ರಾಜೇಂದ್ರ ಚೆನ್ನಿಯವರ ‘ಆಧುನಿಕೋತ್ತರವಾದ’ ಎಡಪಂಥೀಯ ವಿಶ್ಲೇಷಣೆಗೆ ಹತ್ತಿರ

Update: 2022-11-08 05:22 GMT

ರಾಜೇಂದ್ರ ಚೆನ್ನಿ ಅವರ ‘ಆಧುನಿಕೋತ್ತರವಾದ’ಹೊತ್ತಿಗೆಯು ತಾನು ನಡೆಸುವ ತತ್ವಾನ್ವೇಷಣೆಯಿಂದ ಮತ್ತು ತನ್ನ ಆ ಅನ್ವೇಷಣೆಯಲ್ಲಿ ತತ್ವಗಳ ವಿಮರ್ಶೆಯೂ ಅಂತರ್ಗತವಾಗಿರುವುದರಿಂದ ಆಧುನಿಕೋತ್ತರವಾದವನ್ನು ವಿಮರ್ಶಾತ್ಮಕವಾಗಿ ಪರಿಚಯಿಸುವ, ಪೋಸ್ಟ್ ಮಾಡರ್ನಿಸಂನ ಎಡಪಂಥೀಯ ವಿಶ್ಲೇಷಣೆಗೆ ಬಹಳ ಹತ್ತಿರವಾಗಿರುವ ಅತ್ಯುತ್ತಮ ಕನ್ನಡ ಕೃತಿ.

80 ಪುಟಗಳಲ್ಲಿ ಸಂಕ್ಷಿಪ್ತವಾಗಿ, ಆದರೂ ದಟ್ಟವಾಗಿ ವಿಷಯವನ್ನು ಕಟ್ಟಿಕೊಡುವ ಈ ಕೃತಿಯಲ್ಲಿ ಇರುವುದು ಮೂರೇ ಅಧ್ಯಾಯಗಳು- ‘ಪೀಠಿಕೆ’, ‘ಆಧುನಿಕೋತ್ತರವಾದ’ ಮತ್ತು ‘ಉಪಸಂಹಾರ’. ‘ಆಧುನಿಕೋತ್ತರವಾದ’ ಅಧ್ಯಾಯದಲ್ಲಿ ಚರ್ಚೆಯಾಗುವ ವಿಚಾರಗಳ ಸಂಕ್ಷಿಪ್ತ ಮಾಹಿತಿ ‘ಪೀಠಿಕೆ’ಯಲ್ಲಿ ಸಿಗುತ್ತದೆಂದು ಹೇಳಬಹುದಾದರೂ ಇದರ ಕೇಂದ್ರ ಕಾಳಜಿ ‘ಆಧುನಿಕತೆ’ಯ ತತ್ತ್ವಗಳನ್ನು ಪರಿಚಯಿಸುವುದು ಹಾಗೂ ಈ ಮೂಲಕ ಆಧುನಿಕೋತ್ತರವಾದದ ಚರ್ಚೆಗೆ ಸೂಕ್ತ ಚಾರಿತ್ರಿಕ ಮತ್ತು ತಾತ್ವಿಕ ಹಿನ್ನೆಲೆ ಒದಗಿಸುವುದೇ ಆಗಿದೆ. ಇನ್ನು ‘ಉಪಸಂಹಾರ’ವು ಆಧುನಿಕೋತ್ತರವಾದದ ಎಡಪಂಥೀಯ ವಿಮರ್ಶೆಯನ್ನು ಒಳಗೊಂಡಿದೆ.

 Irony Parody Pastiche Midnight’s Children ಮುಂದೆ ಕೃತಿಯು ಸಾಹಿತ್ಯ ತತ್ವದತ್ತ ಹೊರಳುತ್ತದೆ. ‘‘ವ್ಯಕ್ತಿತ್ವದ ಆತ್ಯಂತಿಕ ವಿದಳನ ಅಥವಾ ವಿದಳನವೇ ಸ್ವ-ಎನ್ನುವ ಆಧುನಿಕೋತ್ತರವಾದವು ಬರಹಗಾರನ ವ್ಯಕ್ತಿತ್ವವನ್ನು ಹೇಗೆ ನಿರ್ವಚಿಸುತ್ತದೆ?’’ ಎನ್ನುವ ಪ್ರಶ್ನೆಯನ್ನು ಮುಂದಿಟ್ಟು, ಆಧುನಿಕೋತ್ತರವಾದಕ್ಕೂ ಹಿಂದಿನ ವ್ಯಕ್ತಿನಿಷ್ಠ ಮತ್ತು ಕೃತಿನಿಷ್ಠ ವಿಮರ್ಶಾ ಮಾದರಿಗಳನ್ನು ಪ್ರಸ್ತಾಪಿಸುತ್ತದೆ. (ವ್ಯಂಗ್ಯ) (ಅಣಕ) ಮತ್ತು (ಸಂಕರ) ಎಂಬ ಪರಿಭಾಷೆಗಳು ಹೇಗೆ ಆಧುನಿಕೋತ್ತರ ಸಾಹಿತ್ಯ ಪ್ರಯೋಗಗಳಲ್ಲಿ ಹೊಸ ಅರ್ಥಗಳನ್ನು ಪಡೆದುಕೊಂಡಿವೆಯೆಂದು ತೋರಿಸುತ್ತ ಚೆನ್ನಿ ಅವರು, ಸಲ್ಮಾನ್ ರಶ್ದಿ ಅವರ ಕಾದಂಬರಿಯನ್ನು ಉಲ್ಲೇಖಿಸಿ, ವಿವರಿಸುತ್ತಾರೆ. ಇಲ್ಲಿಂದ ಮುಂದಕ್ಕೆ ಕೃತಿಯು ಭಾಷಾವಿಜ್ಞಾನದತ್ತ ಮುಖಮಾಡುತ್ತದೆ.

