ಕೆಎಸ್‌ಆರ್‌ಟಿಸಿ ಮಂಗಳೂರು ಜತೆಗೆ ಪುತ್ತೂರು ವಿಭಾಗ ವಿಲೀನಕ್ಕೆ ಅವಕಾಶ ನೀಡುವುದಿಲ್ಲ: ಇಂಟಕ್

Update: 2022-11-08 14:45 GMT

ಮಂಗಳೂರು: ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವನ್ನು ಪುತ್ತೂರು ವಿಭಾಗದೊಂದಿಗೆ ವಿಲೀನಗೊಳಿಸುವ ಹುನ್ನಾರ ನಡೆಯುತ್ತಿದ್ದು, ಸರಕಾರಿ ವ್ಯವಸ್ಥೆ ಖಾಸಗೀಕರಣವಾಗುವ ಮೊದಲು ಜನತೆ ಎಚ್ಚೆತ್ತುಕೊಳ್ಳಬೇಕು. ವಿಲೀನ ಪ್ರಕ್ರಿಯೆಗೆ ಇಂಟಕ್ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಈ ಬಗ್ಗೆ ತೀವ್ರ ರೀತಿಯ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು  ಎಂದು ಇಂಟಕ್ ದ.ಕ. ಜಿಲ್ಲಾಧ್ಯಕ್ಷ  ಮನೋಹರ ಶೆಟ್ಟಿ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಂಸದರು, ಶಾಸಕರು ಎಚ್ಚೆತ್ತುಕೊಂಡು ವಿಲೀನ ಪ್ರಕ್ರಿಯೆಗೆ ತಡೆಯೊಡ್ಡಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಗಮನಸೆಳೆಯಲಾಗುವುದು ಎಂದರು.

ವಿಲೀನ ಪ್ರಕ್ರಿಯೆಯಿಂದ ಮಂಗಳೂರಿನ ಜನತೆ ಹೆಚ್ಚಿನ ಸಮಸ್ಯೆ ಎದುರಿಸಲಿದ್ದಾರೆ. ಇದಕ್ಕೆ ಅವಕಾಶ ಕಲ್ಪಿಸಬಾರದು. ವಿಲೀನ ಪ್ರಕ್ರಿಯೆ ಕುರಿತಂತೆ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಚಂದ್ರಪ್ಪ ಅವರು ಹೇಳಿಕೆ ನೀಡಿದ್ದು, ತೆರೆಮರೆಯಲ್ಲಿ ಇದರ ಕಾರ್ಯ ನಡೆಯುತ್ತಿದೆ. ಖಾಸಗಿಯವರಿಗೆ ಅನುಕೂಲತೆ ಕಲ್ಪಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ. ಇದನ್ನು ಸಾರ್ವಜನಿಕರು ಅರ್ಥೈಸಿಕೊಂಡು, ವಿಲೀನ ಪ್ರಕ್ರಿಯೆ ನಡೆಯದಂತೆ ಹೋರಾಟ ನಡೆಸಲು ಸಿದ್ಧರಾಗಬೇಕು. ಇಲ್ಲವಾದರೆ ಕುಂದಾಪುರ, ಬೈಂದೂರಿನ ಮಂದಿಯೂ ಒಂದು ಪಾಸ್‌ಗಾಗಿ ಪುತ್ತೂರಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಬಹುದು. ಅಲ್ಲದೆ ವಿಲೀನ ಪ್ರಕ್ರಿಯೆಯಿಂದ ಸಾಕಷ್ಟು ಮಂದಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ಉದ್ಯೋಗಕ್ಕೆ ಕುತ್ತಾಗಲಿದೆ ಎಂದವರು ಎಚ್ಚರಿಸಿದರು.

