ಗುಜರಾತ್: ಮೂಡುತ್ತಿದೆಯೇ ಮೂರನೇ ಪರ್ಯಾಯದೆಡೆಗೆ ಮತದಾರರ ಒಲವು?

Update: 2022-11-10 05:03 GMT

ಪಂಜಾಬ್‌ನಲ್ಲಿ ಸಾಂಪ್ರದಾಯಿಕ ಶಕ್ತಿಗಳನ್ನು ಮಣಿಸಿದ ಬಳಿಕ ಈಗ ಗುಜರಾತ್‌ನಲ್ಲಿ ಆಪ್ ಹವಾ ಎದ್ದಿದೆ. ಬಿಜೆಪಿಯವರೇ ತಮ್ಮ ಬೆಂಬಲಕ್ಕಿದ್ದಾರೆ ಎಂದು ಈಚೆಗೊಂದು ಹೇಳಿಕೆ ನೀಡಿರುವ ಕೇಜ್ರಿವಾಲ್, ಮತ ಒಡೆಯುವುದಕ್ಕೆ ಮಾತ್ರವೇ ಗುಜರಾತ್‌ಗೆ ಬಂದವರಲ್ಲ ಎಂಬುದಂತೂ ನಿಚ್ಚಳ.

ಪಂಜಾಬ್ ಚುನಾವಣೆಯಲ್ಲಿ ಅಕಾಲಿದಳ ಮತ್ತು ಕಾಂಗ್ರೆಸ್‌ನಂತಹ ಸಾಂಪ್ರದಾಯಿಕ ಶಕ್ತಿಗಳನ್ನು ಮಣಿಸಿ ಬಹುದೊಡ್ಡ ಮಟ್ಟದ ಗೆಲುವು ಸಾಧಿಸಿದ ಬಳಿಕ ಆಮ್ ಆದ್ಮಿ ಪಕ್ಷ ಈಗ ಗುಜರಾತ್ ಮೇಲೆ ಕಣ್ಣಿಟ್ಟಿದೆ. ಇದೇ ಹೊತ್ತಲ್ಲಿ ಗುಜರಾತ್ ಮತದಾರ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮೂರನೇ ಪರ್ಯಾಯವೊಂದರ ಬಗ್ಗೆ ಒಲವು ತೋರಿಸುತ್ತಿರುವುದು, ಆಪ್‌ಗೆ ಉತ್ತಮ ಸ್ವಾಗತವೇ ಸಿಕ್ಕುವ ಸುಳಿವನ್ನು ಕಾಣಿಸಿದೆ.

ಗುಜರಾತ್ ವಿಧಾನಸಭೆ ಚುನಾವಣೆಯನ್ನು ಎದುರಿಸಲು ಆಪ್ ವರಿಷ್ಠ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಾಕಷ್ಟು ಸಮಯದಿಂದಲೇ ತಯಾರಿ ಮಾಡಿಕೊಂಡು ಬಂದಿದ್ದಾರೆ. ಅವರ ಗುಜರಾತ್‌ನಾದ್ಯಂತದ ಪ್ರವಾಸ ಈ ನಿಟ್ಟಿನ ಮಹತ್ವದ ಹೆಜ್ಜೆಯಾಗಿತ್ತು. 

ಗುಜರಾತ್ ಜನರೊಡನೆ ಒಂದು ಬಾಂಧವ್ಯವನ್ನು ಬೆಸೆಯುವ ಯತ್ನವಾಗಿ ಮತ್ತು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿಯದ್ದು ಕೆಟ್ಟ ಆಡಳಿತ ಎಂದು ಸವಾಲು ಹಾಕುವುದಕ್ಕಾಗಿ ಕೈಗೊಳ್ಳಲಾಗಿದ್ದ ಈ ಪ್ರವಾಸದಲ್ಲಿದ್ದ ಅವರ ಆಕ್ರಮಣಕಾರಿ ನಡೆ ಈ ಸಲದ ಚುನಾವಣೆಯ ಮೇಲೆ ಪರಿಣಾಮ ಬೀರದೇ ಇರದು ಎಂಬ ವಿಶ್ಲೇಷಣೆಗಳಿವೆ. 

ಇದರ ಜೊತೆಗೇ ಈವರೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯಷ್ಟೇ ಪೈಪೋಟಿಯಿರುತ್ತಿದ್ದ ಗುಜರಾತ್ ಅಖಾಡದಲ್ಲಿ ಮತ್ತೊಂದು ಪರ್ಯಾಯದ ಅಗತ್ಯವಿದೆ ಎಂಬುದನ್ನು ಅಲ್ಲಿನ ಹೆಚ್ಚಿನ ಮತದಾರರು ಮನಗಾಣುವಂತಾಗುವುದಕ್ಕೂ ಕೇಜ್ರಿವಾಲ್ ಪ್ರವಾಸ ಕಾರಣವಾಗಿದೆ ಎಂಬುದು ನಿಜ.