Reason Rationalityಪ್ರಸಕ್ತ ಜ್ಞಾನರಾಜಕಾರಣದಲ್ಲಿ ವಿಜ್ಞಾನವೂ, ರಾಷ್ಟ್ರರಾಜಕಾರಣದಲ್ಲಿ ಚರಿತ್ರೆಯೂ, ಅಭಿವೃದ್ಧಿ ರಾಜಕಾರಣದಲ್ಲಿ ಪ್ರಗತಿ ಎನ್ನುವ ಪರಿಕಲ್ಪನೆಯೂ ಪ್ರಮುಖ ಪಾತ್ರ ವಹಿಸುತ್ತಿವೆ. ಇವಕ್ಕೂ ಜ್ಞಾನಪರ್ವದ ಕೊಡುಗೆಗಳಾದ ಮತ್ತು ಗೂ ಕರುಳುಬಳ್ಳಿಯ ನಂಟಿದೆ. ಈ ವಿಚಾರವನ್ನು ಸಮರ್ಪಕವಾಗಿ ವಿವರಿಸುತ್ತ ಚೆನ್ನಿ ಅವರು ಆಧುನಿಕತೆಯ ಬಂಡವಾಳಶಾಹಿ ನೋಟಕ್ರಮದತ್ತ ವಿಮರ್ಶಕ ದೃಷ್ಟಿಯನ್ನೂ ಬೀರುತ್ತಾರೆ. ಮಾರ್ಕ್ಸ್ ವಾದವೂ ಒಳಗೊಂಡಂತೆ ಈವರೆಗಿನ ಯಾವ ಮಹಾ-ಕಥನಗಳೂ, ಗ್ರ್ಯಾಂಡ್ ನರೇಟೀವ್‌ಗಳೂ ವಿವರಿಸಲಾಗದ ಔದ್ಯೋಗಿಕೋತ್ತರ ಸಮಾಜವನ್ನು ಅರ್ಥೈಸುವುದರತ್ತ ಆಧುನಿಕೋತ್ತರವಾದದ ಚಿಂತನೆಗಳು ಕಾರ್ಯಮುಖಿಯಾಗಿವೆಯೆಂದು ನಂಬುವ ಲ್ಯೊತಾರ್ ನಾಝಿವಾದ ಮತ್ತು ಎರಡು ವಿಶ್ವಯುದ್ಧಗಳ ಹಿನ್ನೆಲೆಯಲ್ಲಿ ಆಧುನಿಕತೆಯನ್ನು ವಿಮರ್ಶಿಸಿದ್ದನ್ನು ಚೆನ್ನಿ ಅವರು ಕಟ್ಟಿಕೊಡುತ್ತಾರೆ.

ಚೆನ್ನಿ ಅವರ ಪ್ರಕಾರ ಆಧುನಿಕತೆಯ ಫಲಗಳು ಎಲ್ಲ ವರ್ಗ ಮತ್ತು ಜಾತಿಗಳಿಗೆ ಸಮಾನವಾಗಿ ತಲುಪಿಲ್ಲ. ಹಾಗಾಗಿ, ‘‘ಆಧುನಿಕೋತ್ತರವೆಂದು ಕರೆಯುವ ಅನುಭವ ವಲಯ ಹಾಗೂ ಪ್ರಜ್ಞೆಗಳು ಸೀಮಿತವಾದ ಒಂದು ಧೀಮಂತ ಯಜಮಾನ ವರ್ಗಕ್ಕೆ ತಲುಪಿದವು’’ ಎಂದು ಹೇಳುವ ಚೆನ್ನಿ ‘‘ಭಾರತದಲ್ಲಿ ಶೂದ್ರ ಹಾಗೂ ದಲಿತ ಸಮುದಾಯಗಳು ವಸಾಹತುಶಾಹಿ ಆಧುನಿಕತೆಯನ್ನು ಉತ್ಸಾಹದಿಂದ ಬರಮಾಡಿಕೊಂಡವು’’ ಎಂದೂ ಗುರುತಿಸುತ್ತಾರೆ.

