‘ಕೇಶವಕೃಪಾ’ ಆದೇಶವನ್ನಷ್ಟೇ ಪಾಲಿಸುವ ಬೊಮ್ಮಾಯಿಗೆ ಸಚಿವ ಸಂಪುಟದ ಮೇಲೆ ನಿಯಂತ್ರಣ ಇಲ್ಲ: ಪ್ರಿಯಾಂಕ್ ಖರ್ಗೆ

ತಾಯಿ, ಅವಳಿ ಮಕ್ಕಳ ಸಾವು ಪ್ರಕರಣ

Update: 2022-11-05 11:47 GMT

ಬೆಂಗಳೂರು, ನ. 5: ತುಮಕೂರಿನಲ್ಲಿ ನಡೆದ ತಾಯಿ, ಅವಳಿ ಮಕ್ಕಳ ಸಾವು ಪ್ರಕರಣಗಳನ್ನು ಗಮನಿಸಿದರೆ ಸಿಎಂಗೆ ತಮ್ಮ ಸಚಿವ ಸಂಪುಟದ ಮೇಲೆ ನಿಯಂತ್ರಣ ಇಲ್ಲ. ಅವರು ಆರೆಸ್ಸೆಸ್ ಕೈಗೊಂಬೆಯಾಗಿದ್ದು, ‘ಕೇಶವಕೃಪಾ’ ಆದೇಶವನ್ನಷ್ಟೇ ಪಾಲಿಸುತ್ತಿದ್ದಾರೆ. ಇಲ್ಲವಾದರೆ ಅವರು ಕ್ರಮ ಕೈಗೊಳ್ಳದಿರಲು ಸಾಧ್ಯವೇ? ಎಂದು ಕೆಪಿಸಿಸಿ ಸಂವಹನ ವಿಭಾಗ ಮುಖ್ಯಸ್ಥ  ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಿಎಂ ಬೊಮ್ಮಾಯಿ ಕೋಮುಗಲಭೆ ಆದಾಗಲೂ ಸುಮ್ಮನೆ ಕೂತಿದ್ದರು. ಬೆಂಗಳೂರಿನಲ್ಲಿ ಮಳೆ ಅವಾಂತರ, ಅತಿವೃಷ್ಟಿಯಿಂದ ಊರೇ ಮುಳುಗಿದಾಗ ವರದಿ ನೀಡಿ ಎಂದು ಸಚಿವರಿಗೆ ಹೇಳಿದರೆ ಒಬ್ಬರೂ ಹೋಗಲಿಲ್ಲ. ಕಡೆಗೆ ಇವರೆ ಹೋದರು. ಈಗ ಇಷ್ಟೆಲ್ಲಾ ಆದರೂ ಸುಮ್ಮನಿದ್ದಾರೆ. ಇವರು ಸರಕಾರದ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರಾ?’ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಬಿಜೆಪಿ ಶಾಸಕನ ಹೆಸರಿನಲ್ಲಿ ಕೆಎಸ್ಸಾರ್ಟಿಸಿ ಸಿಬ್ಬಂದಿಯ ವರ್ಗಾವಣೆಗೆ ಯತ್ನ: ಆರೋಪಿ ಸೆರೆ

‘ಈ ಸರಕಾರ ಮಾನವೀಯತೆಯನ್ನು ಕಳೆದುಕೊಂಡಿದೆ. ಇಂತಹ ಗಂಭೀರ ಪ್ರಕರಣಲ್ಲಿ ಯಾರೇ ಆದರೂ ಮಾನವೀಯತೆ ಮೆರೆಯಬೇಕು. ಆದರೆ, ಸರಕಾರದಲ್ಲಿ ಮಾನವೀಯತೆ ಹಣ ಕೊಟ್ಟವರಿಗೆ ಮಾತ್ರ. ಹಣ ಕೊಟ್ಟವರಿಗೆ ಪೋಸ್ಟಿಂಗ್ ನೀಡಲಾಗುತ್ತದೆ. ಹೀಗಾಗಿ ಅಧಿಕಾರಿ ಹಾಗೂ ಸಿಬ್ಬಂದಿ ಮಾನವೀಯತೆ ಮರೆತು ಹಣ ಗಳಿಸುವ ಬಗ್ಗೆ ಗಮನಹರಿಸಿದ್ದಾರೆ’ ಎಂದು ಅವರು ಟೀಕಿಸಿದರು.

