ನ.11ರಂದು ರಾಜ್ಯಕ್ಕೆ ಪ್ರಧಾನಿ ಭೇಟಿ; ಕೆಂಪೇಗೌಡ ಪ್ರತಿಮೆ ಉದ್ಘಾಟನೆ, ವಂದೇ ಭಾರತ್ ರೈಲಿಗೆ ಚಾಲನೆ

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‌–2 ಫೋಟೊ ಹಂಚಿಕೊಂಡ ಮೋದಿ

Update: 2022-11-09 17:25 GMT

ಬೆಂಗಳೂರು, ನ.9: ಪ್ರಧಾನಿ ನರೇಂದ್ರ ಮೋದಿ ನ.11ರಂದು ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಈ ವೇಳೆ ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport Bengaluru) ನಿರ್ಮಿಸಿರುವ ಟರ್ಮಿನಲ್-2, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಉದ್ಘಾಟನೆ, ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಸಂಚರಿಸಲಿರುವ ವಂದೇ ಭಾರತ್ ರೈಲು, ಭಾರತ್ ಗೌರವ್ ಕಾಶಿ ರೈಲಿಗೆ ಚಾಲನೆ ನೀಡಲಿದ್ದಾರೆ.

ನ.11ರಂದು ಬೆಳಗ್ಗೆ 10 ಗಂಟೆಗೆ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ, ಅಲ್ಲಿಂದ ನೇರವಾಗಿ ಶಾಸಕರ ಭವನಕ್ಕೆ ಆಗಮಿಸಲಿದ್ದು ಕನಕದಾಸ ಹಾಗೂ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾರ್ಲಾಪಣೆ ಮಾಡಲಿದ್ದಾರೆ. ಅಲ್ಲಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ವಂದೇ ಭಾರತ್ ಹಾಗೂ ಭಾರತ್ ಗೌರವ್ ಕಾಶಿ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.

ಆನಂತರ, ಹೆಬ್ಬಾಳದ ಮೇಖ್ರಿ ಸರ್ಕಲ್ ಬಳಿಯಿರುವ ವಾಯುಪಡೆ ತರಬೇತಿ ಕಮಾಂಡ್ ಸೆಂಟರ್ ನಿಂದ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಟರ್ಮಿನಲ್-2 ಅನ್ನು ಉದ್ಘಾಟಿಸಿದ ಬಳಿಕ ವಿಮಾನ ನಿಲ್ದಾಣದ ಆವರಣದಲ್ಲಿ ನಿರ್ಮಿಸಲಾಗಿರುವ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಬಳಿಕ ಕೆಂಪೇಗೌಡ ಪ್ರತಿಮೆ ಬಳಿ ಆಯೋಜಿಸಿರುವ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಅಲ್ಲದೆ, ಇದೇ ವೇಳೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿಯ ‘ಅಮೃತ್ 2.0’ ಯೋಜನೆಗೆ ಅವರು ಚಾಲನೆ ನೀಡಲಿದ್ದಾರೆ.

► ವಿಮಾನ ನಿಲ್ದಾಣದ ಟರ್ಮಿನಲ್‌–2 ಫೋಟೊ ಹಂಚಿಕೊಂಡ ಮೋದಿ

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ  ಟರ್ಮಿನಲ್‌–2 ಲೋಕಾರ್ಪಣೆಗೆ ಸಿದ್ಧವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಇದರ ಫೋಟೋಗಳನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. 

''ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ನ ಅದ್ಭುತ ದೃಶ್ಯಕಾವ್ಯ ಇಲ್ಲಿದೆ. ಇದು ವಿಮಾನ ನಿಲ್ದಾಣದ ಸಾಮರ್ಥ್ಯದ ವಿಸ್ತರಣೆಗೂ ಇಂಬು ನೀಡುತ್ತದೆ ಮತ್ತು ವಾಣಿಜ್ಯಕ್ಕೆ ಉತ್ತೇಜನ ನೀಡುತ್ತದೆ. ಟರ್ಮಿನಲ್ ಕಟ್ಟಡವು ಸುಸ್ಥಿರತೆಗೆ ಅತ್ಯುನ್ನತ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂಬುದು ನನಗೆ ಸಂತಸ ತಂದಿದೆ'' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. 

Similar News