×
Ad

ನಿರೀಕ್ಷೆಗೂ ಮೀರಿ ಯಶಸ್ವಿ, 9.89 ಲಕ್ಷ ಕೋಟಿ ರೂ.ಹೂಡಿಕೆಗೆ ಒಡಂಬಡಿಕೆ: ಮುಖ್ಯಮಂತ್ರಿ ಬೊಮ್ಮಾಯಿ

‘ಇನ್ವೆಸ್ಟ್ ಕರ್ನಾಟಕ-2022’ ಸಮಾರೋಪ ಸಮಾರಂಭ

Update: 2022-11-04 21:53 IST

ಬೆಂಗಳೂರು, ನ.4: ಜಾಗತಿಕ ಹೂಡಿಕೆದಾರರ ಸಮಾವೇಶವು ನಮ್ಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಸುಮಾರು 5 ಲಕ್ಷ ಕೋಟಿ ರೂ.ಹೂಡಿಕೆಯ ನಿರೀಕ್ಷೆ ಇತ್ತು. ಆದರೆ, ಸಚಿವ ಮುರುಗೇಶ್ ನಿರಾಣಿ ಹಾಗೂ ನಮ್ಮ ಅಧಿಕಾರಿಗಳ ಪರಿಶ್ರಮದಿಂದಾಗಿ ಸುಮಾರು 9.89 ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿಕೆಯ ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶುಕ್ರವಾರ ಬೆಂಗಳೂರು ಅರಮನೆ ಆವರಣದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ-2022’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲ ವರ್ಗದ ಜನರು ಉದ್ಯೋಗಪತಿಗಳು ಆಗಬೇಕು, ಉದ್ಯೋಗದಾತರಾಗಬೇಕು. ಇತ್ತೀಚೆಗೆ ದಲಿತ ಉದ್ಯಮಿಗಳ ನಿಯೋಗ ನನ್ನನ್ನು ಭೇಟಿ ಮಾಡಿ, ಪ್ರಮುಖ ವಲಯಗಳಲ್ಲಿ ಮುಂದುವರೆಯಲು ಪ್ರಯತ್ನಿಸುತ್ತಿರುವ ಕುರಿತು ತಿಳಿಸಿತು. ಬುದ್ಧಿವಂತಿಕೆ ಹಾಗೂ ಪರಿಶ್ರಮ ಯಾವುದೆ ಒಬ್ಬ ವ್ಯಕ್ತಿ ಅಥವಾ ವರ್ಗದ ಸ್ವತ್ತಲ್ಲ ಎಂದರು.

ಈ ಬಾರಿಯ ಹೂಡಿಕೆದಾರರ ಸಮಾವೇಶವು ಬಹಳ ವಿಶಿಷ್ಟವಾದದ್ದು. ವಿಶ್ವದ ಪ್ರಮುಖ ರಾಷ್ಟ್ರಗಳು ಆರ್ಥಿಕ ಹಿಂಜರಿತ ಅನುಭವಿಸುತ್ತಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಈ ಸಮಾವೇಶ ಯಶಸ್ವಿಯಾಗಿದೆ. ನಮ್ಮ ರಾಜ್ಯವು ಜನ, ಜೀವನ ಕಾಪಾಡಲು ಧೈರ್ಯ ಹಾಗೂ ಸಾಹಸದಿಂದ ಈ ಸಮಾವೇಶವನ್ನು ಆಯೋಜನೆ ಮಾಡಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಉದ್ಯಮಿಗಳು ನಮ್ಮ ಸರಕಾರದ ಮೇಲೆ ಭರವಸೆ ಇಟ್ಟು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ. ನಮ್ಮ ಶಕ್ತಿ ನಮ್ಮ ಜನ, ನಮ್ಮ ತಾಂತ್ರಿಕವಾಗಿ ಮುಂದುವರೆದಿರುವ ಕೈಗಾರಿಕೆಗಳು, ಕೌಶಲ್ಯ ಭರಿತ ಮಾನವ ಸಂಪನ್ಮೂಲ, ದೂರ ದೃಷ್ಟಿಯ ಸರಕಾರ, ಜನಸ್ನೇಹಿ ನೀತಿಗಳು ಎಂದು ಮುಖ್ಯಮಂತ್ರಿ ತಿಳಿಸಿದರು.

ಒಂದು ಕಾಲದಲ್ಲಿ ‘ಬಂಗಾಳ ಇಂದು ಏನನ್ನೂ ಆಲೋಚಿಸುತ್ತದೆಯೋ, ಭಾರತ ಅದನ್ನು ನಾಳೆ ಆಲೋಚಿಸುತ್ತದೆ’ ಎಂಬ ಮಾತು ಚಾಲ್ತಿಯಲ್ಲಿತ್ತು. ಇನ್ನು ಮುಂದೆ ‘ಬೆಂಗಳೂರು ಇಂದು ಏನನ್ನು ಆಲೋಚಿಸುತ್ತದೆಯೋ, ಭಾರತ ಅದನ್ನು ನಾಳೆ ಆಲೋಚಿಸುತ್ತದೆ’ ಎಂದು ಬದಲಾಯಿಸಲ್ಪಡುತ್ತದೆ ಎಂದು ಅವರು ಹೇಳಿದರು.

