ಬೆಂಗಳೂರು: ನ.7ರಿಂದ ಭಾರತೀಯ ಕ್ಯಾಥೋಲಿಕ್ ಸಾಮಾನ್ಯ ಸಭೆ
ಬೆಂಗಳೂರು: ದಿ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ(ಸಿಬಿಸಿಐ)ದ 35ನೆ ಸಾಮಾನ್ಯ ಸಭೆ ನ.7ರಿಂದ 11ರವರೆಗೆ ನಗರದ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಆವರಣದಲ್ಲಿ ನಡೆಯಲಿದೆ.
ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ಕ್ಯಾಥೋಲಿಕ್ ಬಿಷಪ್‍ಗಳ ಮಹಾಸಂಸ್ಥೆಯ(ಸಿಬಿಸಿಐ) ಪ್ರಧಾನ ಕಾರ್ಯದರ್ಶಿ ಆರ್ಚ್‍ಬಿಷಪ್ ಫೆಲಿಕ್ಸ್ ಮಚಾದೊ ಅವರು, ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಆವರಣದಲ್ಲಿ ನ.7ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದರು.
“ಸಿನೊಡಾಲಿಟಿ: ದಿ ಕಾಲ್ ಟು ಬಿ ಎ ಸಿನೊಡಲ್ ಚರ್ಚ್” ಎಂಬುದು ಸಭೆಯ ಆಶಯ ವಿಷಯವಾಗಿದೆ. 174 ಧರ್ಮ ಕ್ಷೇತ್ರಗಳ 200 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಈ ಸಾಮಾನ್ಯ ಸಭೆಯನ್ನು ನಾವು ಪ್ರಭುವಿನ ಕರಗಳಿಗೆ ಅರ್ಪಿಸುತ್ತಾ, ಒಂದು ವಾರ ಪೂರ್ತಿ ನಡೆಯುವ ಸಂವಾದ, ಚರ್ಚೆ ಹಾಗೂ ಸಂಭಾಷಣೆಗಳು ಇತರರನ್ನು ಅರ್ಥಮಾಡಿಕೊಳ್ಳುತ್ತಾ, ಜಾತಿ, ಧರ್ಮ, ಬಣ್ಣ ಹಾಗೂ ಇತ್ಯಾದಿ ಕುರಿತು ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.
ಕ್ಯಾಥೋಲಿಕ್ ಸಮುದಾಯವು ಶಿಕ್ಷಣ ಹಾಗೂ ಆರೋಗ್ಯ ಮಾತ್ರವಲ್ಲದೆ ಪ್ರಾಕೃತಿಕ ವಿಕೋಪ ಪರಿಹಾರ ಕಾರ್ಯಗಳು, ಸಮಾಜ ಸೇವೆ ಹಾಗೂ ಭಾರತದ ಕಟ್ಟಕಡೆಯ ಪ್ರದೇಶಗಳ ಬಡವರಿಗೆ ಹಾಗೂ ಸಮಾಜದಿಂದ ಅಂಚಿಗೆ ಸರಿಸಲ್ಪಟ್ಟವರ ಸೇವೆಯನ್ನು ಮಾಡುತ್ತಿದೆ ಎಂದು ಹೇಳಿದರು.