ಈಚೆಗೆ ನಡೆದ ಸಮೀಕ್ಷೆಯೊಂದು (ಲೋಕನೀತಿ-ಸಿಎಸ್‌ಡಿಎಸ್), ಗುಜರಾತ್ ಮತದಾರನ ಮನಸ್ಸಿನಲ್ಲಿ ಮೂರನೇ ಪರ್ಯಾಯದ ಬಗ್ಗೆ ಆಸಕ್ತಿ ಮೂಡಿದೆಯೆಂಬುದಕ್ಕೆ ಪುಷ್ಟಿಯೊದಗಿಸಿದೆ. ಶೇ.61ರಷ್ಟು ಮತದಾರರು ಗುಜರಾತ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯವಾಗಿ ಮತ್ತೊಂದು ಪಕ್ಷದ ಅಗತ್ಯವನ್ನು ಬಯಸಿದ್ದಾರೆ ಎಂಬ ಸಂಗತಿ ಆ ಸಮೀಕ್ಷೆಯಿಂದ ದೃಢವಾಗಿದೆ. 

ಪರ್ಯಾಯದ ಅಗತ್ಯವಿಲ್ಲ ಎಂದಿರುವವರ ಸಂಖ್ಯೆ ನೂರರಲ್ಲಿ ಕಾಲುಭಾಗವೂ ಇಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಪರ್ಯಾಯದ ಅಗತ್ಯವಿದೆ ಎಂದು ಹೇಳಿದವರಲ್ಲಿ ಈಗಿರುವ ಎರಡೂ ಪಕ್ಷಗಳ ಸಾಂಪ್ರದಾಯಿಕ ಮತದಾರರ ಸಂಖ್ಯೆಯೂ ಗಮನೀಯವಾಗಿ ದೊಡ್ಡ ಮಟ್ಟದಲ್ಲೇ ಇದೆ. ಮತ್ತೊಂದು ಪಕ್ಷ ಬರಲಿ ಎಂದು ಹೇಳಿರುವವರಲ್ಲಿ ಕಾಂಗ್ರೆಸ್ ಮತದಾರರು ಶೇ.61ರಷ್ಟಿದ್ದರೆ, ಬಿಜೆಪಿ ಮತದಾರರ ಸಂಖ್ಯೆ ಶೇ.54 ಇದೆ. 

ಆಪ್ ಮತದಾರರು ಶೇ.72ರಷ್ಟಿದ್ದರೆ, ಇತರ ಪಕ್ಷಗಳ ಶೇ.65ರಷ್ಟು ಮತದಾರರು ಪರ್ಯಾಯ ಪಕ್ಷವೊಂದು ಬರಲಿ ಎಂದಿದ್ದಾರೆ. ಬೇಡ ಎಂದವರ ಪ್ರಮಾಣ ಹೀಗಿದೆ: ಕಾಂಗ್ರೆಸ್ ಮತದಾರರು ಶೇ.23, ಬಿಜೆಪಿ ಮತದಾರರು ಶೇ.30, ಆಪ್ ಮತದಾರರು ಶೇ.19 ಮತ್ತು ಇತರ ಪಕ್ಷಗಳ ಮತದಾರರು ಶೇ.11. ಇನ್ನೊಂದು ಆಯಾಮದಿಂದಲೂ ಜನಮತವನ್ನು ಪರಿಶೀಲಿಸುವ ಪ್ರಯತ್ನವನ್ನು ಈ ಸಮೀಕ್ಷೆ ಮಾಡಿದೆ. 

ಅದರಂತೆ, ಈಗಿನ ಸರಕಾರದಿಂದ ಅಭಿವೃದ್ಧಿಯಾಗಿದೆ ಎಂದು ಒಪ್ಪಿಯೂ ಮೂರನೇ ಪಕ್ಷವೊಂದು ರಾಜ್ಯದಲ್ಲಿ ಬರುವುದರ ಬಗ್ಗೆ ಜನತೆ ಒಲವು ಹೊಂದಿದೆ. ಅಭಿವೃದ್ಧಿಯಾಗಿದೆ, ಮತ್ತೊಂದು ಅವಕಾಶ ಕೊಟ್ಟು ನೋಡೋಣ ಎಂದಿರುವವರು ಶೇ.27ರಷ್ಟು ಮಂದಿ. ಅಭಿವೃದ್ಧಿಯೇನೋ ಆಗಿದೆ, ಆದರೆ ಹೊಸ ಪಕ್ಷಕ್ಕೆ ಒಂದು ಅವಕಾಶ ಸಿಗಲಿ ಎಂದು ಬಯಸುತ್ತಿರುವವರು ಶೇ.44ರಷ್ಟಿದ್ದಾರೆ. 

