ಈ.ಡಿ.ಅಧಿಕಾರಿಗಳ ಚಿತ್ರಹಿಂಸೆಯಿಂದ ವ್ಯಕ್ತಿಯ ಕೇಳುವ ಶಕ್ತಿ ನಷ್ಟ: ಆರೋಪ

Update: 2022-11-11 15:34 GMT

ಹೈದರಾಬಾದ್,ನ.11: ದಿಲ್ಲಿ ಅಬಕಾರಿ ನೀತಿ  ಹಗರಣ ಪ್ರಕರಣದಲ್ಲಿ ವಿಚಾರಣೆಗೊಳಗಾಗಿದ್ದ ವ್ಯಕ್ತಿಯೋರ್ವರು ಜಾರಿ ನಿರ್ದೇಶನಾಲಯ (ಈ.ಡಿ.)ದ ಅಧಿಕಾರಿಗಳು ತನಗೆ ಚಿತ್ರಹಿಂಸೆ ನೀಡಿದ್ದರು ಮತ್ತು ಬಲವಂತದಿಂದ ತನ್ನಿಂದ ಹೇಳಿಕೆಗಳನ್ನು ಪಡೆದಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಟ್ರೈಡಂಟ್ ಚೆಮ್ಫಾರ್ ಲಿ(Trident Chemfar Ltd).ನ ಚಿಲ್ಲರೆ ಮದ್ಯ ವ್ಯವಹಾರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎರ್ಲ ಚಂದನ್(CHANDAN) ಶುಕ್ರವಾರ ತಾನು ಈ.ಡಿ.ಗೆ ನೀಡಿದ್ದ ಹೇಳಿಕೆಗಳನ್ನು ಹಿಂಪಡೆದುಕೊಂಡಿದ್ದು,ಅವುಗಳನ್ನು ತನ್ನಿಂದ ಬಲವಂತದಿಂದ ಪಡೆಯಲಾಗಿತ್ತು ಎಂದು ಹೇಳಿದ್ದಾರೆ.

‘ನನ್ನ ಒಂದು ಕಿವಿಯ ಶ್ರವಣಶಕ್ತಿ ಸಂಪೂರ್ಣವಾಗಿ ಮತ್ತು ಇನ್ನೊಂದು ಕಿವಿಯ ಶ್ರವಣಶಕ್ತಿ ಭಾಗಶಃ ನಷ್ಟಗೊಂಡಿದೆ. ನನ್ನಿಂದ ಸುಳ್ಳು ಹೇಳಿಕೆಗಳನ್ನು ಹೊರಡಿಸಲು,ದಾಖಲೆಗಳಿಗೆ ನನ್ನ ಸಹಿ ಪಡೆಯಲು ಮತ್ತು ವಾಸ್ತವಕ್ಕೆ ವಿರುದ್ಧವಾದ ಕೆಲವು ವಿಷಯಗಳನ್ನು ಹೇಳುವಂತೆ ಈ.ಡಿ.ಅಧಿಕಾರಿಗಳು ನನ್ನನ್ನು ತೀವ್ರವಾಗಿ ಥಳಿಸಿದ್ದರು ಮತ್ತು ಹಿಂಸಿಸಿದ್ದರು’ ಎಂದು ಚಂದನ್ ಈ.ಡಿ. ಮತ್ತು ಅದರ ಹಿರಿಯ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಶ್ರವಣಶಕ್ತಿ ನಷ್ಟವನ್ನು ಸಮರ್ಥಿಸುವ ವೈದ್ಯಕೀಯ ವರದಿಯನ್ನೂ ಅವರು ಈ.ಡಿ.ಗೆ ಒದಗಿಸಿದ್ದಾರೆ.

ತಾನು 2021ರಲ್ಲಿ ಉಪಾಧ್ಯಕ್ಷ (ಕಾರ್ಪೊರೇಟ್ ಸಂಪರ್ಕಗಳು)ನಾಗಿ  ಅರಬಿಂದೋ ರಿಯಾಲ್ಟಿ ಮತ್ತು ಮೂಲಸೌಕರ್ಯ ಸೇರಿದ್ದೆ ಮತ್ತು ಬಳಿಕ ಅದೇ ಆಡಳಿತದಡಿಯ ಟ್ರೈಡಂಟ್ ಚೆಮ್ಫಾರ್ ಲಿ.ನ ಚಿಲ್ಲರೆ ಮದ್ಯ ವ್ಯವಹಾರದ ಮೇಲ್ವಿಚಾರಣೆಗಾಗಿ ತನ್ನನ್ನು ದಿಲ್ಲಿಗೆ ವರ್ಗಾಯಿಸಲಾಗಿತ್ತು ಎಂದು ಚಂದನ್ ಹೇಳಿದರು.

Similar News