ರೈತರ ಸಾಲದ ಮೇಲೆ ಜಪ್ತಿ, ಹರಾಜು ಹಾಕದಂತೆ ಕಾನೂನು: ಮುಖ್ಯಮಂತ್ರಿ ಬೊಮ್ಮಾಯಿ

Update: 2022-11-05 15:19 GMT

ಬೆಂಗಳೂರು, ನ. 5: ‘ರೈತರ ಸಾಲದ ಮೇಲೆ ಅವರ ಆಸ್ತಿಯನ್ನು ಜಪ್ತಿ ಮಾಡುವುದಾಗಲಿ, ಹರಾಜು ಹಾಕುವುದಾಗಲಿ ಮಾಡಬಾರದು. ಇದಕ್ಕಾಗಿ ಸೂಕ್ತ ಕಾನೂನನ್ನು ರೂಪಿಸಲಾಗುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.  

ಶನಿವಾರ ಜಿಕೆವಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಸಾಧನೆ ಮಾಡಿದ ರೈತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ‘ರೈತರ ಸಾಲ ಮಾರುಪಾವತಿಯಾಗದಿದ್ದಾಗ ಸಮಯಾವಕಾಶ ಕೊಟ್ಟು, ಸಹಾಯ ಮಾಡಬೇಕೇ ಹೊರತಾಗಿ ಯಾವುದೇ ಜಪ್ತಿ, ಹರಾಜು ಮಾಡುವುದು ಮಾಡಬಾರದೆಂದು ಸಹಕಾರ ಹಾಗೂ ಇತರೆ ಇಲಾಖೆಗಳಿಗೆ ಸೂಚನೆ ನೀಡಿಡಲಾಗಿದೆ. ಇಲಾಖೆಗಳು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿವೆ’ ಎಂದು ಹೇಳಿದರು. 

ರೈತ ಉತ್ಪಾದಕ ಸಂಘಗಳು 8-10 ಕೋಟಿ ರೂ.ವಹಿವಾಟು ಮಾಡಿ ಲಾಭ ಮಾಡಿಕೊಂಡಿವೆ. ಮಧ್ಯವರ್ತಿಗಳಿಗೆ ಹೋಗುತ್ತಿದ್ದ ಹಣ, ಸಂಘಕ್ಕೇ ಉಳಿಯುತ್ತಿದೆ. ಅದಕ್ಕಾಗಿ ಮೀನುಗಾರಿಗೆ, ನೇಕಾರರ ಎಫ್.ಪಿ.ಒಗಳಿಗೂ ಸರಕಾರ ಪ್ರೋತ್ಸಾಹ ನೀಡುತ್ತಿದೆ. ಗ್ರಾಮೀಣ ಸಾಲ ಪದ್ದತಿಯೂ ಬದಲಾವಣೆ ಆಗಬೇಕು. ಈ ಬಗ್ಗೆ ನಬಾರ್ಡ್ ಜೊತೆಗೆ ಮಾತನಾಡಿದ್ದು, ಸ್ಕೇಲ್ ಆಫ್ ಬ್ಯಾಲೆನ್ಸ್ ಬದಲಾಗಬೇಕೆಂದು ಒತ್ತಾಯ ಮಾಡಲಾಗಿದೆ ಎಂದರು.

ನ.1ರಿಂದ ರೈತರಿಗಾಗಿ ಯಶಸ್ವಿನಿ ಯೋಜನೆಯನ್ನು ಪುನಃ ಪ್ರಾರಂಭಿಸಲಾಗಿದೆ. ರೈತ ಸಹಾಯಧನ ಯೋಜನೆಯಡಿ ಡೀಸಲ್ ಸಬ್ಸಿಡಿಯನ್ನು ನೀಡಲಾಗುತ್ತಿದೆ. ಬರುವ ಜನರಿಯಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯ ಮೇಳ ಆಯೋಜಿಸಿದೆ ಎಂದು ಅವರು ತಿಳಿಸಿದರು.
ಕೃಷಿ ಸಚಿವ ಬಿ.ಸಿ ಪಾಟೀಲ್, ಕಂದಾಯ ಸಚಿವ ಆರ್.ಅಶೋಕ್, ಶಾಸಕ ಕೃಷ್ಣ ಬೈರೇಗೌಡ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಎಸ್.ವಿ.ಸುರೇಶ್, ಹನುಮಂತಪ್ಪ ಉಪಸ್ಥಿತರಿದ್ದರು.

ಮೇಳದಲ್ಲಿ ಜನಸಾಗರ, ಇಂದು ಕೃಷಿ ಮೇಳ ಅಂತ್ಯ: ‘ಕೃಷಿ ಮೇಳದ ಮೂರನೆಯ ದಿನವಾದ ಶನಿವಾರ ಒಂದೇ ದಿನ 7.16ಲಕ್ಷ ಜನರು ಭಾಗವಹಿಸಿದ್ದು, ಕೃಷಿಮೇಳದ ಇತಿಹಾಸದಲ್ಲಿಯೇ ಹೊಸ ದಾಖಲೆಯನ್ನು ನಿರ್ಮಿಸಿದೆ. ಇದಕ್ಕೂ ಮೊದಲು ಒಂದೇ ದಿನ ಇಷ್ಟು ಸಂಖ್ಯೆಯ ಜನರು ಕೃಷಿ ಮೇಳದಲ್ಲಿ ಭಾಗವಹಿಸಿರಲಿಲ್ಲ. ಮೇಳದಲ್ಲಿ 2.85 ಕೋಟಿ ರೂ.ಗಳಷ್ಟು ವಹಿವಾಟಾಗಿದ್ದು, 12,500 ಜನರು ಕೃಷಿ ವಿಶ್ವ ವಿದ್ಯಾನಿಲಯದ ಭೋಜನಾಲಯದಲ್ಲಿ ಮಧ್ಯಾಹ್ನದ ಊಟ ಮಾಡಿದ್ದಾರೆ. 684 ರೈತರು ಸಲಹಾ ಕೇಂದ್ರದಿಂದ ಮಾಹಿತಿಯನ್ನು ಪಡೆದುಕೊಂಡರು. ನಾಲ್ಕು ದಿನಗಳಿಂದ ಕೃಷಿ ಮೇಳ ನಡೆಯುತ್ತಿದ್ದು, ನಾಳೆ(ನ.6) ಅಂತಿಮ ಮೇಳಕ್ಕೆ ತೆರೆ ಬೀಳಲಿದೆ.

Similar News