ಅಭಿವೃದ್ಧಿಯೇ ಆಗಿಲ್ಲ, ಹೀಗಿರುವಾಗ ಈಗಿನ ಸರಕಾರಕ್ಕೆ ಮತ್ತೊಂದು ಅವಕಾಶ ಕೊಟ್ಟುನೋಡುವ ಪ್ರಶ್ನೆ ಎಲ್ಲಿ ಬರುತ್ತದೆ ಎನ್ನುತ್ತಿರುವವರು ಶೇ.14ರಷ್ಟು. ಹೀಗೆ ಬಿಜೆಪಿಗೇ ಮತ ನೀಡುವ ಉದ್ದೇಶವುಳ್ಳ ಅರ್ಧದಷ್ಟು ಮತದಾರರು ಮೂರನೇ ಪರ್ಯಾಯವೊಂದು ಬರಬೇಕೆಂಬುದನ್ನು ವಿರೋಧಿಸುತ್ತಿಲ್ಲ ಎಂಬುದು ಗುಜರಾತ್‌ನಲ್ಲಿ ಮೂಡಿಕೊಳ್ಳುತ್ತಿರುವ ಹೊಸ ರಾಜಕೀಯ ಅಲೆಯೊಂದರ ಸೂಚಕ. 

ಆದರೆ ಆಪ್ ಈ ಚುನಾವಣೆಯಲ್ಲಿ ಏನಾಗಲಿದೆ ಎಂಬುದರ ಬಗ್ಗೆ ಜನತೆಯ ಯೋಚನೆಯೇನಿದೆ ಎಂದು ನೋಡಿಕೊಂಡರೆ, ಅದು ಮತವನ್ನು ಒಡೆಯುವ ಕೆಲಸವನ್ನಷ್ಟೇ ಮಾಡೀತು ಎಂಬುದು ಮೂರನೇ ಒಂದರಷ್ಟು ಮತದಾರರ ಅಭಿಪ್ರಾಯ. ಬಿಜೆಪಿ ಮತ್ತು ಕಾಂಗ್ರೆಸ್‌ನಷ್ಟೇ ಪ್ರಬಲತೆಯನ್ನು ಆಪ್ ತೋರಿಸಲಿದ್ದು ಹೆಚ್ಚು ಸೀಟುಗಳನ್ನು ಗೆಲ್ಲಲಿದೆ ಮತ್ತು ಸರಕಾರವನ್ನು ರಚಿಸಲೂಬಹುದೆಂಬ ಅಭಿಪ್ರಾಯವೂ ಹೆಚ್ಚು ಕಡಿಮೆ ಅಷ್ಟೇ ಸಂಖ್ಯೆಯ ಮತದಾರರಿಂದ ವ್ಯಕ್ತವಾಗಿದೆ. 

ಕಳೆದ 27 ವರ್ಷಗಳಿಂದ ಗುಜರಾತ್‌ನಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಇಷ್ಟೂ ವರ್ಷಗಳಲ್ಲಿ ಚುನಾವಣೆ ಕೊಂಚ ತ್ರಾಸದಾಯಕ ವಾದದ್ದು 2017ರಲ್ಲಿ. ಮೋದಿ ಮತ್ತು ಅಮಿತ್ ಶಾ ತವರಾದ ಗುಜರಾತ್‌ನಲ್ಲಿ ಕಳೆದ ಚುನಾವಣೆಯಲ್ಲಿ ಒಟ್ಟು 182 ವಿಧಾನಸಭೆ ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದ್ದು 99 ಸ್ಥಾನಗಳನ್ನು ಮಾತ್ರ. 

ಇದು ಹುಟ್ಟಿಸಿರುವ ಆತಂಕದಿಂದಲೇ ಈ ಬಾರಿ ಅದು ಚುನಾವಣೆಗಾಗಿ ಭಾರೀ ಎಚ್ಚರಿಕೆ ವಹಿಸಿದೆ. ಇದರ ನಡುವೆಯೇ ಆಪ್ ಹವಾ ಎದ್ದಿದೆ. ಬಿಜೆಪಿಯವರೇ ತಮ್ಮ ಬೆಂಬಲಕ್ಕಿದ್ದಾರೆ ಎಂದು ಈಚೆಗೊಂದು ಹೇಳಿಕೆ ನೀಡಿರುವ ಕೇಜ್ರಿವಾಲ್, ಮತ ಒಡೆಯುವುದಕ್ಕೆ ಮಾತ್ರವೇ ಗುಜರಾತ್‌ಗೆ ಬಂದವರಲ್ಲ ಎಂಬುದನ್ನು ಮಾತ್ರ ಸದ್ಯ ಹೇಳಬಹುದು.

