ಅಭ್ಯರ್ಥಿಯನ್ನು ನೆನಪಿಡಬೇಡಿ, ಕಮಲದ ಚಿಹ್ನೆಗೆ ಮತ ನೀಡಿದರೆ ಮೋದಿಗೆ ನೀಡಿದಂತೆ: ಹಿಮಾಚಲದಲ್ಲಿ ಪ್ರಧಾನಿ

Update: 2022-11-07 10:16 GMT

ಸೋಲನ್: ಬಿಜೆಪಿಗೆ ಹಾಕಲಾಗುವ ಪ್ರತಿಯೊಂದು ಮತವು ತಮಗೆ ಮತ್ತು ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಸರ್ಕಾರಗಳಿಗೆ ಸೇರುತ್ತದೆ ಎಂದು ಹಿಮಾಚಲ ಪ್ರದೇಶದ ಸೋಲನ್‍ನಲ್ಲಿ ರವಿವಾರ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

"ಮತ್ತೆ ನೆನಪಿಡಿ, ಬಿಜೆಪಿ ಅಭ್ಯರ್ಥಿ ಯಾರು? ನೀವು ಯಾರನ್ನೂ ನೆನಪಿಡುವ ಅಗತ್ಯವಿಲ್ಲ. ತಾವರೆಯನ್ನು ನೆನಪಿಡಿ, ನಿಮ್ಮ ಬಳಿ ತಾವರೆಯೊಂದಿಗೆ ಬಂದಿದ್ದೇನೆ. ನೀವು ಮತ ಚಲಾಯಿಸುವಾಗ ಕಮಲ್ ಕಾ ಫೂಲ್ ನೋಡಿದರೆ, ಅರ್ಥ ಮಾಡಿಕೊಳ್ಳಿ,  ಇದು ಬಿಜೆಪಿ, ನಿಮಗಾಗಿ ಬಂದಿರುವ ಮೋದಿ. ಕಮಲ್ ಕಾ ಫೂಲ್‍ಗೆ ನೀವು ನೀಡುವ ಪ್ರತಿಯೊಂದು ಮತ ನೇರವಾಗಿ ಮೋದಿಯ ಖಾತೆಗೆ ನಿಮ್ಮ ಆಶೀರ್ವಾದದಂತೆ ಸೇರುತ್ತದೆ" ಎಂದು ಪ್ರಧಾನಿ ಹೇಳಿದರು.

"ಮೋದಿ ದಿಲ್ಲಿಯಲ್ಲಿದ್ದರೆ, ಇಲ್ಲಿ ಕೂಡ ಅವರನ್ನು ಬಲಪಡಿಸುವ ಅಗತ್ಯವಿದೆ,'' ಎಂದು ಹೇಳಿದ ಪ್ರಧಾನಿ, ತಮ್ಮ `ಪ್ರಣಾಮ'ದೊಂದಿಗೆ ಜನರು  ಪ್ರತಿ ಮನೆಗೆ ಹೋಗಬೇಕು ಎಂದರು.

ತಮ್ಮ ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮೋದಿ, ``ಕಾಂಗ್ರೆಸ್ ಎಂದರೆ ಅಸ್ಥಿರತೆ, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಕಾಂಗ್ರೆಸ್ ಎಂದರೆ ಸ್ವಾರ್ಥ ಮತ್ತು ಕಾಂಗ್ರೆಸ್ ಎಂದರೆ ಸ್ವಜನಪಕ್ಷಪಾತ,'' ಎಂದರು. ಕೇಂದ್ರದಲ್ಲಿ ಮೂರು ದಶಕಗಳ ಕಾಲದ ಅಸ್ಥಿರತೆ ದೇಶವನ್ನು ನಾಶಗೈದಿದೆ ಹಾಗೂ ಅಭಿವೃದ್ಧಿ ಹಿನ್ನಡೆ ಹೊಂದುವಂತಾಗಿದೆ ಎಂದು ಪ್ರಧಾನಿ ಹೇಳಿದರು.

ಆಮ್ ಆದ್ಮಿ ಪಕ್ಷವನ್ನು ಉಲ್ಲೇಖಿಸದೆಯೇ ಅದರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಮೋದಿ, "ರೂ 100 ವಿನಾಯಿತಿ ನೀಡುವವರು ಜಾಹೀರಾತಿಗೆ ರೂ. 1000 ಖರ್ಚು ಮಾಡುತ್ತಾರೆ" ಎಂದರು.

Similar News