ದೇಶದಲ್ಲಿ ಶಾಂತಿ ನೆಲೆಸಲು ನ್ಯಾಯಾಂಗ ವ್ಯವಸ್ಥೆ ಬೆಂಬಲಿಸಬೇಕು: ನ್ಯಾ.ಅಬ್ದುಲ್ ನಝೀರ್
ಬೆಂಗಳೂರು, ನ. 5: ‘ಸಮಾಜ ಹಾಗೂ ದೇಶದಲ್ಲಿ ಶಾಂತಿ ನೆಲೆಸಬೇಕಾದರೆ, ಅದಕ್ಕೆ ನ್ಯಾಯಾಂಗ ವ್ಯವಸ್ಥೆಯೂ ಬೆಂಬಲಿಸಬೇಕು. ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಇರುವಾಗ ಶಾಂತಿ ನೆಲೆಸಲು ಹೇಗೆ ಸಾಧ್ಯ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದಲ್ಲಿ ವಕೀಲರ ಸಂಘ, ಲೋಕೋಪಯೋಗಿ ಇಲಾಖೆ ಮತ್ತು ಕಟ್ಟಡ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ‘ವಕೀಲರ ಭವನದ 5, 6 ಮತ್ತು 7ನೆ ಮಹಡಿಯ ಉದ್ಘಾಟನಾ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ವ್ಯಾಜ್ಯಗಳು ಸಮಾಜಕ್ಕೆ ಕ್ಯಾನ್ಸರ್ ಇದ್ದಂತೆ. ದೇಶದಲ್ಲಿ ಸುಮಾರು ಮೂರು ಕೋಟಿಗೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಇವೆ’ ಎಂದು ಹೇಳಿದರು.
‘ಇಂತಹ ಪರಿಸ್ಥಿತಿಯಲ್ಲಿ ಸಮಾಜ ಹಾಗೂ ದೇಶದಲ್ಲಿ ಶಾಂತಿ ನೆಲೆಸಲು ಹೇಗೆ ಸಾಧ್ಯ? ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆಯು ಬೆಂಬಲ ನೀಡಬೇಕು ಎಂದು ಅವರು ಹೇಳಿದರು.
ವಕೀಲರ ಭವನದ ಗ್ರಂಥಾಲಯ ಮತ್ತು ಕಟ್ಟಡ ಸಭಾಂಗಣ ಅತ್ಯುತ್ತಮವಾಗಿ ನಿರ್ಮಾಣವಾಗಿದೆ. ಇವುಗಳನ್ನು ವಕೀಲರು ಬೌದ್ಧಿಕ ಚರ್ಚೆಗಳು ಹಾಗೂ ಪ್ರಕರಣಗಳ ಕುರಿತು ಚರ್ಚಿಸಲು ಬಳಕೆ ಮಾಡಿಕೊಳ್ಳಬೇಕು. ದೇಶದ ರಾಜಧಾನಿ ದಿಲ್ಲಿ ಸೇರಿದಂತೆ ಇತರ ರಾಜ್ಯಗಳಲ್ಲಿ ಇರುವಂತೆ ವಕೀಲರ ಭವನದ ಜೊತೆಗೆ ಲಾ ಚೇಂಬರ್ಸ್ ಅನ್ನು ಬೆಂಗಳೂರಿನಲ್ಲಿ ನಿರ್ಮಿಸಿದರೆ ವಕೀಲಕರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಅವರು ಸಲಹೆ ನೀಡಿದರು.