ಕೊರಿಯಾ ಪರ್ಯಾಯ ದ್ವೀಪದಲ್ಲಿ ಉದ್ವಿಗ್ನತೆ ಹೆಚ್ಚಳ ವಿಶ್ವಸಂಸ್ಥೆಯಲ್ಲಿ ಅಮೆರಿಕ , ರಶ್ಯ ಪರಸ್ಪರ ಆರೋಪ

Update: 2022-11-05 16:24 GMT

ನ್ಯೂಯಾರ್ಕ್, ನ.5: ಉತ್ತರ ಕೊರಿಯಾ ನಡೆಸುತ್ತಿರುವ ನಿರಂತರ ಖಂಡಾಂತರ ಕ್ಷಿಪಣಿ ಪರೀಕ್ಷೆಯ ವಿಷಯಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯಲ್ಲಿ ಅಮೆರಿಕ ಮತ್ತದರ ಮಿತ್ರದೇಶಗಳು ಹಾಗೂ ರಶ್ಯ ಮತ್ತು ಚೀನಾ ಪರಸ್ಪರ ದೋಷಾರೋಪಣೆ ಮಾಡಿವೆ.

ನಿರಂತರ ಖಂಡಾಂತರ ಕ್ಷಿಪಣಿ ಉಡಾಯಿಸುತ್ತಿರುವ ಉತ್ತರ ಕೊರಿಯಾದಿಂದ ಕೊರಿಯಾ ಪರ್ಯಾಯ ದ್ವೀಪದಲ್ಲಿ ಉದ್ವಿಗ್ನತೆ ಹೆಚ್ಚಿದ್ದು ಇದಕ್ಕೆ ಆ ದೇಶದ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಯಾವುದೇ ಕ್ರಮ ಕೈಗೊಳ್ಳದಂತೆ ತಡೆಯುವ ರಶ್ಯ ಮತ್ತು ಚೀನಾಗಳು ನೇರ ಕಾರಣವಾಗಿದೆ ಎಂದು ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳು ವಿಶ್ವಸಂಸ್ಥೆಯಲ್ಲಿ ಆರೋಪಿಸಿವೆ. ಇದಕ್ಕೆ ತಿರುಗೇಟು ನೀಡಿರುವ ರಶ್ಯ ಮತ್ತು ಚೀನಾ, ಕೊರಿಯಾ ಪರ್ಯಾಯ ದ್ವೀಪದಲ್ಲಿ ಜಂಟಿ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುವ ಮೂಲಕ ಅಮೆರಿಕ ಭೀತಿಯ ವಾತಾವರಣ ಮೂಡಿಸಿದೆ ಎಂದು ಹೇಳಿವೆ.

 ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್ ಗ್ರೀನ್‌ಫೀಲ್ಡ್ ‘ಈ ವರ್ಷ ಉತ್ತರ ಕೊರಿಯಾ 59 ಖಂಡಾಂತರ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಯೋಗಿಸಿದ್ದು ಅಕ್ಟೋಬರ್ 27ರ ಬಳಿಕದ ಒಂದು ವಾರದಲ್ಲಿ 13 ಕ್ಷಿಪಣಿ ಪರೀಕ್ಷೆ ನಡೆಸಿದೆ. ಇದರಲ್ಲಿ ಕೆಲವು ಕ್ಷಿಪಣಿಗಳು ದಕ್ಷಿಣ ಕೊರಿಯಾದ ಕರಾವಳಿ ತೀರದಿಂದ ಕೇವಲ 50 ಕಿ.ಮೀ ದೂರಕ್ಕೆ ಬಂದು ಅಪ್ಪಳಿಸಿದೆ. ಇದು ಉತ್ತರ ಕೊರಿಯಾದ ಮಿಲಿಟರಿ ಸಾಮರ್ಥ್ಯ ಹೆಚ್ಚಳದ ಉದ್ದೇಶದ ಬದಲು ಉದ್ವಿಗ್ನತೆಯನ್ನು ಹೆಚ್ಚಿಸಲು, ನೆರೆಹೊರೆಯವರಲ್ಲಿ ಭೀತಿಯನ್ನು ಹುಟ್ಟಿಸಲು ನಡೆಸಿರುವ ಕೃತ್ಯವಾಗಿದೆ. ಇದನ್ನು ಭದ್ರತಾ ಮಂಡಳಿಯ 15 ಸದಸ್ಯದೇಶಗಳಲ್ಲಿ 13 ದೇಶಗಳು ಖಂಡಿಸಿವೆ. ಆದರೆ ಉತ್ತರ ಕೊರಿಯಾದ ವಿರುದ್ಧ ವಿಶ್ವಸಂಸ್ಥೆ ಕ್ರಮ ಕೈಗೊಳ್ಳಲು ಇತರ 2 ಸದಸ್ಯ ದೇಶಗಳಾದ ರಶ್ಯ ಮತ್ತು ಚೀನಾ ತಡೆಯಾಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಚೀನಾದ ರಾಯಭಾರಿ ಝಾಂಗ್ ಜುನ್ ‘ 5 ವರ್ಷದ ಬ್ರೇಕ್ ಬಳಿಕ ಮತ್ತೆ ಅಮೆರಿಕ-ದಕ್ಷಿಣ ಕೊರಿಯಾ ಜಂಟಿ ಮಿಲಿಟರಿ ಸಮರಾಭ್ಯಾಸ ಆರಂಭಿಸಿರುವುದು ಮತ್ತು ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿರುವುದರ ಮಧ್ಯೆ ನೇರ ಸಂಬಂಧವಿದೆ’ ಎಂದರು. ಅಲ್ಲದೆ ಅಮೆರಿಕದ ರಕ್ಷಣಾ ಇಲಾಖೆಯ 2022ರ ಪರಮಾಣು ಸ್ಥಿತಿಗತಿ ಅವಲೋಕನದ ವರದಿಯಲ್ಲಿ ‘ಉತ್ತರ ಕೊರಿಯಾ ಪರಮಾಣು ಅಸ್ತ್ರ ಬಳಸುವ ಸಾಧ್ಯತೆಯಿದ್ದು, ಅಲ್ಲಿನ ಆಡಳಿತವನ್ನು ಅಂತ್ಯಗೊಳಿಸುವುದು ಕಾರ್ಯತಂತ್ರದ ಪ್ರಮುಖ ಉದ್ದೇಶವಾಗಿದೆ’ ಎಂದು ಉಲ್ಲೇಖಿಸಲಾಗಿದೆ ಎಂದು ಝಾಂಗ್ ಜುನ್ ಹೇಳಿದರು.

ನಿರ್ಬಂಧಗಳನ್ನು ಬಳಸಿ ಮತ್ತು ಒತ್ತಡ, ಬಲವನ್ನು ಹೇರುವ ಮೂಲಕ ಉತ್ತರ ಕೊರಿಯಾವನ್ನು ಏಕಪಕ್ಷೀಯವಾಗಿ ನಿರಸ್ತ್ರೀಕರಣಗೊಳಿಸುವುದು ಅಮೆರಿಕದ ಉದ್ದೇಶವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ರಶ್ಯದ ಉಪ ರಾಯಭಾರಿ ಅನ್ನಾ ಎವ್‌ಸ್ಟಿಗ್ನೀವಾ ದೂಷಿಸಿದ್ದಾರೆ.

Similar News