ಬಹುತೇಕ ಪಶ್ಚಿಮದ ಅಕಾಡಮಿಕ್ ವಲಯದಲ್ಲೇ ರೂಪಿತವಾದ ಈ ಆಧುನಿಕೋತ್ತರವಾದದ ಚಿಂತನೆಗಳನ್ನು, ಅದರ ಪರಿಭಾಷೆಗಳನ್ನು ಕನ್ನಡಕ್ಕೆ ಮತ್ತು ಕನ್ನಡದಲ್ಲಿ ಪರಿಚಯಿಸುವುದು ದೊಡ್ಡ ಸವಾಲಿನ ಕೆಲಸವೇ ಸರಿ. ಇದನ್ನು ಎಷ್ಟೇ ಚೆನ್ನಾಗಿ ನಿರ್ವಹಿಸಲು ನೋಡಿದರೂ ಸಣ್ಣ-ಪುಟ್ಟ ತಪ್ಪುಗಳೋ, ಗೊಂದಲಗಳೋ ನುಸುಳಬಹುದು. ಇಂಗ್ಲಿಷ್ ಪಾರಿಭಾಷಿಕ ಪದಗಳಿಗೆ ಈ ಪುಸ್ತಕದಲ್ಲಿ ಸೂಚಿಸಲಾದ ಕನ್ನಡ ಅಥವಾ ಸಂಸ್ಕೃತ ಪರ್ಯಾಯಗಳೆಲ್ಲವೂ ಗೊಂದಲರಹಿತವಾಗೇನೂ ಇಲ್ಲ. ಆದರೆ, ಎಲ್ಲ ಪಾರಿಭಾಷಿಕ ಪದಗಳಿಗೂ ಕನ್ನಡದಲ್ಲೋ, ಸಂಸ್ಕೃತದಲ್ಲೋ ಪರ್ಯಾಯವನ್ನು ಹುಡುಕಲೇಬೇಕೆಂಬ ಹಠವನ್ನೂ ಚೆನ್ನಿ ಅವರು ತೋರಿಲ್ಲ. ಪರ್ಯಾಯ ಪದಗಳನ್ನು ನೀಡದೆಯೂ ಕೆಲವು ಪಾರಿಭಾಷಿಕ ಪದಗಳನ್ನು ಬಳಸಿದ್ದಾರೆ. ಇದೊಂದು ಒಳ್ಳೆಯ ನಡೆ.

ಇನ್ನು, ಆಧುನಿಕೋತ್ತರವಾದಕ್ಕೆ ಫ್ರಾಂಕ್ಫರ್ಟ್ ಸ್ಕೂಲ್ ಚಿಂತನಾ ಪರಂಪರೆಯಿಂದ ಪ್ರಭಾವಿತರಾದ ಅಡೊರ್ನೊ, ಲುಕಾಚ್ಸ್, ಇತ್ತೀಚಿನ ಸ್ಲಾವೊಯ್ ಜಿಜಾಕ್ ಮುಂತಾದ ಅಕಾಡಮಿಕ್ ಮಾರ್ಕ್ಸ್‌ವಾದಿಗಳ ಕೊಡುಗೆಯೂ ದೊಡ್ಡದಿದೆ ಎಂಬ ಬಹಳ ಗಂಭೀರವಾದ, ಪ್ರಾಕ್ಸಿಸ್‌ಗೂ ಒತ್ತುನೀಡುವ ಎಡಪಂಥೀಯರ ಆರೋಪಕ್ಕೂ, ಅದರ ಚರ್ಚೆಗೂ ಈ ಕೃತಿಯಲ್ಲಿ ಸಣ್ಣ ಅವಕಾಶ ಸಿಗಬಹುದಾಗಿತ್ತು. ಅಲ್ಲದೆ, ಆಧುನಿಕೋತ್ತರವಾದವನ್ನು ನವ-ಮಾರ್ಕ್ಸ್‌ವಾದದ ನೇರ ಉತ್ಪನ್ನವೆಂದು ವ್ಯಾಖ್ಯಾನಿಸುವವರು ಪಶ್ಚಿಮ ರಾಷ್ಟ್ರಗಳಲ್ಲಿ ಸೆಲೆಬ್ರಿಟಿ ಮತ್ತು ಫೆನಾಮೆನನ್‌ಗಳಾಗಿರುವುದನ್ನು ಗಮನಿಸಿದರೆ, ಆ ಎಲ್ಲ ವಿದ್ಯಮಾನಗಳ ಸಂಕ್ಷಿಪ್ತ ಚರ್ಚೆಗೂ ಈ ಪುಸ್ತಕದಲ್ಲಿ ಸ್ಥಳಾವಕಾಶ ನೀಡಬೇಕಾಗಿತ್ತು ಎಂದೆನಿಸುತ್ತದೆ.

Similar News