ಮಂಗಳೂರು ವಿಭಾಗ ಮತ್ತು ಪುತ್ತೂರು ವಿಭಾಗವು ಒಟ್ಟು 950 ಮಾರ್ಗಸೂಚಿಗಳನ್ನು ಹೊಂದಿದ್ದುಘಿ, ವಿಲೀನಗೊಳಿಸಿದ್ದಲ್ಲಿ ಆಡಳಿತ ನಿರ್ವಹಿಸಲು ಕಷ್ಟವಾಗುವುದಲ್ಲದೆ ಜನತೆ ಸಕಾಲದಲ್ಲಿ ಸೇವೆಗಳನ್ನು ಪಡೆಯಲು ವಿಫಲರಾಗಬೇಕಾಗುತ್ತದೆ. 950 ಮಾರ್ಗಸೂಚಿಗಳನ್ನೊಳಗೊಂಡ ವಿಭಾಗವನ್ನು ವಿಲೀನಗೊಳಿಸುವ ನಿರ್ಧಾರ ಸಮಂಜಸವಾದುದಲ್ಲ ಎಂದವರು ಹೇಳಿದರು.

ಕೆಎಸ್‌ಆರ್‌ಟಿಸಿ ಮಂಗಳೂರು ಬಸ್ ನಿಲ್ದಾಣವು ಸುಮಾರು 3 ಎಕ್ರೆ ವಿಸ್ತೀರ್ಣವಿದ್ದುಘಿ, ವಿಭಾಗೀಯ ಕಾರ್ಯಾಗಾರ ಮತ್ತು ಮಂಗಳೂರು ಎರಡನೇ ಘಟಕವು ಸುಮಾರು 8.5 ಎಕ್ರೆ ಜಾಗದಲ್ಲಿ ಕಾರ್ಯನಿರ್ವಹಿಸು ತ್ತಿದೆ. ಸಮೀಪದಲ್ಲಿಯೇ ೩ನೇ ಘಟಕ ಕಾರ್ಯನಿರ್ವಹಿಸುತ್ತಿದೆ. ಬೆಂದೂರ್‌ವೆಲ್‌ನಲ್ಲಿ ಪಬ್ಲಿಕ್ ಪ್ರೈವೇಟ್ ಪಾರ್ಟನರ್‌ಶಿಪ್‌ನಲ್ಲಿ(ಪಿಪಿಪಿ) ವಾರ್ಷಿಕ ಕೇವಲ ರೂ.40 ಲಕ್ಷ ಬಾಡಿಗೆಗೆ ನೀಡಲಾಗುತ್ತಿದೆ. ಮಂಗಳೂರು ವಿಭಾಗವನ್ನು ಪುತ್ತೂರು ವಿಭಾಗಕ್ಕೆ ವರ್ಗಾಯಿಸಿದ್ದಲ್ಲಿ ಈ ಎಲ್ಲಾ ಜಾಗಗಳಲ್ಲಿ ಖಾಸಗಿಯವರಿಗೆ(ಪಿಪಿಪಿ) ಆಧಾರದಲಿ ನೀಡಿ ಕ್ರಮೇಣ ದ.ಕ.ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಹುನ್ನಾರವಾಗಿದೆ. ಜಿಲ್ಲೆಯ ಜನರು ಸರಕಾರಿ ಸಾರಿಗೆ ವ್ಯವಸ್ಥೆಯಿಂದ ವಂಚಿತರಾಗುವುದು ಖಚಿತ. ಆದ್ದರಿಂದ ಎಚ್ಚೆತ್ತುಕೊಳ್ಳಲು ಇದು ಸಕಾಲ ಎಂದು ಮನೋಹರ ಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಇಂಟಕ್ ರಾಜ್ಯ ಉಪಾಧ್ಯಕ್ಷ ಬಿ.ಕೆ.ಸುರೇಶ್, ಕಾನೂನು ಸಲಹೆಗಾರ ದಿನಕರ ಶೆಟ್ಟಿಘಿ, ಕಾರ್ಯದರ್ಶಿ ರತ್ನಾಕರ ಗಟ್ಟಿಘಿ, ಕೆಎಸ್‌ಆರ್‌ಟಿಸಿ ಇಂಟಕ್ ಮಂಗಳೂರು ವಿಭಾಗ ಅಧ್ಯಕ್ಷ ವಾಲ್ಟರ್ ಪಿಂಟೋ ಉಪಸ್ಥಿತರಿದ್ದರು.

Similar News