ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೈ ತಪ್ಪಿದ ಮಗು ಮರಳಿ ತಾಯಿಯ ಮಡಿಲಿಗೆ
Update: 2022-11-05 20:50 IST
ಮಂಗಳೂರು : ವಿದೇಶಕ್ಕೆ ತೆರಳುವ ಸಂಬಂಧಿಕರನ್ನು ಬೀಳ್ಕೊಡಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಕುಟುಂಬವೊಂದರ ಮಗು ನಿಲ್ದಾಣದ ಟರ್ಮಿನಲ್‌ನಲ್ಲಿ ತಾಯಿಯ ಕೈಯಿಂದ ತಪ್ಪಿದ್ದು, ಬಳಿಕ ಸಿಐಎಸ್‌ಎಫ್ ಸಿಬ್ಬಂದಿಯ ಮೂಲಕ ತಾಯಿಯ ಮಡಿಲಿಗೆ ಸೇರಿದ ಘಟನೆ ಶುಕ್ರವಾರ ನಡೆದಿದೆ ಎಂದು ತಿಳಿದು ಬಂದಿದೆ.
ಕಾಸರಗೋಡು ಮೂಲದ ಮುಹಮ್ಮದ್ ಇಶಾಮ್ (6) ತಾಯಿಯ ಕೈಯಿಂದ ಆಕಸ್ಮಿಕವಾಗಿ ತಪ್ಪಿಸಿಕೊಂಡಿತ್ತು. ಈ ವಿಚಾರ ಸ್ವಲ್ಪ ಸಮಯದ ಬಳಿಕ ಹೆತ್ತವರ ಗಮನಕ್ಕೆ ಬಂದಿದ್ದು, ಇದರಿಂದ ಹೆತ್ತವರು ತೀವ್ರ ವಿಚಲಿತರಾಗಿದ್ದರು. ಮಾಹಿತಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಸಿಐಎಸ್‌ಎಫ್ ಸಿಬ್ಬಂದಿ ಮಂಜುನಾಥ ಸಾಲ್ಗಾಂವ್ಕರ್ ಮತ್ತು ಜೋಸೆಫ್ ರತನ್ ರೇಗೋ ಟರ್ಮಿನಲ್ ಹೊರ ಭಾಗದಲ್ಲಿ ಮಗುವನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ.