ಬೆಂಗಳೂರು | ಶಾಲೆಯಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು: ಪ್ರಕರಣ ದಾಖಲು
ಬೆಂಗಳೂರು: ನಗರದ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಪೋಷಕರು ದೂರು ದಾಖಲಿಸಿದ್ದಾರೆ.
11 ವರ್ಷದ ನಿಶಿತಾ ಮೃತ ಬಾಲಕಿ ಎಂದು ತಿಳಿದು ಬಂದಿದೆ.
ಜಾಲಹಳ್ಳಿ ವ್ಯಾಪ್ತಿಯ ಗಂಗಮ್ಮಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಚಂದ್ರಾಪುರದಲ್ಲಿರುವ ಖಾಸಗಿ ಶಾಲೆಯಲ್ಲಿ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ .ಈಕೆ ನಿನ್ನೆ (ಶುಕ್ರವಾರ) ಮಧ್ಯಾಹ್ನ 3 ಗಂಟೆ ವೇಳೆಗೆ ಮೃತಪಟ್ಟಿದ್ದು, ಶಾಲೆಯಿಂದ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಬಿದ್ದ ಬಾಲಕಿಯನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಪೋಷಕರು ಗಂಗಮ್ಮ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
► ಶಿಕ್ಷಕಿಯಿಂದ ಹಲ್ಲೆ: ಪೋಷಕರ ಆರೋಪ
''ನನ್ನ ಮೊಮ್ಮಗಳ ಮೇಲೆ ಶಿಕ್ಷಕಿಯೊಬ್ಬರು ಹಲ್ಲೆ ಮಾಡಿದ್ದಾರೆ. ಆಗ ಮಗು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದೆ. ಈ ಹಿಂದೆ ಕೂಡ ಡೆಸ್ಟರ್‌ನಿಂದ ಕಣ್ಣಿಗೆ ಹೊಡೆದಿದ್ದರು. ನಿನ್ನೆ ಕೂಡ ಹೊಡೆದಿದ್ದಾರೆ, ಅದೇ ಕಾರಣಕ್ಕೆ ಮಗು ಮೃತಪಟ್ಟಿದೆ. ನಮಗೆ ಹಣ ಬೇಡ, ನಮಗೆ ನ್ಯಾಯಬೇಕು. ಹಲ್ಲೆ ಮಾಡಿದ ಶಿಕ್ಷಕಿ ಬಂಧಿಸಬೇಕು''
ನರ್ಸಮ್ಮ - ಮೃತ ಬಾಲಕಿಯ ಅಜ್ಜಿ