‘ಹೆರಿಗೆಗೆ ಬಂದ ಗರ್ಭಿಣಿ ಮಹಿಳೆಗೆ ಕಾರ್ಡ್ ಕೊಡಿ, ಹಣ ಕೊಡಿ ಎಂದು ಹೇಳಿ ಚಿಕಿತ್ಸೆ ನೀಡಿಲ್ಲ. ಇದು ಸರಕಾರದ ಪ್ರಾಯೋಜಿತ ಹತ್ಯೆ. ಇದಕ್ಕೆ ಕಾರಣ ಯಾರು? ಸಿಬ್ಬಂದಿ ಅಮಾನತು ಗೊಳಿಸಿದರೆ ಸಾಕೆ? ಅವರ ಪರವಾನಿಗೆ ರದ್ದು ಮಾಡಬೇಕು. ವೈದ್ಯರು ವೃತ್ತಿ ಆರಂಭಿಸುವಾಗ ಮಾನವೀಯತೆ ಆಧಾರದ ಮೇಲೆ ಪ್ರತಿಜ್ಞೆ ಮಾಡಿರುತ್ತಾರೆ. ಅದನ್ನು ಮರೆತು ಇಂದು ಈ ರೀತಿ ಚಿಕಿತ್ಸೆ ತಿರಸ್ಕರಿಸಿದರೆ. ಈ ಸರಕಾರಕ್ಕೆ ಜೀವಕ್ಕೆ ಬೆಲೆ ಎಷ್ಟಿದೆ ಎಂದು ತಿಳಿಯುತ್ತದೆ’ ಎಂದು ಅವರು ವಾಗ್ದಾಳಿ ನಡೆಸಿದರು.

‘ಸಚಿವ ಡಾ.ಸುಧಾಕರ್ ಬಳ್ಳಾರಿ ವಿಮ್ಸ್ ಪ್ರಕರಣ, ಆಕ್ಸಿಜನ್ ಕೊರತೆ ಪ್ರಕರಣ, ಕೋವಿಡ್ ನಿರ್ವಹಣೆ ವೈಫಲ್ಯ ಆದಾಗಲೇ ರಾಜೀನಾಮೆ ನೀಡಬೇಕಿತ್ತು. ಆಗ ರಾಜೀನಾಮೆ ನೀಡದವರಿಂದ ಈಗ ನಿರೀಕ್ಷೆ ಮಾಡಲು ಸಾಧ್ಯವೇ? ಈ ಸರಕಾರಕ್ಕೆ ಭ್ರಷ್ಟಾಚಾರ ಸೋಂಕು ತಗುಲಿ ‘ಸೋಂಕಿತ ಸರಕಾರ’ವಾಗಿದೆ. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟರೆ ನಾನು ರಾಜೀನಾಮೆ ನೀಡುತ್ತೇನೆಂಬುದು ಅವರ ಸಮರ್ಥನೆಯೇ?’ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

‘ಟಿಆರ್‍ಎಸ್ ಶಾಸಕರ ಖರೀದಿ ಸಮಯದಲ್ಲಿ ರಾಜ್ಯದ ಆಪರೇಶನ್ ಕಮಲದ ಪ್ರಸ್ತಾಪ ಆಗಿದೆ. ಈಶ್ವರಪ್ಪ ಮೇಲಿನ ಐಟಿ, ಈಡಿ ಕೇಸ್ ಏನಾಯ್ತು? ಯಾಕೆ ಕೇಂದ್ರ ಸರಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಆ ಪ್ರಕರಣ ಸರಕಾರದ ಬಳಿಯೆ ಬಾಕಿ ಉಳಿದಿದೆ. ಇಂತಹ ಹೇಳಿಕೆ ಕೊಟ್ಟಾಗ ಐಟಿ, ಸಿಬಿಐ ನಿದ್ದೆ ಮಾಡುತ್ತಿದೆಯೇ? ಕಾಂಗ್ರೆಸ್ ನಾಯಕರು ಈ ಹೇಳಿಕೆ ಕೊಟ್ಟಿದ್ದಾರೆ ಇಷ್ಟು ಹೊತ್ತಿಗೆ ದಾಳಿ ಆಗುತ್ತಿರಲಿಲ್ಲವೇ?’ ಎಂದು ಅವರು ವಾಗ್ದಾಳಿ ನಡೆಸಿದರು. 

Similar News