×
Ad

‘ಪೊಕ್ಸೊ ಕಾಯಿದೆ’ ಪರಿಣಾಮಕಾರಿ ಅನುಷ್ಠಾನ ಮುಖ್ಯ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ

Update: 2022-11-05 19:26 IST

ಬೆಂಗಳೂರು, ನ. 5: ‘ಮಕ್ಕಳು ಜಗತ್ತನ್ನು ನಿರ್ಮಿಸುತ್ತಾರೆ, ಇಂತಹ ಮಕ್ಕಳ ಮೇಲಾಗುವ ಲೈಂಗಿಕ ಶೋಷಣೆ ಮತ್ತು ಲೈಂಗಿಕ ದುರುಪಯೋಗಗಳನ್ನು ತಡೆಗಟ್ಟಲು 2012ರಲ್ಲಿ ಮಕ್ಕಳ ರಕ್ಷಣಾ ಕಾಯ್ದೆ(ಪೊಕ್ಸೊ)ಯು ಜಾರಿಗೆ ಬಂದಿದ್ದು, ಅದರ ಪರಿಣಾಮಕಾರಿ ಅನುಷ್ಠಾನ ಬಹಳ ಮುಖ್ಯ’ ಎಂದು ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ( Justice Prasanna B Varale) ಅವರು ಪ್ರತಿಪಾದಿಸಿದ್ದಾರೆ.

ಶನಿವಾರ ಇಲ್ಲಿನ ನ್ಯಾಯಾಂಗ ಅಕಾಡೆಮಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಯೂನಿಸೆಫ್ ಆಶ್ರಯದಲ್ಲಿ ಏರ್ಪಡಿಸಿದ್ದ ‘ಪೊಕ್ಸೊ ಕಾಯಿದೆ-2012’ಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪೊಕ್ಸೊ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

‘ರಾಜ್ಯದಲ್ಲಿ 28 ವಿಶೇಷ ಮಕ್ಕಳ ಸ್ನೇಹಿ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ ಹೆಸರಿಸಲಾಗಿರುವ 18 ಮಕ್ಕಳ ಸ್ನೇಹಿ ನ್ಯಾಯಾಲಯಗಳಿದ್ದು, ವಿಚಾರಣೆಯ ಸಂದರ್ಭದಲ್ಲಿ ಸಂತ್ರಸ್ತರು ಆರೋಪಿಗಳ ಕಣ್ಣಿಗೆ ಕಾಣಿಸದ ರೀತಿಯಲ್ಲಿ ಇವುಗಳನ್ನು ರೂಪಿಸಲಾಗಿದೆ. ಮಕ್ಕಳ ಸ್ನೇಹಿ ನ್ಯಾಯಾಲಯಗಳಿಗಾಗಿಯೇ ಸರಕಾರ ಮಾರ್ಗಸೂಚಿ ರೂಪಿಸಿದೆ’ ಎಂದು ಅವರು ತಿಳಿಸಿದರು.

‘ಪೊಕ್ಸೊ  ಕಾಯಿದೆ ಜಾರಿಗೆ ಸಂಬಂಧಪಟ್ಟ ಸಂಸ್ಥೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸಲಹೆ ನೀಡುವ ಕುರಿತು ಬಾಲ ನ್ಯಾಯ ಮಂಡಳಿ ಸಮಿತಿಯ ಮುಖ್ಯಸ್ಥ ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರು ಸಲಹೆಗಳನ್ನು ನೀಡುವಂತೆ ದೇಶದ ಹೈಕೋರ್ಟ್‍ಗಳಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಡಿಸೆಂಬರ್‍ನಲ್ಲಿ ರಾಷ್ಟ್ರೀಯ ಸಮಾಲೋಚನ ಸಭೆ ನಡೆಯಲಿದೆ’ ಎಂದು ಪ್ರಸನ್ನ ಬಿ.ವರಾಳೆ ತಿಳಿಸಿದರು.

ಬದಲಾವಣೆ ಅಗತ್ಯ: ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಮತ್ತು ಪ್ರೀತಿ-ಪ್ರೇಮದ ಪ್ರಕರಣಗಳನ್ನು ಪ್ರತ್ಯೇಕಿಸುವ ನಿಟ್ಟಿನಲ್ಲಿ ಶಾಸನದಲ್ಲಿ ಬದಲಾವಣೆಯಾಗಬೇಕಿದೆ’ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸಲಹೆ ನೀಡಿದರು. 

ರಾಜ್ಯದಲ್ಲಿ ‘ಪೊಕ್ಸೊ ’ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ‘ಪೊಕ್ಸೊ ಕಾಯಿದೆ’ಯ ಸೆಕ್ಷನ್ 40ರ ಪ್ರಕಾರ ಸಂತ್ರಸ್ತ ಮಕ್ಕಳು ತಮ್ಮ ಇಚ್ಛೆಯಂತೆ ವಕೀಲರನ್ನು ನೇಮಿಸಿಕೊಳ್ಳುವ ಹಕ್ಕು ಹೊಂದಿದ್ದಾರೆ. ಇಲ್ಲವಾದರೆ ಕೆಎಸ್‍ಎಲ್‍ಎಸ್‍ಎಯು ಸಂತ್ರಸ್ತೆ ಮತ್ತು ಅವರ ಕುಟುಂಬದವರಿಗೆ ವಕೀಲರ ತಂಡದ ನೆರವು ನೀಡಲಿದೆ’ ಎಂದು ಅವರು ತಿಳಿಸಿದರು.

ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಬಾಲನ್ಯಾಯ ಸಮಿತಿ ಅಧ್ಯಕ್ಷೆ ಕೆ.ಎಸ್.ಮುದಗಲ್ ಅವರು ಮಾತನಾಡಿ, ‘ಪ್ರತಿಯೊಂದು ಮಗುವು ವಿಭಿನ್ನ ರೀತಿಯ ಹೂವುಗಳನ್ನು ಒಟ್ಟುಗೂಡಿಸಿ ಸುಂದರ ಉದ್ಯಾನದ ಮೇಲೆ ಈ ಜಗತ್ತನ್ನು ರೂಪಿಸುತ್ತದೆ ಎಂದು ಹೈಕೋರ್ಟ್ ಹೇಳಿದ್ದು, ಇಂತಹ ಮಕ್ಕಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ನ್ಯಾಯಾಂಗ ಅಕಾಡೆಮಿ ಅಧ್ಯಕ್ಷ, ನ್ಯಾ.ಅಲೋಕ್ ಅರಾದೆ, ಗೃಹ ಇಲಾಖೆಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯೆಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸರಕಾರದ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಯುನಿಸೆಫ್ ಮಕ್ಕಳ ರಕ್ಷಣಾ ತಜ್ಞರಾದ ಸೋನಿಕುಟ್ಟಿ ಜಾರ್ಜ್, ಕೆಎಸ್‍ಸಿಪಿಸಿಆರ್ ಅಧ್ಯಕ್ಷ ಕೆ. ನಾಗಣ್ಣಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Similar News