7 ನೂತನ ವಿವಿ ಸ್ಥಾಪನೆಗೆ ಶಿಕ್ಷಣ ವಿರೋಧಿ ಆದೇಶ ಹೊರಡಿಸಿದ ಸರಕಾರ: ಎಐಡಿಎಸ್‍ಓ ಖಂಡನೆ
ಬೆಂಗಳೂರು, ನ. 10: ರಾಜ್ಯದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳನ್ನು ವಿಭಜಿಸಿ, ಏಳು ನೂತನ ಮಾದರಿಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಣ ವಿರೋಧಿ ಆದೇಶವನ್ನು ರಾಜ್ಯ ಸರಕಾರವು ಹೊರಡಿಸಿದ್ದು, ಎಐಡಿಎಸ್‍ಓ ತೀವ್ರವಾಗಿ ಖಂಡಿಸಿದೆ.
ನೂತನ ಮಾದರಿ ವಿ.ವಿ.ಗಳು ಪ್ರಸ್ತುತ ಇರುವ ಸ್ನಾತಕೋತ್ತರ ಕೇಂದ್ರಗಳಲ್ಲಿ ಪಾಠ ನಿರ್ವಹಿಸಬೇಕು. ವಿ.ವಿ. ಸ್ಥಾಪನೆಗಾಗಿ ಯಾವುದೇ ಜಮೀನು ಖರೀದಿಸಬಾರದು. ಹೊಸ ಕಟ್ಟಡ ಕಟ್ಟಬಾರದು. ಮಾತೃ ವಿವಿಯಲ್ಲಿ ಈಗಾಗಲೇ ಇರುವ ಹುದ್ದೆಗಳನ್ನೇ ಮಾದರಿ ವಿವಿಗಳು ಬಳಸಿಕೊಳ್ಳಬೇಕು. ಹೊಸ ಹುದ್ದೆಗಳು ಸೃಷ್ಟಿಯಾಗಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ವಿವಿಗಳು ಡಿಜಿಟಲ್ ಹಾಗೂ ಕೌಶಲ್ಯಾಧಾರಿತ ಮಾದರಿಯಲ್ಲಿಕಾರ್ಯ ನಿರ್ವಹಿಸಬೇಕು. ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕವನ್ನೇ ವಿವಿಯ ನಿರ್ವಹಣೆಗೆ ಬಳಸಿಕೊಳ್ಳಬೇಕು ಎಂಬು ಹಲವು ಷರತ್ತುಗಳನ್ನು ವಿಧಿಸಲಾಗಿದೆ.ಈ ಪ್ರಕ್ರಿಯೆಯಲ್ಲಿ ವಿವಿ ನಡೆಸಲು ಸಾಧ್ಯವೇ, ಕಿಂಚಿತ್ತೂ ಸೌಕರ್ಯವಿಲ್ಲದೆ ಸೃಷ್ಟಿಯಾಗುವ ನೂತನ ಮಾದರಿಯು ವಿವಿಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದೆ.
‘ಕಲಿಯುತ ಹಣ ಪಡಿ' ಎಂದು ಹೇಳುತ್ತಾ, ಅಂತಿಮವಾಗಿ ‘ಕಲಿಯಲು ಹಣಕೊಡಿ' ಎಂದು ನೂತನ ವಿವಿಗಳ ಖಾಸಗೀಕರಣಕ್ಕೆಸರಕಾರ ಈಗಲೇ ಮುನ್ನುಡಿ ಬರೆಯುತ್ತಿದೆ. ವಿವಿಗಳು ಸ್ವಯಂ ನಿರ್ವಹಣೆ ಮಾಡಿಕೊಳ್ಳಬೇಕು.ವಿವಿಗಳಿಗೆ ಆರ್ಥಿಕ ನೆರವು ನೀಡುವತನ್ನ ಮೂಲಭೂತ ಜವಾಬ್ದಾರಿಯಿಂದ ಸರಕಾರ ನುಣುಚಿಕೊಂಡಿದೆ. ಹೊಸದನ್ನೇನು ಸೃಷ್ಟಿ ಮಾಡುವುದಿಲ್ಲ, ಇರುವುದನ್ನೂ ಮಾರಿಕೊಳ್ಳುತ್ತೇವೆ ಎನ್ನುವ ನೀತಿಯನ್ನು ಸರಕಾರ ಅನುಸರಿಸಿದೆ ಎಂದು ಟೀಕಿಸಿದೆ.
ವಿವಿಗಳು ಜ್ಞಾನದ ಭಂಡಾರಗಳಾಗಬೇಕು.ಪ್ರಜಾತಾಂತ್ರಿಕ, ವೈಜ್ಞಾನಿಕ ಆಲೋಚನೆಗಳ ಆಗರವಾಗಬೇಕು. ವಿ.ವಿ.ಗಳ ಆರ್ಥಿಕ ನಿರ್ವಹಣೆ ಸರಕಾರದ ಜವಾಬ್ದಾರಿಯಾಗಬೇಕು ಎಂಬ ಸ್ವಾತಂತ್ರ್ಯ ಹೋರಾಟಗಾರರು, ಮಹಾನ್ ನವೋದಯ ಚಿಂತಕರ ಆಶಯಗಳಿಗೆ ರಾಜ್ಯ ಬಿಜೆಪಿ ಸರಕಾರ ಕೊಳ್ಳಿ ಇಟ್ಟಿದೆ.ವಾಸ್ತವದಲ್ಲಿ ಸರಕಾರ 7 ವಿವಿಗಳನ್ನು ಸೃಷ್ಠಿ ಮಾಡುತ್ತಿಲ್ಲ. ಬದಲಿಗೆ, 7 ವಿವಿಗಳನ್ನು ಮಾರುತ್ತಿದ್ದಾರೆ ಎಂದು ಖಂಡಿಸಿದೆ.
ಕೂಡಲೇ ಸರಕಾರ ಈ ವಿದ್ಯಾರ್ಥಿ ವಿರೋಧಿ, ಶಿಕ್ಷಣ ವಿರೋಧಿ ಆದೇಶವನ್ನು ಹಿಂಪಡೆಯಬೇಕು.ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಶಿಕ್ಷಣ ವಿರೋಧಿ ನೀತಿಯನ್ನು ಸರಕಾರ ತಂದಾಗ, ಅದರ ವಿರುದ್ಧ ಬಲಿಷ್ಠ ಹೋರಾಟವನ್ನು ಕಟ್ಟಲು ರಾಜ್ಯದ ವಿದ್ಯಾರ್ಥಿಗಳು, ಶಿಕ್ಷಕರು, ಜನ ಸಾಮಾನ್ಯರು ಸಜ್ಜಾಗಬೇಕು ಎಂದು ಕರೆ ನೀಡಿದೆ.