ಹೆಬ್ರಿ ಹಾಸ್ಟೆಲ್‌ನಲ್ಲಿ ಬೆಂಕಿ ಅವಘಡ: ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Update: 2022-11-11 14:46 GMT

ಹೆಬ್ರಿ: ವಿವೇಕ ನಿಲಯ ಜಿಲ್ಲಾ ಪರಿಶಿಷ್ಟ ಪಂಗಡ ವರ್ಗದ ಕಿರಿಯ ಪ್ರಾಥಮಿಕ ಆಶ್ರಮ ಶಾಲೆಯ ಹಾಸ್ಟೆಲ್ ನಲ್ಲಿ ಬುಧವಾರ ಸಂಜೆ ವೇಳೆ ಸಂಭವಿಸಿದ ಅಗ್ನಿ ಅವಘಡದಿಂದ ನಾಲ್ವರು ವಿದ್ಯಾರ್ಥಿಗಳು ತೀವ್ರ ಗಾಯ ಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗಾಯಗೊಂಡವರನ್ನು ನಾಲ್ಕನೇ ತರಗತಿಯ ವಿದ್ಯಾರ್ಥಿಗಳಾದ ಶ್ರಿನಿವಾಸ್ ಹಾಗೂ ಅಮರೀಶ್, ಐದನೆ ತರಗತಿಯ ವಿನೋದ್ ಮತ್ತು ಮನೋಜ್ ಎಂದು ಗುರುತಿಸಲಾಗಿದೆ. ಇವರೆಲ್ಲರು ರಾಯಚೂರು ಮೂಲದ ವಿದ್ಯಾರ್ಥಿಗಳಾಗಿದ್ದಾರೆ.

ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ ಸಾವಿತ್ರಿ ಆಟ ಆಡುತ್ತಿರುವ ಈ ಮಕ್ಕಳನ್ನು ಕರೆದು ಕಸಕ್ಕೆ ಸ್ಯಾನಿಟೈಸರ್ ಹಾಕಿ ಬೆಂಕಿಯಿಂದ ಸುಡುವಂತೆ ತಿಳಿಸಿದರು. ಅದರಂತೆ ಮಕ್ಕಳು  ಹಾಸ್ಟೆಲ್ ನ ಕಂಪೌಂಡ್‌ನ ಬದಿಯಲ್ಲಿ ಕಸವನ್ನು ಹಾಕಿ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿದ್ದರು.

ಈ ವೇಳೆ ಮಕ್ಕಳ ಕೈಯಲ್ಲಿದ್ದ ಸ್ಯಾನಿಟೈಸರ್ ಡಬ್ಬಿಗೆ ಬೆಂಕಿ ಹಿಡಿದು ಅದು ಸ್ಪೋಟಗೊಂಡಿತ್ತೆನ್ನಲಾಗಿದೆ. ಬೆಂಕಿಯ ಕಿಡಿಗಳು ಮಕ್ಕಳ ಮೈಮೇಲೆ ಬಿದ್ದ ಪರಿಣಾಮ ಶ್ರಿನಿವಾಸ್, ಅಮರೇಶ, ವಿನೋದ್ ಮತ್ತು ಮನೋಜ್ಗೆ ಸುಟ್ಟ ಗಾಯಗಳಾಗಿವೆ ಎಂದು ದೂರಲಾಗಿದೆ. ಗಾಯಗೊಂಡಿರುವ ಮಕ್ಕಳ ಪೈಕಿ ಓರ್ವ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ, ಇಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಮತ್ತು ಓರ್ವ ಹೆಬ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆಗೆ  ಹಾಸ್ಟೆಲ್ ಅಡುಗೆ ಕೆಲಸದ ಸಾವಿತ್ರಿ ಮತ್ತು ಹಾಸ್ಟೇಲ್ ವಾರ್ಡನ್ ಅವರ ನಿರ್ಲಕ್ಷವೇ ಕಾರಣ ಎಂದು ಗಾಯಾಳು ಶ್ರೀನಿವಾಸ ಅವರ ತಾಯಿ ಕಮಲಾಕ್ಷಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News