ಕನ್ನಡದ ಹಿರಿಯ ನಟ ಲೋಹಿತಾಶ್ವ ನಿಧನ
ಬೆಂಗಳೂರು, ನ. 8: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡದ ಹಿರಿಯ ರಂಗಭೂಮಿ ಕಲಾವಿದ ಹಾಗೂ ಚಿತ್ರನಟ ಟಿ.ಎಸ್.ಲೋಹಿತಾಶ್ವ (80) ಅವರು ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ತೀವ್ರ ಹೃದಯಾಘಾತದಿಂದ ಲೋಹಿತಾಶ್ವ ಅವರನ್ನು ಒಂದು ತಿಂಗಳ ಹಿಂದೆ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಸುಮಾರು ಒಂದು ತಿಂಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅವರು ನ.8ರ ಮಧ್ಯಾಹ್ನ ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆ ತುಮಕೂರು ಜಿಲ್ಲೆಯ ಅವರ ಸ್ವಗ್ರಾಮದಲ್ಲಿ ಬುಧವಾರ ನೆರವೇರಲಿದೆ.
ಲೋಹಿತಾಶ್ವ ಅವರು ತುಮಕೂರಿನ ತೊಂಡಗೆರೆಯಲ್ಲಿ 1942ರ ಆ.5ರಂದು ಜನಿಸಿದ್ದರು. ತಂದೆ ಸಿದ್ಧವೀರಪ್ಪ-ತಾಯಿ ಭದ್ರಮ್ಮ ದಂಪತಿ ಪುತ್ರ. ಚಿತ್ರ ನಟ, ನಾಟಕಕಾರ ಮತ್ತು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಅವರು ಚಲನಚಿತ್ರಗಳು, ನಾಟಕಗಳು ಮತ್ತು ದೂರದರ್ಶನ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಲೋಹಿತಾಶ್ವ ಅವರು ಸುಮಾರು 500 ಚಿತ್ರಗಳಲ್ಲಿ ನಟಿಸಿದ್ದು, ಅವುಗಳಲ್ಲಿ ಅಭಿಮನ್ಯು, ಎ.ಕೆ. 47, ದಾದಾ, ದೇವಾ, ಎಲ್ಲರಂಥಲ್ಲ ನನ್ನ ಗಂಡ, ಏಕಲವ್ಯ, ಹೊಸ ನೀರು, ಇಂದಿನ ರಾಮಾಯಣ, ಕಲಾವಿದ, ನೀ ಬರೆದ ಕಾದಂಬರಿ, ಒಂದು ಊರಿನ ಕಥೆ, ಪ್ರೀತಿ ವಾತ್ಸಲ್ಯ, ಸಾಂಗ್ಲಿಯಾನ, ಸಮಯದ ಗೊಂಬೆ, ಸಿಂಹಾಸನ ಮುಂತಾದವು. ಲೋಹಿತಾಶ್ವ ಚಿತ್ರರಂಗದಲ್ಲಿ ತಮ್ಮ ಗಂಭೀರ ಧ್ವನಿಗೆ ಹೆಸರಾದವರು. ಅವರ ಪುತ್ರ ನಟ ಶರತ್ ಲೋಹಿತಾಶ್ವ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
ಲೋಹಿತಾಶ್ವ ಅವರು ಬರಗೂರು ರಾಮಚಂದ್ರಪ್ಪ ಅವರ ಚಿತ್ರಕ್ಕೆ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ನಂತರ ಪರಶುರಾಮ, ಸಮಯದ ಗೊಂಬೆ ಸಿನಿಮಾಗಳಲ್ಲಿ ಡಾ.ರಾಜ್‍ಕುಮಾರ್ ಅವರ ಜತೆ ಕಾಣಿಸಿಕೊಂಡಿದ್ದಾರೆ ಹಾಗೂ ಅಂಬರೀಶ್, ವಿಷ್ಣುವರ್ಧನ್, ಶಂಕರ್‍ನಾಗ್ ಜತೆ ಅತಿಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅವರು ಇತ್ತೀಚಿನ ವರ್ಷಗಳಲ್ಲಿ ಸಿನಿಮಾರಂಗದಿಂದ ದೂರ ಇದ್ದರು. 2018ರ ಬಳಿಕ ಲೋಹಿತಾಶ್ವ ಮತ್ತೆ ಬಣ್ಣ ಹಚ್ಚಿಲ್ಲ. ಹಿರಿಯ ನಟನ ಅಗಲಿಕೆಗೆ ಅನೇಕ ಸಿನಿಮಾ ಗಣ್ಯರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ತಮ್ಮ ಕಂಚಿನ ಕಂಠ ಹಾಗೂ ಪ್ರಬುದ್ಧ ನಟನೆಯಿಂದ ಕನ್ನಡಿಗರ ಜನಮಾನಸದಲ್ಲಿ ಶಾಶ್ವತವಾಗಿ ಸ್ಥಾನ ಪಡೆದಿದ್ದ ಹಿರಿಯ ನಟ ಶ್ರೀ ಲೋಹಿತಾಶ್ವ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
— Basavaraj S Bommai (@BSBommai) November 8, 2022
ಓಂ ಶಾಂತಿಃ pic.twitter.com/AMjDaiYBl8