ರಾಷ್ಟ್ರೀಯ ಪಕ್ಷವಾಗುವತ್ತ ಆಪ್

2012ರಲ್ಲಿ ಸ್ಥಾಪನೆಯಾದ ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗುವತ್ತ ಸಾಗಿದೆ. 2013ರಲ್ಲಿ ದಿಲ್ಲಿ ಚುನಾವಣೆಯನ್ನು ಎದುರಿಸಿ ಎರಡನೇ ಅತಿದೊಡ್ಡ ಪಕ್ಷವಾಗಿ ಗಮನ ಸೆಳೆದದ್ದು ಮಾತ್ರವಲ್ಲ ಕಾಂಗ್ರೆಸ್ ಬೆಂಬಲದೊಂದಿಗೆ ಸರಕಾರವನ್ನೂ ರಚಿಸಿತು. ಆದರೆ, ಆ ಸರಕಾರದ ಆಯಸ್ಸು ಇದ್ದಿದ್ದು 49 ದಿನಗಳು ಮಾತ್ರ. ಬಳಿಕ 2015ರ ಚುನಾವಣೆಯಲ್ಲಿ ಭಾರೀ ಗೆಲುವು. 

ದಿಲ್ಲಿ ಗದ್ದುಗೆ. 2020ರ ಚುನಾವಣೆಯಲ್ಲಿ ಮತ್ತೆ ಗೆದ್ದು ದಿಲ್ಲಿಯನ್ನು ತನ್ನ ತೆಕ್ಕೆಯಲ್ಲೇ ಉಳಿಸಿಕೊಂಡಿತು. ಆನಂತರ ಪಂಜಾಬ್‌ನಲ್ಲೂ ಪ್ರಚಂಡ ಜಯ. ಗೋವಾದಲ್ಲೂ ತನ್ನ ಪ್ರಾಬಲ್ಯ ತೋರಿಸಬೇಕೆಂಬ ಆಪ್ ಉತ್ಸಾಹಕ್ಕೆ ಹಿನ್ನಡೆಯಾಯಿತಾದರೂ, ಗೋವಾದ ರಾಜ್ಯ ಪಕ್ಷ ಎಂಬ ಮಾನ್ಯತೆ ಚುನಾವಣಾ ಆಯೋಗದಿಂದ ಸಿಕ್ಕಿತು. 

ದಿಲ್ಲಿ, ಪಂಜಾಬ್ ಆನಂತರ ಗೋವಾದಲ್ಲಿಯೂ ಮಾನ್ಯತೆ ಸಿಕ್ಕಿರುವುದರಿಂದ, ಇನ್ನೊಂದು ರಾಜ್ಯದಲ್ಲಿ ಅಂಥ ಮಾನ್ಯತೆ ದೊರೆತರೆ ಆಪ್ ಅಧಿಕೃತವಾಗಿ ರಾಷ್ಟ್ರೀಯ ಪಕ್ಷವೆಂಬ ಮಾನ್ಯತೆ ಪಡೆಯಲಿದೆ. 

ಏಟು ತಿಂದ ಎಚ್ಚರದಲ್ಲಿದೆ ಬಿಜೆಪಿ

1995ರಲ್ಲಿ 121 ಸೀಟುಗಳನ್ನು ಗೆದ್ದು ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಗೆ ಅನಂತರದ ಚುನಾವಣೆಗಳೆಲ್ಲವೂ ಅನಾಯಾಸವಾಗಿದ್ದವು. 2002ರ ಚುನಾವಣೆಯಲ್ಲಂತೂ 127 ಸೀಟುಗಳನ್ನು ಗೆದ್ದಿತ್ತು. ದೊಡ್ಡ ಹೊಡೆತ ತಿಂದಿದ್ದು 2017ರ ಚುನಾವಣೆಯಲ್ಲಿ. ಆಗ ಗೆದ್ದಿದ್ದು 99 ಸೀಟುಗಳನ್ನಷ್ಟೇ. ಗುಜರಾತ್‌ನಲ್ಲಿ ಗಳಿಸಿದ್ದು-ಕಳೆದದ್ದು:

1995 - 121 ಸೀಟು

1998 - 117 ಸೀಟು

2002 - 127 ಸೀಟು

2007 - 116 ಸೀಟು

2012 - 115 ಸೀಟು

2017 - 99 ಸೀಟು

Similar News