ಮೊರ್ಬಿ ಸೇತುವೆ ದುರಂತ: ಗುಜರಾತ್ ಸರ್ಕಾರ, ಮಾನವ ಹಕ್ಕುಗಳ ಆಯೋಗಕ್ಕೆ ಹೈಕೋರ್ಟ್ ನೋಟಿಸ್

ವಾರದೊಳಗೆ ವರದಿ ಸಲ್ಲಿಸಲು ಸೂಚನೆ

Update: 2022-11-07 15:19 GMT

ಅಹ್ಮದಾಬಾದ್: ಅಕ್ಟೋಬರ್ 30 ರಂದು 135 ಜನರನ್ನು ಬಲಿ ಪಡೆದ ಮೊರ್ಬಿ ತೂಗುಸೇತುವೆ ಕುಸಿತ ಘಟನೆಯ ಕುರಿತಂತೆ ಸ್ವಯಂಪ್ರೇರಿತ ಪ್ರಕರಣ ಕೈಗೆತ್ತಿಕೊಂಡಿರುವ ಗುಜರಾತ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠವು ಸರ್ಕಾರ ಮತ್ತು  ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ.

ದೀಪಾವಳಿ ರಜೆಯ ನಂತರ ಇಂದು ನ್ಯಾಯಾಲಯದ ಕಲಾಪಗಳು ಆರಂಭಗೊಂಡಾಗ ಈ ಪ್ರಕರಣವನ್ನು ಮೊದಲಾಗಿ ಕೈಗೆತ್ತಿಕೊಳ್ಳಲಾಗಿದ್ದು ಈ ದುರಂತಕ್ಕೆ ಸಂಬಂಧಿಸಿದಂತೆ ಇಲ್ಲಿಯ ತನಕ ಕೈಗೊಂಡ ಕ್ರಮಗಳ ಕುರಿತು ಸ್ಥಿತಿಗತಿ ವರದಿಯನ್ನು ನವೆಂಬರ್ 14ರೊಳಗೆ ಸಲ್ಲಿಸಬೇಕೆಂದು ನ್ಯಾಯಾಲಯ ಸೂಚಿಸಿದೆ.

ದುರಂತದ ಕುರಿತಂತೆ ಮಾಧ್ಯಮ ವರದಿಗಳನ್ನು ಗಣನೆಗೆ ತೆಗೆದುಕೊಂಡು ಸ್ವತಃ ಮಖ್ಯ ನ್ಯಾಯಮೂರ್ತಿ ಕುಮಾರ್ ಅವರು ಸ್ವಯಂಪ್ರೇರಿತ ಪಿಐಎಲ್ ಸಲ್ಲಿಸುವಂತೆ ಅದೇ ದಿನ ಕೋರ್ಟಿನ ರಿಜಿಸ್ಟ್ರಾರ್ ಅವರಿಗೆ ಸೂಚಿಸಿದ್ದರು.

ನ್ಯಾಯಮೂರ್ತಿ ಅಶುತೋಷ್ ಶಾಸ್ತ್ರಿ ಅವರನ್ನೂ ಒಳಗೊಂಡಿರುವ ಪೀಠವು ಈ ಪ್ರಕರಣದಲ್ಲಿ  ಗುಜರಾತ್ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗುಜಾರತ್ ಸರ್ಕಾರದ ಗೃಹ ಕಾರ್ಯದರ್ಶಿ,. ನಗರಾಭಿವೃದ್ಧಿ ಇಲಾಖೆ, ಮುನಿಸಿಪಾಲಿಟಿಗಳ ಆಯುಕ್ತರು, ಮೊರ್ಬಿ ಮುನಿಸಿಪಾಲಿಟಿ, ಮೊರ್ಬಿ ಜಿಲ್ಲಾ ಕಲೆಕ್ಟರ್ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ಪ್ರತಿವಾದಿಗಳನ್ನಾಗಿಸಿದೆ.

ಒಂದು ವಾರದೊಳಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಹಾಗೂ ಗೃಹ ಇಲಾಖೆಗೆ ಸೂಚಿಸಲಾಗಿದ್ದರೆ  ಮುಂದಿನ ವಿಚಾರಣಾ ದಿನಾಂಕದೊಳಗೆ ವರದಿ ಸಲ್ಲಿಸುವಂತೆ ಹಕ್ಕುಗಳ ಆಯೋಗಕ್ಕೂ ನ್ಯಾಯಾಲಯ ಸೂಚಿಸಿದೆ.

ಇಂದಿನ ಕಲಾಪ ಆರಂಭಗೊಳ್ಳುವ ಮುನ್ನ ಮೊರ್ಬಿ ದುರಂತದಲ್ಲಿ ಮೃತಪಟ್ಟವರ ಗೌರವಾರ್ಥವಾಗಿ ನ್ಯಾಯಾಲಯ ಎರಡು ನಿಮಿಷಗಳ ಮೌನ ಆಚರಿಸಿತು.

Similar News