ಪೌರಕಾರ್ಮಿಕರ ರಾಜ್ಯಮಟ್ಟದ ಹಕ್ಕೊತ್ತಾಯ ಸಮಾವೇಶ: ಖಾಯಂ ಮಾಡದಿದ್ದರೆ ವಿಧಾನಸೌಧ ಮುತ್ತಿಗೆ ಎಚ್ಚರಿಕೆ
ಬೆಂಗಳೂರು: ‘ಎಲ್ಲ ಪೌರಕಾರ್ಮಿಕರನ್ನು ಖಾಯಂಗೊಳಿಸುವವರೆಗೆ ವಿಶ್ರಾಂತಿಯ ಪ್ರಶ್ನೆಯೇ ಇಲ್ಲ. ಅಗತ್ಯಬಿದ್ದರೆ ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಕೆ ನೀಡಿರುವ ಪೌರ ಕಾರ್ಮಿಕರು, ಬೃಹತ್ ಹೋರಾಟಕ್ಕೆ ಸಜ್ಜುಗೊಂಡಿರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ರವಿವಾರ ಇಲ್ಲಿನ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್(ಎಐಸಿಸಿಟಿಯು) ವತಿಯಿಂದ ಏರ್ಪಡಿಸಿದ್ದ ಪೌರಕಾರ್ಮಿಕರ ರಾಜ್ಯಮಟ್ಟದ ಹಕ್ಕೊತ್ತಾಯ ಸಮಾವೇಶದಲ್ಲಿ ರಾಜ್ಯದ ಎಲ್ಲ ಪೌರ ಕಾರ್ಮಿಕರನ್ನು, ಗುತ್ತಿಗೆ ಪೌರಕಾರ್ಮಿಕರು, ಲೋಡರ್ಸ್, ಕಸದ ವಾಹನ ಚಾಲಕರು ಸೇರಿ ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನು ಏಕಕಾಲದಲ್ಲಿ ಖಾಯಂಗೊಳಿಸಬೇಕೆಂದು ಒತ್ತಾಯಿಸಲಾಯಿತು.
ಬಿಬಿಎಂಪಿ ಪೌರ ಕಾರ್ಮಿಕರ ಸಂಘ, ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘ, ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಮತ್ತು ಸಹಾಯಕರ ಸಂಘದ ಪ್ರತಿನಿಧಿಗಳು ಸೇರಿ ಸುಮಾರು 1,500 ಪೌರಕಾರ್ಮಿಕರು ಭಾಗವಹಿಸಿ ತಮ್ಮ ಹಕ್ಕುಗಳನ್ನು ಮಂಡಿಸಿದರು.
ಬಿಬಿಎಂಪಿ ಪೌರಕಾರ್ಮಿರ ಸಂಘದ ಅಧ್ಯಕ್ಷೆ ನಿರ್ಮಲಾ ಮಾತನಾಡಿ, ರಾಜ್ಯದ ಎಲ್ಲ ಪೌರಕಾರ್ಮಿಕರನ್ನು ಖಾಯಂಗೊಳಿಸುವಂತೆ ಮತ್ತು ಇತರೆ ಮೂಲಭೂತ ಸೌಲಭ್ಯಗಳಿಗಾಗಿ ಒತ್ತಾಯಿಸಿ ಜುಲೈ ತಿಂಗಳ ಮೊದಲ ದಿನದಿಂದ ಅನಿರ್ಧಿಷ್ಠಾವಧಿಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಲಿಖಿತರೂಪದಲ್ಲಿ ಭರವಸೆ ನೀಡಿದ್ದರು. ಆದರೆ ಅದು ಹುಸಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಐಸಿಸಿಟಿಯುನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪಣ್ಣ ಮಾತನಾಡಿ, ಪೌರಕಾರ್ಮಿರಿಗೆ ಸಮಾಜ ಮತ್ತು ಸರಕಾರ ಘನತೆ ಜೀವನವನ್ನು ಒದಗಿಸಿಕೊಡಬೇಕು. ಅದಕ್ಕಾಗಿ ಎಲ್ಲ ಪೌರಕಾರ್ಮಿಕರನ್ನು ತಕ್ಷಣವೇ ಖಾಯಂಗೊಳಿಸಬೇಕು. ಪೌರ ಕಾರ್ಮಿರನ್ನು ಖಾಯಂಗೊಳಿಸದೇ ಇದ್ದಲ್ಲಿ, ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ. ಹಾಗೆಯೇ ಕಾನೂನು ಹೋರಾಟವನ್ನು ಮಾಡುತ್ತೇವೆ ಎಂದು ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕೇಶವ್ ಮಾತನಾಡಿ, ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇಂದಿಗೂ ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಮತ್ತು ಸಹಾಯಕರನ್ನು ಗುತ್ತಿಗೆ ಪದ್ಧತಿಯಲ್ಲೇ ದುಡಿಸಿಕೊಳ್ಳುತ್ತಿದ್ದಾರೆ. ಕಾನೂನುಬದ್ಧವಾಗಿ ನೀಡಬೇಕಾಗಿರುವ ಯಾವುದೇ ಸೇವಾ ಸೌಲಭ್ಯಗಳನ್ನು ನೀಡುತ್ತಿಲ್ಲ. ಇದರಿಂದಾಗಿ ಈ ಕಾರ್ಮಿಕರು ಘೋರವಾದ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ತ್ಯಾಜ್ಯ ಸಾಗಿಸುವ ಎಲ್ಲ ವಾಹನ ಚಾಲಕರು ಮತ್ತು ಸಹಾಯಕರನ್ನು ಪೌರಕಾರ್ಮಿಕರು ಎಂದು ಸರಕಾರ ತಕ್ಷಣವೇ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
‘ಶತಮಾನಗಳಿಂದ ಪೊರಕೆ ನೀಡಿ, ಕಸ ಗುಡಿಸುವ ಕೆಲಸವನ್ನು ದಲಿತರಿಗೆ ಮಾತ್ರ ಎಂದು ನಂಬಿಸಿ, ಪೌರಕಾರ್ಮಿಕರನ್ನು ವಂಚಿಸುತ್ತಿದ್ದಾರೆ. ಜಾತಿ ವ್ಯವಸ್ಥೆಯನ್ನು ಆಧಾರವಾಗಿಟ್ಟುಕೊಂಡು ವಂಶಪರಂಪರ್ಯಾವಾಗಿ ಪೌರಕಾರ್ಮಿಕರ ವೃತ್ತಿಯನ್ನು ಮುಂದುವರಿಸಲು ಸರಕಾರ ಸಂಚು ರೂಪಿಸುತ್ತಿದೆ. ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು. ಪೌರಕಾರ್ಮಿಕರ ಮಕ್ಕಳ ಕೈಯಲ್ಲಿ ಪೂರಕೆ ಬಾರದ ರೀತಿಯಲ್ಲಿ ನಾವು ಎಚ್ಚರಿಕೆ ವಹಿಸಬೇಕು’
-ಕ್ಲಿಫ್ಟನ್, ಸಿಪಿಐ(ಎಂಎಲ್) ಲಿಬರೇಷನ್ ಕಾರ್ಯದರ್ಶಿ