ಗಲ್ಫ್ ರಾಷ್ಟ್ರಗಳಿಗೆ ಪೈಪೋಟಿ: ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ತಂತ್ರಜ್ಞಾನ ಬಳಕೆಗೆ ಒತ್ತು ನೀಡಲಾಗುತ್ತಿದೆ. ಗ್ರೀನ್ ಅಮೋನಿಯಾ, ಹೈಡ್ರೋಜನ್ ಫ್ಯೂಯಲ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರೀನ್ ಅಮೋನಿಯಾ, ಹೈಡ್ರೋಜನ್ ಫ್ಯೂಯಲ್ ಉತ್ಪಾದನೆ ವಿಚಾರದಲ್ಲಿ ನಾವು ಗಲ್ಫ್ ರಾಷ್ಟ್ರಗಳಿಗೆ ಪೈಪೋಟಿ ನೀಡಲು ಬಯಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಸುಮಾರು 9.89 ಲಕ್ಷ ಕೋಟಿ ರೂ. ಹೂಡಿಕೆಗೆ ಸಂಬಂಧಿಸಿದ ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ. ಈ ಪೈಕಿ ಶೇ.29ರಷ್ಟು ಹೂಡಿಕೆಯ ಯೋಜನೆಗಳಿಗೆ ರಾಜ್ಯ ಸರಕಾರ ಅನುಮೋದನೆಗಳನ್ನು ನೀಡಿದೆ. ಆರ್ ಅಂಡ್ ಡಿ, ಸನ್ ಶೈನ್, ಸನ್‍ರೈಸ್, ಗ್ರೀನ್ ಎನರ್ಜಿ, ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಹೂಡಿಕೆ ಬಂದಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ತುಮಕೂರು, ಮೈಸೂರು ಸೇರಿದಂತೆ ಇನ್ನಿತರೆಡೆ ಲ್ಯಾಂಡ್ ಬ್ಯಾಂಕ್ ಮೂಲಕ 50 ಸಾವಿರ ಎಕರೆ ಭೂಮಿಯನ್ನು ಕಾಯ್ದಿರಿಸಲಾಗಿದೆ. ಶೀಘ್ರವೆ ಶಿವಮೊಗ್ಗ, ಬಿಜಾಪುರ ವಿಮಾನ ನಿಲ್ದಾಣಗಳು ಕಾರ್ಯಾರಂಭ ಮಾಡಲಿವೆ. ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಭವಿಷ್ಯದಲ್ಲಿ ಬೆಂಗಳೂರು ನಂಬರ್ ಒನ್ ಆರ್ಥಿಕ ಹಬ್ ಆಗಲಿದೆ. ಕಾರ್ಮಿಕ, ರೈತ, ಯುವ ಸೇರಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಈ ಹೂಡಿಕೆಗಳ ಪ್ರಯೋಜನ ಸಿಗಬೇಕು ಎಂಬುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ಭಾರತದ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿಗೆ, ರಾಜ್ಯದಿಂದ ಒಂದು ಟ್ರಿಲಿಯನ್ ಡಾಲರ್ ಕೊಡುಗೆ ನೀಡುವ ನಿಟ್ಟಿನಲ್ಲಿ ನಮ್ಮ ಸರಕಾರ ಕೆಲಸ ಮಾಡುತ್ತಿದೆ. ಒಪ್ಪಂದಗಳು ಕೇವಲ ಕಡತಗಳಿಗೆ ಸೀಮಿತವಾಗಿರದೆ, ಮುಂದಿನ ಮೂರು ತಿಂಗಳಲ್ಲಿ ಈ ಒಪ್ಪಂದಗಳು ಕಾರ್ಯಗತ ಆಗುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡಲಿದೆ ಎಂದು ಮುಖ್ಯಮಂತ್ರಿ ಹೇಳಿದರು. 

‘2000ನೆ ಇಸವಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 27 ಸಾವಿರ ಕೋಟಿ ರೂ.ಗಳ ಒಡಂಬಡಿಕೆಗಳಿಗೆ ಸಹಿ ಹಾಕಲಾಗಿತ್ತು. ಅನುಷ್ಠಾನಗೊಂಡಿದ್ದು 12 ಸಾವಿರ ಕೋಟಿ ರೂ.ಗಳ ಯೋಜನೆಗಳು, 2010ರಲ್ಲಿ 3.94 ಲಕ್ಷ ಕೋಟಿ ರೂ.ಗಳ ಒಡಂಬಡಿಕೆಗಳಿಗೆ ಸಹಿ, ಶೇ.40ರಷ್ಟು ಮಾತ್ರ ಅನುಷ್ಠಾನ, 2012ರಲ್ಲಿ 6.77 ಲಕ್ಷ ಕೋಟಿ ರೂ.ಗಳ ಒಡಂಬಡಿಕೆಗಳಿಗೆ ಸಹಿ, ಶೇ.27ರಷ್ಟು ಮಾತ್ರ ಅನುಷ್ಠಾನ, 2016ರಲ್ಲಿ 3.50ಲಕ್ಷ ಕೋಟಿ ರೂ.ಗಳ ಒಡಂಬಡಿಕೆಗಳಿಗೆ ಸಹಿ, ಶೇ.15ರಷ್ಟು ಮಾತ್ರ ಅನುಷ್ಠಾನವಾಗಿದೆ’

-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ  

Similar News