆ. ಹೈಬ್ರೀಡ್ ಪಾರ್ಕ್ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಸೋಲಾರ್ ಉತ್ಪಾದನೆಯಲ್ಲೂ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.

ಸಮಾವೇಶದಲ್ಲಿ ಕೇಂದ್ರ ಸಚಿವ ಭಗವಂತ ಖೂಬ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ, ಅವಾಡ ಸಮೂಹದ ಅಧ್ಯಕ್ಷ ವಿನೀತ್ ಮಿತ್ತಲ್, ಎಫ್‍ಕೆಸಿಸಿಐ ಅಧ್ಯಕ್ಷ ಉಲ್ಲಾಸ್ ಕಾಮತ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Similar News