ಅನಗತ್ಯವಾಗಿ ವಿವಾದ ಸೃಷ್ಟಿ ಮಾಡಿದ BJP, ಸತೀಶ್ ಜಾರಕಿಹೊಳಿ ಪರ ನಿಲ್ಲದ ಕಾಂಗ್ರೆಸ್: ಡಿಎಸ್‍ಎಸ್‍ ಖಂಡನೆ

Update: 2022-11-10 14:27 GMT

ಬೆಂಗಳೂರು, ನ. 10: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‍ಜಾರಕಿಹೊಳಿ ಹಿಂದೂ ಪದದ ಕುರಿತು ಹೇಳಿರುವ ಹೇಳಿಕೆಗೆ ಬಿಜೆಪಿ ಪಕ್ಷವು ಅನಗತ್ಯವಾಗಿ ವಿವಾದವನ್ನು ಸೃಷ್ಟಿಸಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್  ಪಕ್ಷವು (Indian National Congress) ಸತೀಶ್ ಜಾರಕಿಹೊಳಿ (Satish Jarkiholi) ಪರವಾಗಿ ನಿಲ್ಲಬೇಕಿತ್ತು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯು ಬೇಸರ ವ್ಯಕ್ತಪಡಿಸಿದೆ.

ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ದಲಿತ ಮುಖಂಡ ಡಾ. ಮೋಹನ್‍ರಾಜ್, ಸತೀಶ್ ಜಾರಕಿಹೊಳಿ ಯಾವುದೇ ಜಾತಿ ಮತ್ತು ಧರ್ಮವನ್ನು ಅವಹೇಳನವನ್ನು ಮಾಡಿಲ್ಲ. ಇತಿಹಾಸದ ಕೆಲ ಪುಸ್ತಕಗಳನ್ನು, ಪತ್ರಿಕೆಗಳನ್ನು ಉಲ್ಲೇಖಿಸಿ ಹಿಂದೂ ಪದದ ಬಗ್ಗೆ ತಿಳಿಸಿದ್ದಾರೆ. ಆದರೆ ಬಿಜೆಪಿ ಅದನ್ನು ರಾಜಕೀಯವಾಗಿ ಬಳಸಿಕೊಂಡು ಅನಗತ್ಯವಾಗಿ ವಿವಾದವನ್ನು ಸೃಷ್ಟಿಸಿದೆ.ಈ ವಿಚಾರದಲ್ಲಿ ಕಾಂಗ್ರೆಸ್‍ ಅವರಿಗೆ ಬೆಂಬಲವನ್ನು ನೀಡದಿದ್ದರೂ, ದಲಿತರು ಅವರಿಗೆ ಬೆಂಬಲವನ್ನು ನೀಡುತ್ತೇವೆ ಎಂದರು.

ಹಿಂದೂ ಎಂದರೆ ಯಾರು ಎನ್ನುವ ಜೊತೆಗೆ ಹಿಂದೂಗಳು ಎಂದರೆಯಾರು? ಎಂಬ ಪ್ರಶ್ನೆಯನ್ನು ಸತೀಶ್ ಜಾರಕಿಹೊಳಿ ಅವರು ಹಾಕಬೇಕಾಗಿತ್ತು. ಹಿಂದು-ಹಿಂದುತ್ವ ಎಂಬ ಹೆಸರಿನಲ್ಲಿ ಸಾವಿರಾರು ವರ್ಷಗಳಿಂದ ದಲಿತರನ್ನು, ಆದಿವಾಸಿಗಳನ್ನು, ಮಹಿಳೆಯರನ್ನು ವಂಚಿಸುತ್ತಲೇ ಬಂದಿದ್ದಾರೆಎಂದುಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಎಂದರೆ ‘ನಾವೆಲ್ಲಒಂದು’ ಎಂದು ಹೇಳುವವರು ತಮ್ಮ ಜೊತೆಯಲ್ಲಿಯೇ ಇರುವ ದೊಡ್ಡ ಸಮುದಾಯವನ್ನು ಜಾತಿ ಹೆಸರಿನಲ್ಲಿ ಹಲ್ಲೆ, ಅತ್ಯಾಚಾರ, ಸಾಮಾಜಿಕ ಬಹಿಷ್ಕಾರಗಳನ್ನು ಹಾಕುತ್ತಿದ್ದಾರೆ.ಹಾಗಾಗಿ ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ಬೆಂಬಲಿಸಿ, ಹಿಂದೂ ಪದದ ಕುರಿತು ಬಹಿರಂಗ ಚರ್ಚೆಗೆ ದಲಿತ ಸಂಘಟನೆಗಳು ಆಹ್ವಾನವನ್ನು ನೀಡುತ್ತವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಸಂಸ ರಾಜ್ಯ ಸಂಚಾಲಕ ಬಸವರಾಜ್ ಕೌತಾಳ್ ಮತ್ತು ದಸಂಸ ಮುಖಂಡ ಹೆಣ್ಣೂರು ಶ್ರೀನಿವಾಸ್‍ ಉಪಸ್ಥಿತರಿದ್ದರು.

Similar News